ಸೋಮರಡ್ಡಿ ಅಳವಂಡಿ

ಕೊಪ್ಪಳ(ಏ.03):  ಸುಮಾರು 230 ವರ್ಷಕ್ಕೂ ಹಳೆಯದಾದ 18ಕ್ಕೂ ಹೆಚ್ಚು ಕಾವ್ಯಗಳ ಹಸ್ತಪ್ರತಿಯಲ್ಲಿರುವ ಕಟ್ಟುಗಳು ಕೊಪ್ಪಳ ತಾಲೂಕಿನ ಗಿಣಿಗೆರೆಯ ಆನೆಗೊಂದಿಯ ಸರಸ್ವತಿಪೀಠದ ವಿಶ್ವಕರ್ಮ ಸ್ವಾಮಿಗಳ ಮಠದಲ್ಲಿ ದೊರೆತಿವೆ. ಮಠದಲ್ಲಿಯೇ ಇದ್ದ ಹಳೆಯದಾದ ಪೆಟ್ಟಿಗೆಯಲ್ಲಿ ಕಟ್ಟಿಡಲಾಗಿದ್ದು, ಈಗ ಮಠ ಸ್ವಚ್ಛ ಮಾಡುವ ವೇಳೆಯಲ್ಲಿ ಪೆಟ್ಟಿಗೆಯನ್ನು ತೆಗೆದಾಗ ಗೊತ್ತಾಗಿದೆ.

ಇವುಗಳಲ್ಲಿ ಮಹತ್ವತ ಕಾವ್ಯಗಳಿವೆ. ಇವುಗಳು ನಡುಗನ್ನಡದಲ್ಲಿ ರಚನೆಯಾಗಿರುವ ಕೃತಿಗಳಾಗಿವೆ. ಈ ಮೊದಲೇ ರಚನೆಯಾಗಿದ್ದ ಕೃತಿಗಳನ್ನೇ ಹಸ್ತಪ್ರತಿಯಲ್ಲಿ ಬರೆದಿಡಲಾಗಿದೆ. ಕೊಠಡಿಯಲ್ಲಿದ್ದ ದೊಡ್ಡ ಪೆಟ್ಟಿಗೆಯಲ್ಲಿ ಕಾವ್ಯಗಳಾದ ಮೋಹನ ತರಂಗಿಣಿ, ಭಾಗವತ ದಶಮಸ್ಕಂದ, ಮಹಾಭಾರತ ವನಪರ್ವ, ದ್ರೋಣ ಪರ್ವ ಹೀಗೆ ಹಲವಾರು ಕಾವ್ಯಗಳ ಗ್ರಂಥಗಳು ಸಿಕ್ಕಿವೆ, ಅವುಗಳನ್ನು ಮರದ ಹಲಗೆಗಳನ್ನು ಹೊದಿಕೆ ಹಾಕಿ, ಬಟ್ಟೆಗಳಿಂದ ಕಟ್ಟಿದ್ದಾರೆ. ಇವುಗಳೊಂದಿಗೆ ಹಿಂದಿನ ಸ್ವಾಮೀಜಿಗಳು ಉಪಯೋಗಿಸಿದ ಶ್ರೀಗಂಧದ ಪಾದುಕೆಗಳು ಸಹ ಸಿಕ್ಕಿವೆ. ಇವುಗಳನ್ನು ನೋಡಿದ ಮಠದ ವಂಶಸ್ಥರಿಗೆ ಇವುಗಳ ಬಗ್ಗೆ ಆಸಕ್ತಿ ಮೂಡಿದೆ.

ನಮ್ಮ ಪೂರ್ವಜರು ಹಂಪಿಯಲ್ಲಿದ್ದರು, ಅಲ್ಲಿಂದ, ಕನಕಗಿರಿ ಮತ್ತೆ ಅಲ್ಲಿಂದ ಗಿಣಿಗೆರೆಗೆ ಬಂದಿದ್ದು, ಆಗಿನ ಕಾಲದಲ್ಲಿ ವಿವಿಧ ಗ್ರಂಥಗಳ ರಚನೆ ಅಥವಾ ಪ್ರತಿ ಮಾಡಿರಬಹುದು. ನಿಖರವಾದ ಮಾಹಿತಿ ಇಲ್ಲ. ಈ ಬಗ್ಗೆ ಕನ್ನಡದ ಇತಿಹಾಸ ಸಂಶೋಧಕರು, ಕನ್ನಡ ಪಂಡಿತರು ಅಧ್ಯಯನ ಮಾಡುವ ಅಗತ್ಯವಿದೆ ಎನ್ನುತ್ತಾರೆ ಶ್ರೀಮಠದವರು.

 ಬಿಎಸ್‌ವೈ ಬದಲಾವಣೆ: 'ಯತ್ನಾಳ ಯಾಕೆ ಹಾಗೆ ಹೇಳಿದ್ರೋ ಗೊತ್ತಿಲ್ಲ'

ಈ ಗ್ರಂಥಗಳ ಕೊನೆಯಲ್ಲಿ ಈ ಗ್ರಂಥಗಳನ್ನು ಶಾಲಿವಾಹನ ಶಕೆ 1787ರಲ್ಲಿ ಕನಕಗಿರಿ ಮಠದ ಶ್ರೀ ಪಂಪಾಪತಿ ಗುರುಗಳ ನಾಗಮೂರ್ತಿಯವರ ಬರಹ ಎಂದು ಬರೆಯಲಾಗಿದೆ. ಗದುಗಿನ ಭಾರತವನ್ನು ಸಹ ಈ ಗ್ರಂಥಗಳಲ್ಲಿ ದಾಖಲಿಸಿದ್ದಾರೆ.

ರಾಮಾಯಣ, ಮಹಾಭಾರತ, ಮೋಹನ ತರಂಗಿಣಿ, ಸ್ಕಂದ ಪುರಾಣ ಹೀಗೆ ಹಲವಾರು ಕಾವ್ಯಗಳು ನಾಡಿನ ಚರಿತ್ರೆ ಪುರಾಣ ದೊರೆತಿರುವ ಮಹತ್ವದ ಹಸ್ತಪ್ರತಿಗಳಾಗಿವೆ ಎನ್ನಲಾಗುತ್ತಿದೆ. ಮಹಾಭಾರತದ ವ್ಯಾಸರ ಮೂಲಕೃತಿ, ವಾಲ್ಮೀಕಿ ಬರೆದ ರಾಮಾಯಣ ಕೃತಿ ಸಿಕ್ಕಿಲ್ಲ. ಕಾಲ ಕಾಲಕ್ಕೆ ವಿವಿಧ ಕವಿಗಳು ಮಹಾಭಾರತ, ರಾಮಾಯಣವನ್ನು ಬರೆದಿದ್ದಾರೆ. ಪುರಾಣ ಪುಣ್ಯ ಕಥೆ ಓದುವುದು, ಮಹಾಭಾರತ ರಾಮಾಯಣ ಕಾವ್ಯಗಳನ್ನು ಓದುವುದು ಒಂದು ಪಾಂಡಿತ್ಯವಿದ್ದಂತೆ. ಇವುಗಳನ್ನು ಅಧ್ಯಯನ ಮಾಡುವ ಅಗತ್ಯವಿದೆ.

ಗಂಗಾವತಿ: ನವಲಿ ಭೋಗಾಪುರೇಶ ದೇಗುಲದಲ್ಲಿ ಬೃಹತ್‌ ಗಾತ್ರದ ನಾಗರಹಾವು ಪ್ರತ್ಯಕ್ಷ..!

ಇವುಗಳು ನಿಜಕ್ಕೂ ಮಹತ್ವದ ದಾಖಲೆಗಳಾಗಿವೆ. ಇವುಗಳನ್ನು ಆಗಿನ ಸ್ವಾಮೀಜಿಗಳು ಬರೆಯಿಸಿರಬಹುದು ಅಥವಾ ಅವುಗಳ ವಿಶ್ಲೇಷಣೆ ಮಾಡಿರಬಹುದು. ಯಾವುದಕ್ಕೂ ಅಧ್ಯಯನ ಮಾಡುವುದು ಉತ್ತಮ ಎಂದು ಇತಿಹಾಸಕಾರಪ್ರೊ. ಶರಣಬಸಪ್ಪ ಕೋಲ್ಕಾರ್‌ ತಿಳಿಸಿದ್ದಾರೆ.

ಮಠದಲ್ಲಿ ಪತ್ತೆಯಾಗಿರುವ ಮಹತ್ವದ ದಾಖಲೆಗಳು ಆಗಿದ್ದು, ಇವುಗಳನ್ನು ಇತಿಹಾಸಕಾರರು ಅಧ್ಯಯನ ಮಾಡುವುದು ತೀರಾ ಅಗತ್ಯ. ಇವುಗಳನ್ನು ಸಂರಕ್ಷಣೆ ಮಾಡಿಕೊಂಡು ಬಂದಿರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ ಎಂದು ಮಠದ ವಂಶಸ್ಥರು ನರಸಿಂಹ ಶಾಸ್ತ್ರೀ ಹೇಳಿದ್ದಾರೆ.