ಮಹಿಳಾ ಆಯೋಗಕ್ಕೆ ಇನ್ನಷ್ಟು ಬಲ: ಸಿಎಂ ಬೊಮ್ಮಾಯಿ ಭರವಸೆ
ಆಯೋಗಕ್ಕೆ ಹೆಚ್ಚಿನ ಅಧಿಕಾರ, ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ, ಆಯೋಗ ಸಲ್ಲಿಸಿದ ದೂರುಗಳ ಬಗ್ಗೆ 7-8 ಗಂಟೆಯಲ್ಲಿ ತನಿಖೆಗೆ ಸೂಚನೆ
ಬೆಂಗಳೂರು(ನ.26): ರಾಜ್ಯ ಮಹಿಳಾ ಆಯೋಗಕ್ಕೆ ಅಧಿಕಾರ ನೀಡುವುದರ ಜೊತೆಗೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಆಯೋಗ ನೀಡುವ ದೂರುಗಳನ್ನು ಏಳೆಂಟು ಗಂಟೆಯಲ್ಲಿ ದಾಖಲಿಸಿಕೊಂಡು ತನಿಖೆ ಆಂಭಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ರಾಜ್ಯ ಮಹಿಳಾ ಆಯೋಗ’ದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಹಿಳಾ ಆಯೋಗಕ್ಕೆ ಶಕ್ತಿ ತುಂಬಲಾಗುವುದು. ಆಯೋಗಕ್ಕೆ ಅಧಿಕಾರ ನೀಡುವುದರ ಜೊತೆಗೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಆಯೋಗ ನೀಡುವ ದೂರುಗಳನ್ನು ಏಳೆಂಟು ಗಂಟೆಯಲ್ಲಿ ದಾಖಲಿಸಿಕೊಂಡು ತನಿಖೆ ಆರಂಭಿಸಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. ಮಹಿಳೆಯರ ಸುರಕ್ಷತೆಗೆ ರಾಜ್ಯ ಸರ್ಕಾರ ಒತ್ತು ನೀಡಲಿದೆ ಎಂದು ಭರವಸೆ ನೀಡಿದರು.
ಹಿರಿಯ ವಕೀಲರ ನೇಮಕ:
ಆಯೋಗದಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಸಮರ್ಥ ವಾದ ಮಂಡಿಸಲು ಹಿರಿಯ ವಕೀಲರ ತಂಡ ನೇಮಕ ಮಾಡಲಾಗುವುದು. ‘ನಿರ್ಭಯ’ ಯೋಜನೆಯಡಿ ನಗರದಲ್ಲಿ 7500 ಕೃತಕ ಬುದ್ಧಿಮತ್ತೆಯ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ರಾತ್ರಿ ವೇಳೆ ಕೆಲಸ ಮುಗಿಸಿ ಬರುವ ಮಹಿಳೆಯಾರಿಗೆ ಇದು ಸುರಕ್ಷತೆ ಒದಗಿಸುತ್ತದೆ. ಮಹಿಳಾ ಪೊಲೀಸರನ್ನು ಒಳಗೊಂಡ ಪಿಂಕ್ ಹೊಯ್ಸಳ ವಾಹನಗಳು ಸಂಚರಿಸುತ್ತಿವೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ತಾಯಿ-ಮಗುವಿನ ಅಪೌಷ್ಟಿಕತೆ ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 5 ಪ್ರಮುಖ ನಗರಗಳಲ್ಲಿ ಮಹಿಳೆಯರಿಗೆ ಬೃಹತ್ ಹಾಸ್ಟೆಲ್, ಐಐಎಂ ತರಬೇತಿ, ಸ್ಟಾರ್ಟಪ್‌ಗೆ ಅವಕಾಶ ನೀಡಲಾಗಿದೆ. ಪ್ರತಿ ಗ್ರಾಮದ 2 ಸಂಘ ಸೇರಿದಂತೆ ರಾಜ್ಯದ 5 ಲಕ್ಷ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆಯಡಿ 5 ಲಕ್ಷ ರುಪಾಯಿವರೆಗೂ ಹಣಕಾಸು ನೆರವು ನೀಡಲಾಗುವುದು. 7500 ಸ್ತ್ರೀ ಶಕ್ತಿ ಸಂಘಗಳಿವೆ ಅಮೃತ ಯೋಜನೆಯಡಿ 1 ಲಕ್ಷ ರು. ನೀಡಿ ಸ್ವಯಂ ಉದ್ಯೋಗಕ್ಕೆ ಸಹಾಯ ಮಾಡಲಾಗುವುದು ಎಂದು ಅಂಕಿ-ಅಂಶ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಸಂಸದ ಪ್ರತಾಪ ಸಿಂಹ, ಶಾಸಕಿ ರೂಪಾಲಿ ನಾಯಕ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಮತ್ತಿತರರು ಹಾಜರಿದ್ದರು.
ಜೀರಿಗೆ ಡಬ್ಬ ಪವರ್‌ಫುಲ್
ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ ಸಂಕಷ್ಟಎದುರಿಸುತ್ತಿವೆ. ಆದರೆ, ಭಾರತದ ಮಹಿಳೆಯರ ಉಳಿತಾಯ ಸಂಸ್ಕೃತಿಯಿಂದಾಗಿ ಅಡುಗೆ ಮನೆಯಲ್ಲಿ ತೆಗೆದಿಡುವ ಜೀರಿಗೆ ಡಬ್ಬದಲ್ಲಿ ಇಡುವ ಹಣವೇ ದೇಶದ ಆರ್ಥಿಕತೆ ರಕ್ಷಣೆ ಮಾಡಿದೆ. ತಾಯಿ ಗರ್ಭದಿಂದ ಭೂ ತಾಯಿ ಗರ್ಭದವರೆಗೆ ಇರುವ ನಮ್ಮ ಬದುಕಿನಲ್ಲಿ ಮಹಿಳೆಯರಿಗೆ ಗೌರವ, ಸಮಾನತೆ ನೀಡಬೇಕು. ನಿರ್ಭಯ ಯೋಜನೆಯಡಿ ಕಾನೂನಿನ ಬಗ್ಗೆ ಪುರುಷರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಅನ್ಯಾಯ ಆಗುವ ಮೂಲದಿಂದಲೇ ಅರಿವು ಮೂಡಿಸಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಹಲ್ಲಿಲ್ಲದ ಹಾವು ಮಾಡಬೇಡಿ: ಶೋಭಾ ಕರಂದ್ಲಾಜೆ ಸಲಹೆ
ರಾಜ್ಯ ಮಹಿಳಾ ಆಯೋಗವನ್ನು ಸಶಕ್ತ ಮಾಡಬೇಕು. ಇದಕ್ಕೆ ದೇಶದಲ್ಲಿ ಕರ್ನಾಟಕವೇ ಮೇಲ್ಪಂಕ್ತಿ ಹಾಕಬೇಕು. ಆಯೋಗವನ್ನು ಹಲ್ಲಿಲ್ಲದ ಹಾವಿನಂತೆ, ಶಸ್ತ್ರ ಇಲ್ಲದ ಸೇನಾನಿಯಂತೆ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.
ಯಾವುದೇ ದೌರ್ಜನ್ಯ ಪ್ರಕರಣವನ್ನು 6 ತಿಂಗಳೊಳಗೆ ಇತ್ಯರ್ಥಪಡಿಸಬೇಕು. ವಾದ ಮಾಡಲು ಸಮರ್ಥ ವಕೀಲರ ತಂಡ ನೇಮಿಸಬೇಕು. ಪೊಲೀಸ್ ಠಾಣೆಗಳಲ್ಲಿ ಆರೋಪಿಗಳು ಪ್ರಭಾವ ಬೀರದ ಪರಿಸ್ಥಿತಿ ನಿರ್ಮಿಸಬೇಕು. ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಬೇಕು. ಸೈಬರ್ ಅಪರಾಧದ ವಿರುದ್ಧ ಕಠಿಣ ಶಿಕ್ಷೆ ಜಾರಿಗೆ ತರಬೇಕು. ಸಾಂತ್ವನ ಕೇಂದ್ರಗಳಿಗೆ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ರಾಜ್ಯ ಮಹಿಳಾ ಆಯೋಗ’ದ ರಜತ ಮಹೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಶೋಭಾ ಕರಂದ್ಲಾಜೆ, ಹಾಲಪ್ಪ ಆಚಾರ್, ರೂಪಾಲಿ ನಾಯಕ್, ರೇಖಾ ಶರ್ಮಾ, ಪ್ರಮೀಳಾ ನಾಯ್ಡು ಹಾಜರಿದ್ದರು.