ಕೊಪ್ಪಳ(ಮಾ.04): ಕೈಚೆಲ್ಲಿ ಹೋಗಿದ್ದ ಉಡಾನ್‌ ಯೋಜನೆಗೆ ಮತ್ತೆ ಜೀವ ಬಂದಿದೆ. ಹಿರಿಯರ ಸತತ ಪ್ರಯತ್ನ ಮತ್ತು ಜಿಲ್ಲೆಯ ಹಿತಕ್ಕಾಗಿ ಉಡಾನ್‌ ಜಾರಿಗೆ ಎಂಎಸ್‌ಪಿಎಲ್‌ ಕಂಪನಿ ಸಕಾರಾತ್ಮಕವಾಗಿ ಸ್ಪಂದನೆ ಮಾಡಿದೆ. ಸಭೆಯಲ್ಲಿ ಚರ್ಚೆಯಾದಂತೆ ತನ್ನ ಪ್ರಸ್ತಾವನೆಯನ್ನು ಮಾ. 15ರೊಳಗಾಗಿ ಸಲ್ಲಿಸುವುದಾಗಿ ಕಂಪನಿಯ ಪ್ರತಿನಿಧಿ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಅವರಿಗೆ ತಿಳಿಸಿದ್ದಾರೆ.

ಹಿರಿಯ ನ್ಯಾಯವಾದಿ ಆರ್‌.ಬಿ. ಪಾನಘಂಟಿ, ಆಸಿಫ್‌ ಅಲಿ ಸೇರಿದಂತೆ ಅನೇಕರು ಈ ಕುರಿತು ವೇದಿಕೆಯನ್ನೆ ರಚನೆ ಮಾಡಿ ಹೋರಾಟಕ್ಕೆ ಮುಂದಾಗಿದ್ದರು. ಇದರ ಪೂರ್ವಭಾವಿಯಾಗಿ ಒಂದೆರಡು ಸಭೆಗಳನ್ನು ನಡೆಸಿದ್ದರು. ಇದಾದ ಮೇಲೆ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಅವರು ಸಹ ಈ ಕುರಿತು ಸಭೆಯನ್ನು ನಡೆಸಿದ್ದರು. ಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಗಿತ್ತು. ಈಗ ನೂತನ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬೇಕು ಎನ್ನುವುದು ಅಂದುಕೊಂಡಷ್ಟು ಸುಲಭ ಅಲ್ಲ. ಈಗಾಗಲೇ ಇರುವ ಎಂಎಸ್‌ಪಿಎಲ್‌ ಕಂಪನಿಯ ವಿಮಾನ ತಂಗುದಾಣವನ್ನೇ ಅವರ ಮನವೊಲಿಸಿ ಒಪ್ಪಿಸಬೇಕು ಎನ್ನುವ ಕುರಿತು ಒಟ್ಟಾಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಈ ಕುರಿತು ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ ಅವರು ಎಂಎಸ್‌ಪಿಎಲ್‌ ಕಂಪನಿಗೆ ಶುಕ್ರವಾರದೊಳಗಾಗಿ ನಿಲುವು ಪ್ರಕಟ ಮಾಡಬೇಕು. ಈ ಕುರಿತು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿ, ನಿಮ್ಮ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದ್ದರು. ಅದಕ್ಕೆ ಎಂಎಸ್‌ಪಿಎಲ್‌ ಕಂಪನಿ ಪ್ರತಿನಿಧಿ ಅವರು ಸಕಾರಾತ್ಮಕವಾಗಿಯೇ ಸ್ಪಂದನೆ ಮಾಡಿದ್ದರು. ಅದರಂತೆ ಈಗ ಜಿಲ್ಲಾಧಿಕಾರಿಗಳೊಂದಿಗೆ ಎಂಎಸ್‌ಪಿಎಲ್‌ ಮಾಲೀಕರು ಮಾತುಕತೆಯಾಡಿದ್ದಾರೆ. ಉಡಾನ್‌ ಯೋಜನೆಗೆ ಸಹಕಾರ ನೀಡಲು ನಾವು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

'ಕೊಪ್ಪಳ ಜಿಲ್ಲೆಗೆ ವಿಮಾನ ನಿಲ್ದಾಣ ಬೇಕೆ ಬೇಕು'

ನಾವು ಉಡಾನ್‌ ಜಾರಿ ಮಾಡಲು ಅಗತ್ಯತೆಗಳ ಪ್ರಸ್ತಾವನೆಯನ್ನು ಮಾ. 15ರೊಳಗಾಗಿ ಸಲ್ಲಿಸುವುದಾಗಿ ಹೇಳಿದ್ದಾರೆ. ಅವರ ಪ್ರಸ್ತಾವನೆ ಸಲ್ಲಿಸುತ್ತಿದ್ದಂತೆ ಜಿಲ್ಲಾಮಟ್ಟದಲ್ಲಿಯೇ ಇತ್ಯರ್ಥ ಮಾಡುವಂತವುಗಳನ್ನು ಇತ್ಯರ್ಥ ಮಾಡಿ. ಸರ್ಕಾರದಿಂದ ಇತ್ಯರ್ಥವಾಗಬೇಕಾಗಿರುವುದನ್ನು ಇತ್ಯರ್ಥ ಮಾಡಿಸುವ ಮೂಲಕ ಉಡಾನ್‌ ಜಾರಿಗೆ ಪ್ರಯತ್ನ ಮಾಡಬೇಕಾಗಿದೆ. ಆದರೆ, ಮಾ. 15ಕ್ಕೆ ಎಂಎಸ್‌ಪಿಎಲ್‌ ಕಂಪನಿಯಿಂದ ಸಲ್ಲಿಕೆಯಾಗುವ ಪ್ರಸ್ತಾವನೆ ಬಂದ ನಂತರ ಇದು ಇನ್ನು ಪಕ್ಕಾ ಆಗಲಿದೆ. ಅವರು ಸಲ್ಲಿಸುವ ಪ್ರಸ್ತಾವನೆಗಳಲ್ಲಿನ ಬೇಡಿಕೆಯನ್ನು ಪೂರೈಸಲು ಸಾಧ್ಯವೇ ಎನ್ನುವುದೇ ಇರುವ ಪ್ರಶ್ನೆ. ಹೀಗಾಗಿ ಅವರ ಪ್ರಸ್ತಾವನೆಯ ಮೇಲೆ ಎಲ್ಲವೂ ನಿಂತಿದೆ.

ಜಾರಿಯಾಗುವ ವಿಶ್ವಾಸ

4 ವರ್ಷಗಳ ಹಿಂದೆಯೇ ಈ ಪ್ರಯತ್ನವಾಗಿದ್ದರೇ ಇಷ್ಟೊತ್ತಿಗಾಗಲೇ ಕೊಪ್ಪಳದಿಂದ ವಿಮಾನಗಳು ಹಾರಾಡುತ್ತಿದ್ದವು. ನಾನಾ ಕಾರಣಗಳಿಗಾಗಿ ಅದು ಕಾರ್ಯಗತವಾಗಲೇ ಇಲ್ಲ. ಈಗಲಾದರೂ ಜಾರಿಯಾಗುವ ವಿಶ್ವಾಸ ಮೂಡಿದೆ ಎನ್ನುವುದೇ ಸಮಾಧಾನಕರ ಸಂಗತಿ.

ಉಡಾನ್‌ ಜಾರಿಗೆ ಎಂಎಸ್‌ಪಿಎಲ್‌ ಸಕಾರಾತ್ಮಕವಾಗಿಯೇ ಸ್ಪಂದನೆ ಮಾಡಿದ್ದು, ಮಾ. 15ರೊಳಗಾಗಿ ಪ್ರಸ್ತಾವನೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. ಹೀಗಾಗಿ ಇದೊಂದು ರೀತಿಯಲ್ಲಿ ಆಶಾಭಾವನೆ ಮೂಡಿದೆ ಎಂದು ಕೊಪ್ಪಳ ಡಿಸಿ ವಿಕಾಸ್‌ ಕಿಶೋರ ಸುರಳ್ಕರ್‌ ತಿಳಿಸಿದ್ದಾರೆ.