ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಹಿಂದಿ ವಿಷಯದಲ್ಲಿ 100ಕ್ಕೆ 111 ಅಂಕ ನೀಡಿ ಪರೀಕ್ಷಾ ಮಂಡಳಿ ಎಡವಟ್ಟು ಮಾಡಿದೆ. ಥಿಯರಿ ಮತ್ತು ಆಂತರಿಕ ಅಂಕಗಳನ್ನು ಒಟ್ಟಿಗೆ ಸೇರಿಸಿ ಈ ಪ್ರಮಾದ ಮಾಡಲಾಗಿದ್ದು, ಇದು ಶಿಕ್ಷಣ ವ್ಯವಸ್ಥೆಯ ಬೇಜವಾಬ್ದಾರಿತನವನ್ನು ಪ್ರಶ್ನಿಸುವಂತೆ ಮಾಡಿದೆ.
ಬೆಂಗಳೂರು (ಏ.10): ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪರೀಕ್ಷಾ ಮಂಡಳಿ ಮಾಡಿರುವ ಎಡವಟ್ಟು ಈಗ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ. 'ಐತಿಹಾಸಿಕ ಫಲಿತಾಂಶ' ಎಂದು ಬೀಗುತ್ತಿದ್ದ ಶಿಕ್ಷಣ ಸಚಿವರಿಗೆ ಮಂಡಳಿಯ ಈ ಎಡವಟ್ಟಿನ ಸಾಧನೆ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಹಿಂದಿಗೆ ನೂರಕ್ಕೆ ನೂರಲ್ಲ.. ನೂರಕ್ಕೆ 111!
ಸಾಮಾನ್ಯವಾಗಿ ಪರೀಕ್ಷೆ ನಡೆಯುವುದು 100 ಅಂಕಗಳಿಗೆ. ಆದರೆ ಪಿಯು ಬೋರ್ಡ್ ಮಾತ್ರ ವಿದ್ಯಾರ್ಥಿಯೊಬ್ಬನಿಗೆ ಹಿಂದಿ ವಿಷಯದಲ್ಲಿ ಬರೋಬ್ಬರಿ 111 ಅಂಕಗಳನ್ನು ನೀಡಿ ನೀಡಿ ಪಾಸ್ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಅಂಕಪಟ್ಟಿಯಲ್ಲಿ ಈ ಸಂಖ್ಯೆಯನ್ನು ಕಂಡು ವಿದ್ಯಾರ್ಥಿ ಮಾತ್ರವಲ್ಲದೆ ಪೋಷಕರು ಕೂಡ ದಂಗಾಗಿದ್ದಾರೆ.
ಥಿಯರಿ ಮತ್ತು ಇಂಟರ್ನಲ್ ಮಾರ್ಕ್ಸ್‌ನಲ್ಲಾದ ಎಡವಟ್ಟು ಏನು?
ವಿದ್ಯಾರ್ಥಿಯು ಇನ್ನಷ್ಟು ಅಂಕ ಗಳಿಸಲು ಅಥವಾ ರಿಪೀಟರ್ ಆಗಿ ಪರೀಕ್ಷೆ ಬರೆದಿದ್ದ ಎನ್ನಲಾಗಿದೆ. ಈತನಿಗೆ ಹಿಂದಿ ಥಿಯರಿಯಲ್ಲಿ 94 ಅಂಕಗಳು ಬಂದಿದ್ದರೆ, ಕಾಲೇಜು 17 ಆಂತರಿಕ (Internal) ಅಂಕಗಳನ್ನು ನೀಡಿದೆ. ಮಂಡಳಿಯು ಇವೆರಡನ್ನೂ ಕೂಡಿಸಿ ಒಟ್ಟು 111 ಅಂಕಗಳನ್ನು ನೀಡಿ ಪಾಸ್ ಎಂದು ಘೋಷಿಸಿದೆ.
ಯಾರು ಹೊಣೆ? ಇದು ಕಣ್ತಪ್ಪೇ ಅಥವಾ ಬೇಜವಾಬ್ದಾರಿಯೇ?
ಪರೀಕ್ಷಾ ಮಂಡಳಿಯು ಫಲಿತಾಂಶ ಪ್ರಕಟಿಸುವ ಮುನ್ನ ಕನಿಷ್ಠ ಜವಾಬ್ದಾರಿ, ಮುನ್ನೆಚ್ಚರಿಕೆ ವಹಿಸಿಲ್ಲವೇ ಎಂಬ ಪ್ರಶ್ನೆ ಮೂಡಿದೆ. 100ರ ಗಡಿ ದಾಟಿದ ಅಂಕಗಳನ್ನು ಸಾಫ್ಟ್‌ವೇರ್ ಅಥವಾ ಸಿಬ್ಬಂದಿ ಗಮನಿಸದೇ ಇರುವುದು ಹೇಗೆ ಸಾಧ್ಯ? ಈ ರೀತಿ ಎಷ್ಟು ವಿದ್ಯಾರ್ಥಿಗಳಿಗೆ ಅಂಕ ಕೊಟ್ಟಿರಬಹುದು? ಈ ಗಂಭೀರ ಪ್ರಮಾದಕ್ಕೆ ಈಗ ಹೊಣೆ ಯಾರು ?
ಶಿಕ್ಷಣ ಸಚಿವರೇ ಇತ್ತ ಗಮನಹರಿಸಿ
ಶಿಕ್ಷಣ ಇಲಾಖೆಯ ಸುಧಾರಣೆ ಬಗ್ಗೆ ಮಾತನಾಡುವ ಸಚಿವರು ಈ ತಾಂತ್ರಿಕ ಲೋಪದ ಬಗ್ಗೆ ಏನು ಹೇಳುತ್ತಾರೆ? ವಿದ್ಯಾರ್ಥಿ ಥಿಯರಿಯಲ್ಲಿ ಪಡೆದ ಅಂಕಗಳು ಸರಿಯೋ ಅಥವಾ ಆಂತರಿಕ ಅಂಕಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿದೆಯೋ ಎಂಬ ಸಂಶಯ ಈಗ ಕಾಡುತ್ತಿದೆ. ಇಂತಹ ಎಡವಟ್ಟುಗಳು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನೆ ಮಾಡುವಂತಿದೆ.


