Asianet Suvarna News Asianet Suvarna News

ಬಸ್‌ ಕಾರ್ಗೋ ಸೇವೆಗೆ ಉತ್ತಮ ಪ್ರತಿಕ್ರಿಯೆ: ಭರ್ಜರಿ ಲಾಭ..!

ಖಾಸಗಿ ಕೋರಿಯರ್‌ ಸರ್ವಿಸ್‌ಗಳಿಗಿಂತ ಶೀಘ್ರ ಡಿಲಿವರಿ, ಕಡಿಮೆ ಖರ್ಚು| ಸರಕುಗಳ ಟ್ರ್ಯಾಕಿಂಗ್‌ ವ್ಯವಸ್ಥೆ| ಮೂರೂ ಪ್ರಕಾರದ ಸರಕುಗಳಿಗೆ ಪ್ರತ್ಯೇಕ ದರಪಟ್ಟಿ ನಿಗದಿ| ಇತರೆ ನಿಗಮಕ್ಕಿಂತ ವಾಕರಸಾಸಂಗೆ ಹೆಚ್ಚಿನ ಆದಾಯ| 
 

More Income to NWKRTC for Bus Cargo Service grg
Author
Bengaluru, First Published Mar 25, 2021, 9:52 AM IST

ಮಯೂರ ಹೆಗಡೆ

ಹುಬ್ಬಳ್ಳಿ(ಮಾ.25): ಸರಕು ಸಾಗಣೆ ಸೌಲಭ್ಯ ಆರಂಭಿಸಿರುವ ವಾಕರಸಾಸಂ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಪ್ಪತ್ತು ದಿನಗಳಲ್ಲಿಯೇ ಉತ್ತಮ ಆದಾಯವೂ ಬಂದಿದೆ. ಅಲ್ಲದೆ, ಕಾರ್ಗೋ ಸೇವೆ ಆರಂಭಿಸಿದ ಎನ್‌ಇಕೆಆರ್‌ಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿಗಮಕ್ಕೆ ಹೋಲಿಕೆ ಮಾಡಿದರೆ ಹೆಚ್ಚಿನ ಆದಾಯ ಬಂದಿದೆ.

ಕೊರೋನಾ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿರುವ ಹಿನ್ನೆಲೆ ಹಾಗೂ ಸರಕು ಸಾಗಾಣಿಕೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಹಕ ಸ್ನೇಹಿ ತಂತ್ರಾಂಶ ಆಧಾರಿತ ನಿರ್ವಹಣಾ ವ್ಯವಸ್ಥೆಯೊಂದಿಗೆ ಆರಂಭಿಸಲಾದ ಕಾರ್ಗೋ ಸೇವೆ ಹೆಚ್ಚು ಜನಪ್ರಿಯವಾಗುತ್ತಿದೆ.

ಟ್ರ್ಯಾಕ್‌ ವ್ಯವಸ್ಥೆ

ಸರಕುಗಳನ್ನು ಕೋರಿಯರ್‌ ಸರಕುಗಳು, ಸಾಮಾನ್ಯ ಸರಕುಗಳು ಮತ್ತು ಹಾಳಾಗುವ ಸರಕುಗಳು (ಪೆರಿಶೇಬಲ್‌ ಲಗೇಜ್‌) ಎಂದು ಮೂರು ಪ್ರಕಾರಗಳಾಗಿ ವರ್ಗೀಕರಣ ಮಾಡಲಾಗಿದೆ. ಮೂರೂ ಪ್ರಕಾರದ ಸರಕುಗಳಿಗೆ ಪ್ರತ್ಯೇಕ ದರಪಟ್ಟಿ ನಿಗದಿಯಾಗಿದೆ. ರವಾನೆಗಾಗಿ ಸರಕನ್ನು ನೀಡುವವರ ಮೊಬೈಲ್‌ ದೂರವಾಣಿಗೆ ಎಸ್‌ಎಂಎಸ್‌ ಸಂದೇಶ ಬರುತ್ತದೆ. ಅದರ ಆಧಾರದಲ್ಲಿ ಗ್ರಾಹಕರು ವಿಳಾಸದಾರರಿಗೆ ವಿತರಣೆಯಾಗುವವರೆಗೆ ತಮ್ಮ ಪಾರ್ಸೆಲ್‌ ಮತ್ತು ಕೊರಿಯರ್‌ಗಳ ಸಾಗಾಣಿಕೆಯ ಪ್ರತಿ ಹಂತವನ್ನು ತಿಳಿದುಕೊಳ್ಳುವ ವ್ಯವಸ್ಥೆ ಇದೆ.

"ನಮ್ಮ ಕಾರ್ಗೋ” ಸೇವೆ ಲೋಕಾರ್ಪಣೆಗೊಳಿಸಿದ ಸಿಎಂ ಯಡಿಯೂರಪ್ಪ

ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ರಾಜ್ಯದ ಜಿಲ್ಲಾ ಕೇಂದ್ರಗಳು ಮತ್ತು ಪ್ರಮುಖ ತಾಲೂಕು ಕೇಂದ್ರಗಳು ಸೇರಿದಂತೆ ವಾಕರಸಾ ಸಂಸ್ಥೆಯ 26 ಸ್ಥಳಗಳಿಗೆ ಕಾರ್ಗೋ ಸೇವೆಯನ್ನು ಒದಗಿಸಲಾಗುತ್ತಿದೆ. ಇಲ್ಲಿಯೇ ಮುಂದಿನ ದಿನಗಳಲ್ಲಿ ಮುಂಗಡ ಕಾಯ್ದಿರಿಸುವ ಕೌಂಟರ್‌ಗಳಲ್ಲಿಯೇ ಪಾರ್ಸೆಲ್‌ಗಳನ್ನು ಡಿಲೇವರಿ ನೀಡುವ ವ್ಯವಸ್ಥೆಯನ್ನೂ ಮಾಡಿಕೊಳ್ಳುವ ಚಿಂತನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ತಡೆಗೆ ತಂಡ ರಚನೆ

ಬಸ್‌ಗಳಲ್ಲಿ ಅಧಿಕೃತವಾಗಿ ಸರಕನ್ನು ಸಾಗಿಸುವ ಮೊದಲು ಅಕ್ರಮವಾಗಿ ಸಾಕಷ್ಟು ಸರಕುಗಳು ಸಾಗಾಟ ಆಗುತ್ತಿತ್ತು. ಆದರೆ, ಇದೀಗ ನಿರ್ವಾಹಕರು, ಡ್ರೈವರ್‌ಗಳಿಗೆ ವೈಯಕ್ತಿಕವಾಗಿ ಹಣ ಪಡೆದು ಪಾರ್ಸೆಲ್‌ಗಳನ್ನು ಸಾಗಿಸದಂತೆ ಕಟ್ಟಪ್ಪಣೆ ಮಾಡಲಾಗಿದೆ. ಟಿಕೆಟ್‌ ಪರಿಶೀಲನೆ ಮಾಡುವ ತಂಡಕ್ಕೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದ್ದು, ಕಾರ್ಗೋ ಕೌಂಟರ್‌ಗಳು ಇರುವಲ್ಲಿಂದ ಬಸ್‌ಗಳಲ್ಲಿ ಅನಧಿಕೃತವಾಗಿ ಪಾರ್ಸೆಲ್‌ಗಳು ಕಂಡುಬಂದರೆ ದುಪ್ಪಟ್ಟು ದಂಡ ವಸೂಲಿ ಮಾಡಲು ಸೂಚಿಸಿದ್ದೇವೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ಮಾಹಿತಿ ನೀಡಿದ್ದಾರೆ.

ಇತರೆ ನಿಗಮಕ್ಕಿಂತ ಹೆಚ್ಚಿನ ಆದಾಯ

ಕಳೆದ ಮಾ. 22ರ ವರೆಗೆ ವಾಕರಸಾಸಂ 26 ಕೌಂಟರ್‌ಗಳ ಮೂಲಕ 4067 ಇನ್‌ವೈಸ್‌ (ಪಾರ್ಸೆಲ್‌) ಗಳ ಸಾಗಾಟ ನಡೆಸಿದ್ದು, 673833 ಆದಾಯ ಗಳಿಸಿದೆ. ಇದೆ ಸಂದರ್ಭದಲ್ಲಿ ಕಾರ್ಗೋ ಸೇವೆ ನೀಡುತ್ತಿರುವ ಈಕರಸಾಸಂ 27 ಕೌಂಟರ್‌ಗಳಲ್ಲಿ 2745 ಪಾರ್ಸೆಲ್‌ಗಳನ್ನು ಸಾಗಿಸಿ 444484 ಆದಾಯ ಪಡೆದಿದೆ. ಇನ್ನು ಕೆಎಸ್‌ಆರ್‌ಟಿಸಿ ರಾಜ್ಯದಲ್ಲಿ 35 ಕೌಂಟರ್‌ ಹಾಗೂ ಅಂತಾರಾಜ್ಯ 21 ಸೇರಿ ಒಟ್ಟಾರೆ 56 ಕೌಂಟರ್‌ ಹೊಂದಿದ್ದರೂ 6500 ಸರಕನ್ನು ಸಾಗಿಸಿ . 12,01350 ಆದಾಯ ಪಡೆದಿದೆ. ಹಾಗೆ ನೋಡಿದರೆ ರಾಜಧಾನಿ ಬೆಂಗಳೂರು ಸೇರಿ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಕ್ಕೆ ಸರಕು ಸಾಗಿಸುವ ಕೆಎಸ್‌ಆರ್‌ಟಿಸಿಯ ಆದಾಯ ಇನ್ನೂ ಹೆಚ್ಚಿರಬೇಕಿತ್ತು. ಈ ಹಿನ್ನೆಲೆಯಲ್ಲಿ ನೋಡಿದಾಗ ವಾಕರಸಾಸಂ ಹೆಚ್ಚಿನ ಆದಾಯ ಗಳಿಸಿದಂತಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಸರ್ಕಾರಿ ಬಸ್‌ಗಳಲ್ಲಿ ಇಂದಿನಿಂದ ಕಾರ್ಗೋ ಸೇವೆ

ಕಾರ್ಗೋ ಸೇವೆಯಿಂದ ಇಲ್ಲಿವರೆಗೆ ಬಂದ ಆದಾಯ

ವಿಭಾಗ ಪಾರ್ಸೆಲ್‌ ಆದಾಯ

ಹುಬ್ಬಳ್ಳಿ 1662 311712
ಧಾರವಾಡ 81 9198
ಹಾವೇರಿ 388 43929
ಗದಗ 203 26779
ಶಿರಸಿ 177 22883
ಬೆಳಗಾವಿ 481 89505
ಬಾಗಲಕೋಟೆ 773 131112
ಚಿಕ್ಕೋಡಿ 302 38715
ಒಟ್ಟೂ 4067 673833

ಕಾರ್ಗೋ ಸೇವೆ ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದೆ. ಖಾಸಗಿ ಸರಕು ಸಾಗಣೆಗಿಂತ ಕಡಿಮೆ ದರ ಹಾಗೂ ಶೀಘ್ರವಾಗಿ ತಲುಪುವ ಕಾರಣ ಹೆಚ್ಚಿನ ಜನತೆ ಆಸಕ್ತಿ ತೋರುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯದ ನಿರೀಕ್ಷೆಯಿದೆ ಎಂದು ವಾಕರಸಾಸಂ ಚೀಫ್‌ ಟ್ರಾಫಿಕ್‌ ಮ್ಯಾನೇಜರ್‌ ನಿತಿನ್‌ ಹೆಗಡೆ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಕಾರ್ಗೋ ಸೇವೆಗೆ ಸ್ಪಂದನೆ ಉತ್ತಮವಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ಹೇಳಿದ್ದಾರೆ.
 

Follow Us:
Download App:
  • android
  • ios