ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ, ತಾಯಿ ನೇತ್ರಾವತಿ ಮತ್ತು ಮಗಳು ಹೇಮಶ್ರೀ ಏಕಕಾಲದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಲಿ ಉತ್ತೀರ್ಣರಾಗುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಮಗಳು ಹೇಮಶ್ರೀ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದರೆ, ತಾಯಿ ಕೂಡ ತೇರ್ಗಡೆಯಾಗಿ ಸ್ಪೂರ್ತಿಯಾಗಿದ್ದಾರೆ.

ಬಂಟ್ವಾಳ (ಏ.111): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ತಾಯಿ ಮತ್ತು ಮಗಳು ಏಕಕಾಲದಲ್ಲಿ ಉತ್ತೀರ್ಣರಾಗುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಪಟ್ಟಣದ ನಿವಾಸಿ ನೇತ್ರಾವತಿ ವಿ.ಆರ್. ಹಾಗೂ ಈಕೆಯ ಮಗಳು ಹೇಮಶ್ರೀ ಆರ್. ಇಬ್ಬರೂ ಗುರುವಾರ ಪ್ರಕಟವಾದ ಫಲಿತಾಂಶದಲ್ಲಿ ತೇರ್ಗಡೆಯಾಗಿದ್ದಾರೆ. ಪಟ್ಟಣದ ಬಿ.ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಓದುತ್ತಿದ್ದ ಹೇಮಶ್ರೀ 562 ಅಂಕ (ಶೇ.93.6) ಗಳಿಸಿ ಕಾಲೇಜಿಗೆ ಟಾಪರ್ ಆಗಿದ್ದಾಳೆ.

ಇನ್ನು ಮೊಂಟೆಪದವು ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂಲಕ ಪರೀಕ್ಷೆಗೆ ಹಾಜರಾಗಿದ್ದ ತಾಯಿ ನೇತ್ರಾವತಿ ಕಲಾ ವಿಭಾಗದಲ್ಲಿ 257 (ಶೇ.42.3) ಅಂಕ ಪಡೆದಿದ್ದಾರೆ. ಇವರ ಸಾಧನೆಗೆ ಪತಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಅವರು ಪ್ರೋತ್ಸಾಹಿಸಿದ್ದು, ಕಾಲೇಜಿನ ಉಪನ್ಯಾಸಕರು ಬೆಂಬಲ ನೀಡಿದ್ದಾರೆ.

ಕಟ್ಟಡ ಕಾರ್ಮಿಕನ ಮಗ ರಾಜ್ಯಕ್ಕೆ 3ನೇ ರ್‍ಯಾಂಕ್

ಮಧುಗಿರಿ: ಕಟ್ಟಡ ಕಾರ್ಮಿಕನ ಮಗನೊಬ್ಬ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 594 ಅಂಕ (ಶೇ.99) ಗಳಿಸುವ ಮೂಲಕ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆದಿದ್ದಾನೆ.

ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಗೌತಮ ಬುದ್ಧ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವರುಣ ಜೆ. ಸಾಧಕ ವಿದ್ಯಾರ್ಥಿ.

ಮಧುಗಿರಿ ಕಸಬಾ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ ಜಯಣ್ಣ ಮತ್ತು ಲಕ್ಷ್ಮಮ್ಮ ಅವರ ಪುತ್ರನಾದ ವರುಣ ಅಪ್ಪಟ ಗ್ರಾಮೀಣ ಪ್ರತಿಭೆ. ತಂದೆ ಜಯಣ್ಣ ಅವರು ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.

ಕುಟುಂಬದ ಬಡತನ ನಡುವೆಯೇ ಓದುವ ಛಲ ಬಿಡದ ವರುಣ ಪಿಯುಸಿ ಕಲಾ ವಿಭಾಗದಲ್ಲಿ 600ಕ್ಕೆ 594 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ. ಫಲಿತಾಂಶ ಘೋಷಣೆ ಬಳಿಕ ಉಪನ್ಯಾಸಕರು ವಿದ್ಯಾರ್ಥಿಗೆ ಶಾಲು ಹೊದಿಸಿ ಸಿಹಿ ತಿನ್ನಿಸಿದ್ದು, ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ವರುಣ್ ಐಎಎಸ್ ಅಧಿಕಾರಿ ಆಗುವ ಕನಸು ಕಂಡಿದ್ದಾನೆ.

YouTube video player