ಆಡು ಭಾಷೆ ಯಾವುದೇ ಇರಲಿ ಮಾತೃ ಭಾಷೆ ಕನ್ನಡವಾಗಿರಲಿ: ಸಂಸದ ಬಿ.ಎನ್.ಬಚ್ಚೇಗೌಡ
ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆಯುತ್ತಿರುವ ಪ್ರತಿಯೊಬ್ಬ ಕನ್ನಡಿಗರಿಗೂ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಆಡು ಭಾಷೆ ಯಾವುದೇ ಇದ್ದರೂ ಸಹ ಮಾತೃಭಾಷೆ ಎಂದರೆ ಅದು ಕನ್ನಡ ಎಂದು ಹೆಮ್ಮೆಯಿಂದ ಹೇಳಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ (ನ.09): ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆಯುತ್ತಿರುವ ಪ್ರತಿಯೊಬ್ಬ ಕನ್ನಡಿಗರಿಗೂ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಆಡು ಭಾಷೆ ಯಾವುದೇ ಇದ್ದರೂ ಸಹ ಮಾತೃಭಾಷೆ ಎಂದರೆ ಅದು ಕನ್ನಡ ಎಂದು ಹೆಮ್ಮೆಯಿಂದ ಹೇಳಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಗೆ ಮೂಲ ಕಾರಣೀಕರ್ತರಾಗಿದ್ದು ಕನ್ನಡ ಸಾಹಿತ್ಯ ಪರಿಷತ್ತನ್ನು ಎಲ್ಲರೂ ಉತ್ತಮ ರೀತಿಯಲ್ಲಿ ಕಟ್ಟಿ ಬೆಳೆಸಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಜಾನಪದ ಎಲ್ಲಾ ಒಟ್ಟಿಗೆ ಆಗಬೇಕು ಎಂಬ ಉದ್ದೇಶದಿಂದ 1915ರಲ್ಲಿ ಎಚ್,ವಿ, ನಂಜುಂಡಯ್ಯ ಅವರ ಅಧ್ಯಕ್ಷರ ಅವಧಿಯಲ್ಲಿ ಇದು ಮುನ್ನಡೆಗೆ ಬಂತು. ಅಂದಿನಿಂದ ಕನ್ನಡದ ಕಂಪನ್ನು ಕಸಾಪ ಗ್ರಾಮಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವ ಕೆಲಸ ಮಾಡುತ್ತಿದೆ ಎಂದರು.
ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು
500 ರೂ ಇದ್ದ ಕಸಾಪ ಸದಸ್ಯತ್ವವನ್ನು 250ರೂ ಮಾಡಲು ಕೇಂದ್ರ ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಆದ್ದರಿಂದ ಕನ್ನಡಿಗರಾದ ಪ್ರತಿಯೊಬ್ಬರು ಕಸಾಪ ಸದಸ್ಯತ್ವ ಪಡೆಯುವುದರ ಮೂಲಕ ಪರಿಣಾಮಕಾರಿಯಾಗಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷ ನಾಡೋಜ ಡಾ ಮಹೇಶ್ ಜೋಷಿ ಮಾತನಾಡಿ, ಕವಿಯ ಆಸೆ ಕನ್ನಡ ಭಾಷೆ ಉಸಿರಾಗಬೇಕು ಎಂಬುದಾಗಿದೆ. ಆದರೆ ರಾಜ್ಯದ ರಾಜಧಾನಿಯಲ್ಲಿ ಕೇವಲ ಶೇ.24 ಕನ್ನಡಿಗರಿದ್ದು ಉಳಿದಂತೆ ಹೊರ ರಾಜ್ಯದವರೇ ತುಂಬಿರುವ ಕಾರಣ ಉಸಿರು ಗಟ್ಟಿ ಹೋಗಿದ್ದು ಕನ್ನಡವನ್ನು ಹುಡುಕುವ ಸ್ಥಿತಿ ಬಂದಿದೆ. ಕ.ಸಾ.ಪ. ಸದಸ್ಯತ್ವ ಹಣಕ್ಕಾಗಿ ಮಾರಾಟವಿಲ್ಲ. ಕನ್ನಡದ ಬಗ್ಗೆ ಅಭಿಮಾನವಿದ್ದು ಕನ್ನಡ ಉಳಿಸಿ ಬೆಳೆಸುವವರಿಗೆ ಸದಸ್ಯತ್ವ ನೀಡಲಾಗುವುದು. ಅನೇಕ ಕವಿಗಳ ಮಾತೃ ಭಾಷೆ ಬೇರೆಯಾದರೂ ಕನ್ನಡ ಬಗೆಗಿನ ಒಲವಿನಿಂದ ಕನ್ನಡದ ಕವಿಗಳಾಗಿದ್ದಾರೆ. ಬೆಂಗಳೂರಿನಲ್ಲಿ ಕನ್ನಡವನ್ನು ಮಾತನಾಡುವವರು ಸಂಖ್ಯೆ ಶೇ. 26 ಮಾತ್ರ ಇದ್ದು ನಾವು ಅಲ್ಪಸಂಖ್ಯಾತರಾಗಿದ್ದೇವೆ. ಕನ್ನಡವನ್ನು ಬದುಕಿಸುವ ನಿಟ್ಟಿನಲ್ಲಿ ಕನ್ನಡವನ್ನು ಬಳಸಬೇಕು ಎಂದರು.
ಕಾಂಗ್ರೆಸ್ ವಿರುದ್ಧ ತೆಲಂಗಾಣದಲ್ಲಿ ಪ್ರಚಾರ: ಕೋಡಿಹಳ್ಳಿ ಚಂದ್ರಶೇಖರ್
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಿದರು. ಕಾರ‍್ಯಕ್ರಮದಲ್ಲಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಎಚ್.ಎಂ. ಮುನಿರಾಜು, ದೇವನಹಳ್ಳಿ ತಾ. ಕ.ಸಾ.ಪ. ಅಧ್ಯಕ್ಷ ನಂಜೇಗೌಡ, ಸಮಾಜ ಸೇವಕ ಎಚ್.ಎಂ. ಸುಬ್ಬರಾಜು, ದೊಡ್ಡಬಳ್ಳಾಪುರ ತಾಲೂಕು ಕ.ಸಾ.ಪ. ಅಧ್ಯಕ್ಷ ಗೋವಿಂದರಾಜು, ನೆಲಮಂಗಲ ತಾಲೂಕು ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್, ನಿಕಟ ಪೂರ್ವ ಅಧ್ಯಕ್ಷ ಟಿ. ನಾಗರಾಜ್, ಪ್ರಾಂಶುಪಾಲ ನಾರಾಯಣಸ್ವಾಮಿ ಇತರರು ಉಪಸ್ಥಿತರಿದ್ದರು.