ಜನರ ಜೇಬಿಗೆ ಭಾರವಾದ ಆಧಾರ್..!
* ಆಧಾರ್ ನೋಂದಣಿ, ತಿದ್ದುಪಡಿಗೆ ಖಾಸಗಿಯವರಿಂದ ಮನಬಂದಂತೆ ಹಣ ವಸೂಲಿ
* ಖಾಸಗಿ ಸಂಸ್ಥೆಗಳು ಆಧಾರ್ ಕೇಂದ್ರಗಳಲ್ಲಿ ದರ ಫಲಕ ಅಳವಡಿಸುವುದು ಕಡ್ಡಾಯ
* ನಿಗದಿತ ಶುಲ್ಕ ಮಾತ್ರ ವಸೂಲಿ ಮಾಡಬೇಕು
ಶಿವಾನಂದ ಪಿ.ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ(ಮೇ.26): ಸರ್ಕಾರದ ಎಲ್ಲ ಸವಲತ್ತುಗಳಿಗೆ ಇತ್ತೀಚೆಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ. ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿರುವ ಖಾಸಗಿ ನೋಂದಣಿ ಏಜೆನ್ಸಿಗಳು ಆಧಾರ್ ಕಾರ್ಡ್ ದಂಧೆಯನ್ನು ಲಾಭಕ್ಕಾಗಿ ಬಳಸುತ್ತಿವೆ. ಪ್ರತಿ ನೋಂದಣಿಗೆ 150 ರಿಂದ 160 ನಗದನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ವಾಸ್ತವವಾಗಿ ಸರ್ಕಾರದ ನಿಯಮದಂತೆ ಯಾವುದೇ ಸರ್ಕಾರಿ ಅಂಚೆಕಚೇರಿ ಅಥವಾ ಪಂಚಾಯಿತಿಯಲ್ಲಿ ಸಾರ್ವಜನಿಕರು ಹೊಸ ಆಧಾರ್ ನೋಂದಣಿಗೆ ಶುಲ್ಕ ಪಾವತಿಸಬೇಕಿಲ್ಲ. ತಿದ್ದುಪಡಿ, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಹೆಸರು ಬದಲಾವಣೆ ಸೇವೆಗಳು ಉಚಿತ. ಆದರೆ, ಖಾಸಗಿ ಏಜೆನ್ಸಿಗಳಲ್ಲಿ ಕಂಪ್ಯೂಟರ್ ಆಪರೇಟರ್‌ಗಳಿಗೆ ದುಡ್ಡು ಕೊಟ್ಟರಷ್ಟೇ ಕೆಲಸ ಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.
Karnataka MLC polls: ಭಾರೀ ನಿರೀಕ್ಷೆಯಲ್ಲಿದ್ದ SR Patilಗೆ ಕೈ ತಪ್ಪಿದ ಪರಿಷತ್ ಟಿಕೆಟ್
ದರ ಫಲಕ ನಾಪತ್ತೆ:
ರಾಮಪೂರದ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಖಾಸಗಿಯವರ ಏಜೆನ್ಸಿಯಲ್ಲಿ ಇರುವ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರದ ದರ್ಬಾರ್ ಜೋರಾಗಿದ್ದು, ಏಜೆನ್ಸಿಯವರಿಂದ ಇಲ್ಲಿನ ಬಡ ನೇಕಾರರು, ಕೂಲಿಕಾರ್ಮಿಕರಿಂದ ಮನಬಂದಂತೆ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಸರ್ಕಾರದ ನಿಯಮದಂತೆ ಖಾಸಗಿ ಏಜೆನ್ಸಿಗಳಲ್ಲೂ ಹೊಸ ಆಧಾರ್ ನೋಂದಣಿಯನ್ನು ಉಚಿತವಾಗಿ ಮಾಡಬೇಕಿದೆ. ತಿದ್ದುಪಡಿಗೆ .50 ದರ ನಿಗದಿಪಡಿಸಲಾಗಿದೆ. ಆದರೆ, ಖಾಸಗಿ ಆಧಾರ್ ನೋಂದಣಿ ಕೇಂದ್ರಗಳಲ್ಲಿ ಮನಬಂದಂತೆ ವಸೂಲಿಗಿಳಿದಿದ್ದು, ಎಷ್ಟುಹಣ ಪಾವತಿಸಬೇಕು ಎಂಬ ಫಲಕವೇ ನಾಪತ್ತೆಯಾಗಿದೆ.
ಹಣ ವಸೂಲಾತಿ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಖಾಸಗಿ ನೋಂದಣಿ ಕೇಂದ್ರಗಳ ನಿರ್ವಾಹಕ, ಗುತ್ತಿಗೆ ಪಡೆದಿರುವ ಏಜೆನ್ಸಿಯವರು ಆರು ತಿಂಗಳಿಗೊಮ್ಮೆ ಮಾತ್ರ ಹಣ ನೀಡುತ್ತಾರೆ. ಅಲ್ಲಿಯವರೆಗೂ ಕಚೇರಿ ನಿರ್ವಹಣೆಗೆ ಹಣ ಬೇಕಾಗುತ್ತದೆ. ಹೀಗಾಗಿ, ಜನರಿಂದ ಹಣ ವಸೂಲು ಮಾಡುತ್ತಿದ್ದೇವೆ ಎಂಬ ಸಬೂಬು ಹೇಳುತ್ತಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಪರದಾಟ:
ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಮಕ್ಕಳಿಗೆ ಆಧಾರ್ ನೋಂದಣಿ ಮಾಡಿಸಲು ಪೋಷಕರು ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಪ್ರತಿ ತಾಲೂಕಿನಲ್ಲೂ ಒಂದು ಗ್ರಾಪಂನಲ್ಲಿ ಮಾತ್ರ ಸರ್ಕಾರದಿಂದ ಆಧಾರ್ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ನೋಂದಣಿ ನಡೆಯುವ ಗ್ರಾಪಂಗಳು ಮೇಲಿಂದ ಮೇಲೆ ಬದಲಾಗುತ್ತಲೇ ಇರುತ್ತವೆ. ನೋಂದಣಿ ಎಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಇಲ್ಲದೇ ಜನರು ಪರದಾಡುವಂತಾಗಿದೆ.
Bagalkot: ಮದುವೆಯಾಗಿ ದೇಗುಲಕ್ಕೆ ಬಂದವನ ಬಂಧನ
ಇಂತಹ ಸಂದರ್ಭದಲ್ಲಿ ಖಾಸಗಿ ಏಜೆನ್ಸಿಗಳು ಎಷ್ಟೇ ದುಡ್ಡು ತೆಗೆದುಕೊಂಡರೂ ಆಧಾರ್ ಸಿಕ್ಕರೆ ಸಾಕಪ್ಪಾ ಎಂಬ ಅವಸರದಲ್ಲಿ ಗ್ರಾಮೀಣ ಜನತೆ ಖಾಸಗಿ ಸಂಸ್ಥೆಗಳಲ್ಲಿ ದುಡ್ಡು ಖರ್ಚಾದರೂ ಪರವಾಗಿಲ್ಲ ಎಂದು ಹೆಚ್ಚು ದುಡ್ಡು ಕೊಟ್ಟು ಆಧಾರ್ ಮಾಡಿಸಿಕೊಳ್ಳುತ್ತಿರುವದು ತಾಲೂಕಿನಾದ್ಯಂತ ಸಹಜವಾಗಿದೆ.
ಖಾಸಗಿ ಸಂಸ್ಥೆಗಳು ಆಧಾರ್ ಕೇಂದ್ರಗಳಲ್ಲಿ ದರ ಫಲಕ ಅಳವಡಿಸುವುದು ಕಡ್ಡಾಯವಾಗಿದೆ. ಆಧಾರ್ ತಿದ್ದುಪಡಿಗೆ ನಿಗದಿಗಿಂತ ಹೆಚ್ಚು ಹಣ ಪಡೆಯುತ್ತಿರುವುದು ಕೇಳಿಬಂದಿದ್ದು, ನಿಗದಿತ ಶುಲ್ಕ ಮಾತ್ರ ವಸೂಲಿ ಮಾಡಬೇಕು. ಹೊಸದಾಗಿ ಆಧಾರ್ ನೋಂದಣಿ ಮಾಡಿಕೊಳ್ಳುತ್ತಿದ್ದರೆ ಉಚಿತವಾಗಿ ಸೇವೆ ಒದಗಿಸಬೇಕು. ಇಲ್ಲವಾದಲ್ಲಿ ಅಂಥ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಅಂತ ರಬಕವಿ-ಬನಹಟ್ಟಿ ತಹಸೀಲ್ದಾರ ಸಂಜಯ ಇಂಗಳೆ ತಿಳಿಸಿದ್ದಾರೆ.