ಬೆಂಗಳೂರು [ನ.12]:  ಅಕ್ರಮ ಕಟ್ಟಡ ನಿರ್ಮಾಣದಾರರ ವಿರುದ್ಧ ಹೋರಾಟ ಮುಂದುವರಿಸಿರುವ ಸಂಸದ ರಾಜೀವ್‌ ಚಂದ್ರಶೇಖರ್‌ ಅವರು ಅಕ್ರಮ ಕಟ್ಟಡದ ಬಗ್ಗೆ ಟ್ವೀಟ್‌ ಮಾಡುವ ಮೂಲಕ ಬಿಬಿಎಂಪಿಗೆ ಬಿಸಿ ಮುಟ್ಟಿಸಿದ್ದಾರೆ.

ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಬಿಎಂಪಿಯ ಕರ್ತವ್ಯ. ಅಕ್ರಮ ಕಟ್ಟಡ ನಿರ್ಮಿಸುವವರ ವಿರುದ್ಧ ಬಿಬಿಎಂಪಿ ಆಯುಕ್ತರು ಹಾಗೂ ಮೇಯರ್‌ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿರೀಕ್ಷಿಸುತ್ತೇನೆ. ನಗರದಲ್ಲಿ ಕಾನೂನು ಉಲ್ಲಂಘಿಸುವವರಿಂದ ಕಾನೂನು ಪಾಲಿಸುವ ಜನ ತೊಂದರೆ ಅನುಭವಿಸಬೇಕಾಗಿದೆ. ಕೂಡಲೇ ಬಿಬಿಎಂಪಿಯ ಎಲ್ಲ ವಲಯದ ವಸತಿ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ಬಗ್ಗೆ ವಿಶೇಷ ಆಯುಕ್ತರು ಲೆಕ್ಕ ಪರಿಶೋಧನಾ ವರದಿ ಸಿದ್ಧಪಡಿಸಬೇಕು.

 

ಇದರಿಂದ ನಗರದಲ್ಲಿ ಎಷ್ಟೆಲ್ಲಾ ಅಕ್ರಮ ನಡೆದಿದೆ ಎಂಬುದು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಗೊತ್ತಾಗಲಿದೆ ಎಂದು ಆಗ್ರಹಿಸಿ ಸಂಸದ ರಾಜೀವ್‌ ಚಂದ್ರಶೇಖರ್‌ ಟ್ವೀಟ್‌ ಮಾಡಿದ್ದರು. ಅಲ್ಲದೆ, ನಮ್ಮ ಬೆಂಗಳೂರು ಪ್ರತಿಷ್ಠಾನವೂ ಈ ಬಗ್ಗೆ ಆಂದೋಲನವನ್ನು ಹುಟ್ಟುಹಾಕಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಮೇಯರ್‌ ಗೌತಮ್‌ಕುಮಾರ್‌ ಇಂದಿರಾನಗರದಲ್ಲಿ ಅಕ್ರಮ ಕಟ್ಟಡಗಳ ಸರ್ವೆ ನಡೆಸಲಾಗುವುದು ಎಂದು ಘೋಷಿಸಿದರು.

ಬೆಂಗಳೂರಿಗರೇ ಎಚ್ಚರ : ಶೀಘ್ರವೇ ಇಂತಹ ಕಟ್ಟಡಗಳು ತೆರವಾಗಲಿವೆ...