ಶಿವಮೊಗ್ಗದ ಮೆಗ್ಗಾನ್‌ನಲ್ಲಿ 50 ವೆಂಟಿಲೇಟರ್ ಸೌಲಭ್ಯ: ಸಂಸದ B Y ರಾಘವೇಂದ್ರ
ಇತ್ತೀಚೆಗೆ ಬೆಂಕಿ ಅವಘಡ ಸಂಭವಿಸಿದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ಮಂಗಳವಾರ ಭೇಟಿ ನೀಡಿ ಕೈಗೊಂಡಿರುವ ದುರಸ್ತಿ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಏ.20ರ ಬಳಿಕ ಲಾಕ್‌ಡೌನ್ ಸ್ಥಿತಿ ನಿರ್ಧಾರ: ಸಚಿವ ಈಶ್ವರಪ್ಪ
ದೇವರ ದಯೆಯಿಂದ ಇದುವರೆಗೂ ಜಿಲ್ಲೆಯಲ್ಲಿ ಕೊರೋನಾ ವೈರಸ್ ಪ್ರಕರಣ ಕಂಡುಬಂದಿಲ್ಲ. ಅದೇ ರೀತಿ ಕರ್ನಾಟಕ ರಾಜ್ಯ ಈ ಮೊದಲು ಕೊರೋನಾ ವೈರಸ್ ಪ್ರಕರಣದಲ್ಲಿ ದೇಶದಲ್ಲಿ ಮೂರನೇ ಸ್ಥಾನ ಪಡೆದಿತ್ತು. ಈಗ 15 ಸ್ಥಾನದಲ್ಲಿದೆ. ರಾಜ್ಯದಲ್ಲಿ ವೈರಸ್ ನಿಯಂತ್ರಣದಲ್ಲಿದೆ ನಿಜ. ಆದರೂ ಕೂಡ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಬಾರದು ಎಂದರು.
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯನ್ನು ಕೋವಿಡ್- 19 ಬಾಧಿತರಿಗೆ ಚಿಕಿತ್ಸೆ ನೀಡುವುದಕ್ಕೆ ಮೀಸಲಿಡಲಾಗಿದೆ. ಇನ್ನಿತರೆ ರೋಗಿಗಳಿಗೆ ಸದ್ಯಕ್ಕೆ ಖಾಸಗಿ ಆಸ್ಪತ್ರೆಯ ಸಹಕಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದಷ್ಟುಶೀಘ್ರವಾಗಿ ಆಸ್ಪತ್ರೆ ಆವರಣದಲ್ಲೇ ಇನ್ನಿತರ ಕಾಯಿಲೆಗಳಿಗೆ ಚಿಕಿತ್ಸೆ ದೊರಕಬೇಕು. ಇದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದರು.
ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ನಡೆದ ದುರ್ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಬಿ.ವೈ. ರಾಘವೇಂದ್ರ, ಅದೃಷ್ಟವಶಾತ್ ಅವಘಡ ನಡೆದ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ಜಿಲ್ಲಾಡಳಿತ ಶ್ರಮದಿಂದಾಗಿ ಯಾವುದೇ ಹಾನಿ ಉಂಟಾಗಿಲ್ಲ. ಅವಘಡದ ನಂತರ ಮಕ್ಕಳ ವಿಭಾಗವನ್ನು ತಾತ್ಕಾಲಿಕವಾಗಿ ಬೇರೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ ದುರಸ್ತಿ ಕಾರ್ಯ ನಡೆದಿದ್ದು, ಶೀಘ್ರದಲ್ಲಿಯೇ ಆಸ್ಪತ್ರೆಯಲ್ಲಿಯೇ ಸೇವೆ ದೊರಕಲಿದೆ ಎಂದು ಹೇಳಿದರು.
ಆಸ್ಪತ್ರೆಗೆ ಬೇಕಾದ ಅಗತ್ಯಗಳನ್ನು ಒದಗಿಸಲಾಗುವುದು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆದಿದೆ. ತ್ವರಿತಗತಿಯಲ್ಲಿ ದುರಸ್ತಿ ಕಾಮಗಾರಿ ಪೂರ್ಣ ಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ನಾನು ಕೂಡ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದೇನೆ. ಆದಷ್ಟು ಶೀಘ್ರದಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದೇನೆ. ನವಜಾತ ಶಿಶುಗಳಿಗೆ, ಮಕ್ಕಳಿಗೆ ಹಾಗೂ ಇನ್ನಿತರ ರೋಗಿಗಳಿಗೆ ಚಿಕಿತ್ಸೆ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್, ಪಾಲಿಕೆ ಮೇಯರ್ ಸುವರ್ಣ ಶಂಕರ್, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಪ್ರಮುಖರಾದ ಎಸ್.ಎಸ್. ಜ್ಯೋತಿಪ್ರಕಾಶ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.