Asianet Suvarna News Asianet Suvarna News

ಏ.20ರ ಬಳಿಕ ಲಾಕ್‌ಡೌನ್‌ ಸ್ಥಿತಿ ನಿರ್ಧಾರ: ಸಚಿವ ಈಶ್ವರಪ್ಪ

ರಾಜ್ಯ-ಜಿಲ್ಲೆಯ ಪರಿಸ್ಥಿತಿ ಅವಲೋಕನ ನಡೆಸಿ ಮುಂದಿನ ಕ್ರಮ ನಿರ್ಧಾರ| ಇದು ಕೇವಲ ನಮ್ಮ ಜಿಲ್ಲೆ ಹಾಗೂ ರಾಜ್ಯಕ್ಕೆ ಸಂಬಂಧಪಟ್ಟ ಸಮಸ್ಯೆಯಲ್ಲ| ಇಡೀ ಜಗತ್ತಿನಾದ್ಯಂತ ಸಮಸ್ಯೆ ಕಂಡುಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಲಾಕ್‌ಡೌನ್‌ ಆದೇಶ ನೀಡಿದೆ| ಸಾರ್ವಜನಿಕರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು|
Minister K S Eshwarappa talks over India LockDown
Author
Bengaluru, First Published Apr 15, 2020, 2:42 PM IST
ಶಿವಮೊಗ್ಗ(ಏ.15): ಲಾಕ್‌ಡೌನ್‌ ಆದೇಶ ಪಾಲಿಸುವುದರ ಮೂಲಕ ಕೊರೋನಾ ವೈರಸ್‌ ಹರಡದಂತೆ ತಡೆಯಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರಲ್ಲದೆ, ಜಿಲ್ಲೆ ಮತ್ತು ರಾಜ್ಯದ ವಿಚಾರದಲ್ಲಿ ಏ.20ರ ಬಳಿಕ ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಕೇವಲ ನಮ್ಮ ಜಿಲ್ಲೆ ಹಾಗೂ ರಾಜ್ಯಕ್ಕೆ ಸಂಬಂಧಪಟ್ಟ ಸಮಸ್ಯೆಯಲ್ಲ. ಇಡೀ ಜಗತ್ತಿನಾದ್ಯಂತ ಸಮಸ್ಯೆ ಕಂಡುಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಲಾಕ್‌ಡೌನ್‌ ಆದೇಶ ನೀಡಿದೆ. ಸಾರ್ವಜನಿಕರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು. ಯಾವುದೇ ಜೀವಹಾನಿ ಆಗದ ರೀತಿಯಲ್ಲಿ, ನಮ್ಮ ನಡೆ ಇರಬೇಕು ಎಂದರು.

ಲಾಕ್‌ಡೌನ್‌ ಎಫೆಕ್ಟ್‌: ಡಿಕೆಶಿ ಕ್ಯಾಂಟೀನ್‌ ಮೂಲಕ ಬಡವರಿಗೆ ಉಪಹಾರ

ಏಪ್ರಿಲ್‌ 20 ರಂದು ಪರಿಸ್ಥಿಯ ಅವಲೋಕನ ನಡೆಸಲಾಗುತ್ತದೆ. ನಂತರ ರಾಜ್ಯ ಹಾಗೂ ಜಿಲ್ಲೆಯ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಲಾಗುವುದು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೂಡ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆ ಕೈಗೊಂಡ ಬಿಗಿಯಾದ ಕ್ರಮದಿಂದಾಗಿ ಜಿಲ್ಲೆಯಲ್ಲಿ ವೈರಸ್‌ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೇವೆ. ಜಿಲ್ಲೆಯ ಜನತೆಯೂ ಸಂಪೂರ್ಣ ಸಹಕಾರ ನೀಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ವೈರಸ್‌ ಒಂದೇ ಒಂದು ಪಾಸಿಟಿವ್‌ ಪ್ರಕರಣ ಕಂಡು ಬಂದಿಲ್ಲ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ನಿರ್ಲಕ್ಷ್ಯ ತೋರಬಾರದು ಎಂದರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಕೆಲವೊಂದು ತೊಂದರೆ ಉಂಟಾಗುತ್ತಿದೆ ನಿಜ. ಆದರೆ ಇದನ್ನು ಸಹಿಸಿಕೊಳ್ಳಬೇಕಿದೆ. ಮೇ 3 ರವರೆಗೆ ಲಾಕ್‌ಡೌನ್‌ ಮುಂದುವರಿಸಿದ್ದು, ದೇಶವಾಸಿಗಳೆಲ್ಲರೂ ಇದಕ್ಕೆ ಸಹಕಾರ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರೇ ಸ್ಪಷ್ಟವಾಗಿ ಹೇಳಿದ್ದಾರೆ. ಆದೇಶವನ್ನು ಪ್ರತಿಯೊಬ್ಬರೂ ಪಾಲನೆ ಮಾಡಲೇಬೇಕು ಎಂದು ಹೇಳಿದರು.

ಯಾರೂ ಗಾಬರಿಯಾಗಬೇಕಾದ ಅವಶ್ಯಕತೆ ಇಲ್ಲ. ಪೊಲೀಸ್‌ ಇಲಾಖೆ ಪ್ರತಿಯೊಬ್ಬರಿಗೂ ರಕ್ಷಣೆ ಒದಗಿಸುತ್ತಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಕೈಗೊಳ್ಳುವ ಕ್ರಮಕ್ಕೆ ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
 
Follow Us:
Download App:
  • android
  • ios