ಬೆಂಗಳೂರು(ಮೇ.15): ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಮಹಿಳಾ ಉದ್ಯಮಿಗಳ ನೆರವಿಗೆ ಪ್ರತ್ಯೇಕ ನೀತಿ, ಪ್ಯಾಕೇಜ್‌ ಘೋಷಣೆ ಮಾಡಬೇಕು, ಈ ಹಿಂದೆ ಪಡೆದಿರುವ ಸಾಲದ ಮೇಲಿನ ಬಡ್ಡಿಯನ್ನೂ ಸಹ ಕಡಿಮೆ ಮಾಡಬೇಕು, ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಬೇಕು, ದೇಶಕ್ಕೊಂದೇ ಕಾರ್ಮಿಕ ಕಾನೂನು ಜಾರಿ ತರುವ ಅಗತ್ಯವಿದೆ ಎಂದು ಮಹಿಳಾ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನೆರವಿಗೆ ಕೇಂದ್ರ ಸರ್ಕಾರ ವಿವಿಧ ಪರಿಹಾರ ಕ್ರಮ ಘೋಷಣೆ ಹಿನ್ನೆಲೆಯಲ್ಲಿ ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆ, ಅವರ ಸಲಹೆಗಳನ್ನು ಕೇಂದ್ರ ಸರ್ಕಾರದ ಗಮನ ಸೆಳೆದು ಪರಿಹರಿಸುವ ಉದ್ದೇಶದಿಂದ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು ಗುರುವಾರ ‘ರಿಬೂಟಿಂಗ್‌ ಇಂಡಿಯಾ: ವುಮನ್‌ ಎಂಟರ್‌ಪ್ರೆನ್ಯೂ​ರ್ಸ್‌’ ವಿಷಯ ಕುರಿತು ನಡೆಸಿದ ವಿಡಿಯೋ ಸಂವಾದದಲ್ಲಿ ಮಹಿಳಾ ಉದ್ಯಮಿಗಳು ಹತ್ತು ಹಲವು ಸಲಹೆಗಳನ್ನು ನೀಡಿದರು.

 

 ಟ್ವೀಟ್‌ ಮೂಲಕ ಬಿಬಿಎಂಪಿಗೆ ಬಿಸಿ ಮುಟ್ಟಿಸಿದ್ದ ಆರ್‌ಸಿ

ಸಂವಾದದ ಆರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ರಾಜೀವ್‌ ಚಂದ್ರಶೇಖರ್‌, ಲಾಕ್‌ಡೌನ್‌ನಿಂದಾಗಿ ಕೈಗಾರಿಕೆ, ವ್ಯಾಪಾರ ವಹಿವಾಟು ಸೇರಿದಂತೆ ಬಹುತೇಕ ಎಲ್ಲ ಚಟುವಟಿಕೆ ಸ್ಥಗಿತಗೊಂಡಿದೆ. ಉದ್ಯಮಗಳು ತೀವ್ರ ಸಂಕಷ್ಟದಲ್ಲಿವೆ, ಇಂತಹ ಸಂದರ್ಭದಲ್ಲಿ ದೇಶದ ಆರ್ಥಿಕತೆ ನಿಧಾನವಾಗಿ ಆರಂಭವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಿಸಿದ್ದಾರೆ. ಬರುವ ದಿನಗಳಲ್ಲಿ ಪೂರೈಕೆ ಸರಪಳಿ ಬದಲಾಗಲಿದೆ. ಚೀನಾ ಅವಲಂಬನೆ ಕಡಿಮೆ ಮಾಡಿ ಸ್ವದೇಶಿ ಕಡೆಗೆ ಹೆಚ್ಚು ಒತ್ತು ನೀಡುವ ಅಗತ್ಯತೆಯನ್ನು ಪ್ರಧಾನಿ ತಿಳಿಸಿದ್ದಾರೆ ಎಂದರು.

ಚೀನಾದಿಂದ ಹೊರಬರಲು ಮುಂದಾಗಿರುವ ಎಲ್ಲ ಉದ್ಯಮಗಳು ಭಾರತಕ್ಕೆ ಬಂದೇ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ನಮ್ಮ ಉತ್ಪನ್ನಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರಬೇಕಾಗಿದೆ ಎಂದರು. ಸರ್ಕಾರ ಎಂಎಸ್‌ಎಂಇಗಳಿಗೆ ಘೋಷಿಸಿರುವ ಪ್ಯಾಕೇಜ್‌ ಲಾಭವನ್ನು ವಿಶೇಷವಾಗಿ ಮಹಿಳಾ ಉದ್ಯಮಿಗಳು ಪಡೆಯಬೇಕು. ಒಂದು ವೇಳೆ ಸಾಲ ಇತ್ಯಾದಿ ಸೌಲಭ್ಯ ನೀಡಲು ನಿರಾಕರಿಸಿದರೆ ಅದನ್ನು ಪರಿಹರಿಸಲು ಮುಂದಾಗುವುದಾಗಿ ಅವರು ಭರವಸೆ ನೀಡಿದರು. ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಮಾತನಾಡಿದರು.

ಆರ್‌ಸಿಗೆ ಕೇಂದ್ರ ಸರ್ಕಾರದ ಸಮಿತಿಯಲ್ಲಿ ಸ್ಥಾನ

ಮಹಿಳಾ ಉದ್ಯಮಿಗಳ ಉತ್ಪನ್ನಗಳ ಖರೀದಿ ಮಾಡಲು ನಿರ್ಲಕ್ಷ ಮಾಡಲಾಗುತ್ತಿದೆ. ದೇಶೀ ಉತ್ಪನ್ನಗಳನ್ನು ಖರೀದಿಸಿದರೆ ಮಾತ್ರ ಅದು ಆತ್ಮ ನಿರ್ಭರ ಆಗುತ್ತದೆ. ಅತಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು ಎಂದು ಹೇಮಾ ಎಂಬುವರು ಹೇಳಿದ್ದಾರೆ.

ಗೃಹ ಮತ್ತು ವಾಹನ ಸಾಲಗಳಿಗಿಂತ ಕಡಿಮೆ ಬಡ್ಡಿಯನ್ನು ಎಂಎಸ್‌ಎಂಇಗಳಿಗೆ ನೀಡಬೇಕು, ಉದ್ಯೋಗ ಸೃಷ್ಟಿಸುವ ದೊಡ್ಡ ಕೆಲಸವನ್ನು ಈ ಕ್ಷೇತ್ರ ಮಾಡುತ್ತದೆ. ಸರ್ಕಾರ ಸ್ವ ಉದ್ಯೋಗಕ್ಕೆ ಹೆಚ್ಚು ಒತ್ತು ಕೊಡಬೇಕು ಜ್ಯೋತಿ ಎಂಬುವರು ತಿಳಿಸಿದ್ದಾರೆ.