ಸ್ಚಚ್ಛ ಭಾರತ ಯೋಜನೆ ಮೂಲಕ ಮಂಗಳೂರಿನಲ್ಲಿ ವೈಜ್ಞಾನಿಕ ಕಸ ವಿಲೇವಾರಿ  ಎಂಆರ್‌ಪಿಎಲ್‌ ಪ್ರಾಯೋಗಿಕ ಸಿದ್ಧತೆ *ರಾಮಕೃಷ್ಣ ಮಠ ಮಿಷನ್‌ ಮಾರ್ಗದರ್ಶನ, ಇನ್ನು ಎಂಆರ್‌ಪಿಎಲ್‌ನಲ್ಲೇ ಕಸಕ್ಕೆ ಮುಕ್ತಿ

ವಿಶೇಷ ವರದಿ

ಮಂಗಳೂರು (ಜು.20): ಸ್ವಚ್ಛ ಭಾರತ್‌ ಮಿಷನ್‌ ಮೂಲಕ ಸ್ವಚ್ಛ ಮಂಗಳೂರು ಅಭಿಯಾನ ನಡೆಸಿದ ಮಂಗಳೂರಿನ ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಎಂಆರ್‌ಪಿಎಲ್‌(ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌) ಕಂಪನಿ ವೈಜ್ಞಾನಿಕ ಕಸ ವಿಲೇವಾರಿ ವಿಧಾನ ಅಳವಡಿಸಿಕೊಳ್ಳಲು ಮುಂದಾಗಿದೆ. ರಾಮಕೃಷ್ಣ ಮಠ ಅಧೀನದ ಮಂಗಳಾ ರಿಸೋರ್ಸ್‌ ಮೆನೇಜ್‌ಮೆಂಟ್‌ ಪ್ರಾಯೋಗಿಕವಾಗಿ ಘನತ್ಯಾಜ್ಯ ವಿಲೇವಾರಿ ಕೈಗೆತ್ತಿಕೊಳ್ಳುತ್ತಿದೆ.

ಎಂಆರ್‌ಪಿಎಲ್‌(MRPL)ನಲ್ಲಿ ಉದ್ಯೋಗಿಗಳು ಹಾಗೂ ಭದ್ರತಾ ಸಿಬ್ಬಂದಿ ಸೇರಿ ಸುಮಾರು 100ಕ್ಕೂ ಅಧಿಕ ಕುಟುಂಬಗಳು(Family) ಇವೆ. ರಿಫೈನರಿ, ಆಡಳಿತ ಕಚೇರಿ, ವೇರ್‌ಹೌಸ್‌, ಕ್ಯಾಂಟೀನ್‌ ಹೀಗೆ ನಾನಾ ಕಡೆಗಳಲ್ಲಿ ವಿವಿಧ ತ್ಯಾಜ್ಯ ಪ್ರತಿನಿತ್ಯ ಸಂಗ್ರಹವಾಗುತ್ತದೆ. ಹಸಿ ಹಾಗೂ ಘನ ತ್ಯಾಜ್ಯ ಸೇರಿ ದಿನಂಪ್ರತಿ 2ರಿಂದ 3 ಟನ್‌ ತ್ಯಾಜ್ಯ ಸಂಗ್ರಹವಾಗುತ್ತದೆ. ಇಲ್ಲಿನ ಘನತ್ಯಾಜ್ಯವನ್ನು ಇಲ್ಲಿವರೆಗೆ ಮಂಗಳೂರಿನ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ಗೆ ತಂದು ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಹೊರಗಿನ ತ್ಯಾಜ್ಯವನ್ನು ಅಲ್ಲಲ್ಲೇ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಡಳಿತ ಈ ಹಿಂದೆಯೇ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್‌ನಲ್ಲೇ ಘನತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಲಾಗುತ್ತಿದೆ.

ಮುಖ್ಯಮಂತ್ರಿಗಳು ಬಂದು ಹೋದರೂ ಇನ್ನೂ ಪರಿಹಾರ ವ್ಯವಸ್ಥೆ ಆಗಿಲ್ಲ: ಹರಿಪ್ರಸಾದ್‌ ಟೀಕೆ

ಸದ್ಯ ಪ್ರಾಯೋಗಿಕ ಜಾರಿ: ರಾಮಕೃಷ್ಣ ಮಿಷನ್‌ನ(Ramakrishna Mission)ಸ್ವಚ್ಛ ಮಂಗಳೂರು(Swachha Mangalore) ರೂವಾರಿ ಸ್ವಾಮಿ ಏಕಗಮ್ಯಾನಂದ(Ekagamyananda Swamij) ಅವರ ಮಾರ್ಗದರ್ಶನದಲ್ಲಿ ಮಂಗಳಾ ರಿಸೋರ್ಸ್‌ ಮೆನೇಜ್‌ಮೆಂಟ್‌(Resource management) ಸಿಬ್ಬಂದಿ ಈಗ ಎಂಆರ್‌ಪಿಎಲ್‌ನಲ್ಲಿ ಘನತ್ಯಾಜ್ಯ ವೈಜ್ಞಾನಿಕ ವಿಲೇವಾರಿಗೆ ಮುಂದಾಗಿದ್ದಾರೆ.

ಕಳೆದ ಒಂದು ವಾರದಿಂದ ಎಂಆರ್‌ಪಿಎಲ್‌ಗೆ ತೆರಳಿ ಸಿಬ್ಬಂದಿ ಕಾಲನಿ, ಕಚೇರಿ, ಕ್ಯಾಂಟಿನ್‌ಗಳಲ್ಲಿ ಹಸಿ ಹಾಗೂ ಒಣ ಕಸ ವಿಭಜಿಸಿ ಸಂಗ್ರಹಿಸಿ ನೀಡುವಂತೆ ತಿಳಿವಳಿಕೆ ನೀಡಿದ್ದಾರೆ. ಎಂಆರ್‌ಪಿಎಲ್‌ನಲ್ಲಿ ಕಸ ವಿವೇವಾರಿ ಮಾಡುವ ಸಿಬ್ಬಂದಿಗೆ ಕಸ ಸಂಗ್ರಹ ಬಗ್ಗೆ ತರಬೇತಿ ನೀಡಿದ್ದಾರೆ. ಎಂಆರ್‌ಪಿಎಲ್‌ನಲ್ಲಿ ಕಸ ವಿಲೇವಾರಿ ಕಾರ್ಮಿಕರೇ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲಿದ್ದು, ಸದ್ಯದ ಮಟ್ಟಿಗೆ ಪ್ರಾಯೋಗಿಕವಾಗಿ ಕಸ ಸಂಗ್ರಹ ನಡೆಯಲಿದೆ. ಹಸಿ ಕಸವನ್ನು ಎಂಆರ್‌ಪಿಎಲ್‌ನಲ್ಲಿ ಇರುವ ಬಯೋ ಪ್ಲಾಂಟ್‌ನಲ್ಲಿ ವಿಲೇವಾರಿ ಮಾಡಲಾಗುತ್ತದೆ. ಒಣ ಕಸವನ್ನು ಮಂಗಳಾ ರಿಸೋರ್ಸ್‌ ಮೆನೇಜ್‌ಮೆಂಟ್‌ ಸಂಘಟನೆ ಹೊರಗೆ ಫ್ಯಾಕ್ಟರಿಗಳಿಗೆ ಮರು ಬಳಕೆಗೆ ಕಳುಹಿಸಲಿದೆ. ಎಂಆರ್‌ಪಿಎಲ್‌ನಲ್ಲೇ ಈ ಮೂಲಕ ಎಂಆರ್‌ಪಿಎಲ್‌ ಸಂಪೂರ್ಣ ವೈಜ್ಞಾನಿಕ ವಿಧಾನದಲ್ಲಿ ಕಸ ವಿಲೇವಾರಿಗೆ ತೆರೆದುಕೊಳ್ಳುವಂತೆ ನೋಡಿಕೊಳ್ಳಲಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಂಆರ್‌ಪಿಎಲ್‌ನಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಪ್ಲ್ಯಾಂಟ್‌ ರೂಪುಗೊಳ್ಳಲು ಬಾಕಿ ಇದೆ.

ಏರ್‌ಪೋರ್ಟ್‌ನಲ್ಲಿ ಮಂಕಿ ಪಾಕ್ಸ್‌ ಕಟ್ಟೆಚ್ಚರ: ಡಿಸಿ ಸೂಚನೆ

ಮಂಗಳಾ ರಿಸೋರ್ಸ್‌ ಮೆನೇಜ್‌ಮೆಂಟ್‌ ಈಗಾಗಲೇ ಉಪ್ಪಿನಂಗಡಿ, ಕಾರ್ಕಳ ಹಾಗೂ ಕಟೀಲಿನಲ್ಲಿ ಘನತಾಜ್ಯ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ನಡೆಸುತ್ತಿದೆ. ಕಾರ್ಕಳದ 45 ಗ್ರಾಮ ಪಂಚಾಯ್ತಿಗಳಲ್ಲಿ ಮಾದರಿ ಕಸ ವಿಲೇವಾರಿ ನಡೆಸುತ್ತಿದ್ದು, ಅಲ್ಲಿಯೇ ಹಸಿ ಕಸ ವಿಲೇವಾರಿ ಪ್ಲ್ಯಾಂಟ್‌ನ್ನು ಹೊಂದಿದೆ. ಕಟೀಲಿನಲ್ಲಿ ಕೂಡ ವೈಜ್ಞಾನಿಕ ವಿಧಾನದಲ್ಲಿ ಕಸ ವಿಲೇವಾರಿ ನಡೆಸಲಾಗುತ್ತಿದೆ.

ಎಂಆರ್‌ಪಿಎಲ್‌ನಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಡಿಪಿಆರ್‌ ಸಲ್ಲಿಸಿದ್ದು, ಅನುಮೋದನೆ ಬಾಕಿ ಇದೆ. ಅಲ್ಲಿವರೆಗೆ ಪ್ರಾಯೋಗಿಕ ನೆಲೆಯಲ್ಲಿ ಕಸ ಸಂಗ್ರಹ, ವಿಲೇವಾರಿ ನಡೆಸಲಾಗುವುದು. ನಮ್ಮ ಕೆಲವು ಸಿಬ್ಬಂದಿಯೂ ಅಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

-ದಿಲ್‌ರಾಜ್‌ ಆಳ್ವ, ವ್ಯವಸ್ಥಾಪಕ ನಿರ್ದೇಶಕ, ಮಂಗಳಾ ರಿಸೋರ್ಸ್‌ ಮೆನೇಜ್‌ಮೆಂಟ್‌

ಎಂಆರ್‌ಪಿಎಲ್‌ನಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸಕ್ತ ಪ್ರಾಯೋಗಿಕವಾಗಿ ಘನತ್ಯಾಜ್ಯ ವಿಲೇವಾರಿ ನಡೆಸಲಾಗುವುದು. ಅಂತಿಮ ಒಪ್ಪಂದ ಬಾಕಿ ಇದೆ. ವೈಜ್ಞಾನಿಕ ವಿಧಾನದಿಂದ ಪರಿಸರ ಸ್ವಚ್ಛತೆ, ಕಾಳಜಿ ಬಗ್ಗೆ ನಿಗಾ ವಹಿಸಲು ಸುಲಭವಾಗಲಿದೆ. ಎಂಆರ್‌ಪಿಎಲ್‌ ಪ್ಲ್ಯಾಂಟ್‌ನಲ್ಲೇ ಕಸ ವಿಲೇವಾರಿಗೊಳ್ಳುವುದರಿಂದ ಪಚ್ಚನಾಡಿ ಯಾರ್ಡ್‌ಗೆ ಕಸ ಸಾಗಿಸುವ ಪ್ರಮೇಯ ಇನ್ನಿಲ್ಲ.

-ಎಚ್‌.ಪಿ.ಮಂಜುನಾಥ್‌, ಜನರಲ್‌ ಮೆನೇಜರ್‌(ಆಡಳಿತ)ಎಂಆರ್‌ಪಿಎಲ್‌