ಬಿಎಂಟಿಸಿ ಹೊರತುಪಡಿಸಿ ಇತರೆ ಸಾರಿಗೆ ನಿಗಮಗಳಲ್ಲಿ ‘ನಮ್ಮ ಕಾರ್ಗೋ’| 109 ಸ್ಥಳಗಳಿಂದ ಕಾರ್ಯಾಚರಣೆ| 100 ಕೋಟಿ ರು. ಲಾಭ ನಿರೀಕ್ಷೆ| ಲಾಕ್‌ಡೌನ್‌ನಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟ| ಇನ್ನೂ 3000 ಬಸ್‌ ಖರೀದಿ|ಸಾರಿಗೆ ನೌಕರರ 6 ಬೇಡಿಕೆಗಳನ್ನು ಈಡೇರಿಸಿದ್ದೇವೆ: ಲಕ್ಷ್ಮಣ ಸವದಿ| 

ಬೆಂಗಳೂರು(ಫೆ.26): ನಷ್ಟದ ಸುಳಿಯಿಂದ ಹೊರಗೆ ಬರಲು ರಾಜ್ಯ ಸಾರಿಗೆ ಸಂಸ್ಥೆಗಳು ಹೊಸದಾಗಿ ‘ನಮ್ಮ ಕಾರ್ಗೋ’ ಸೇವೆಯನ್ನು ಇಂದಿನಿಂದ(ಶುಕ್ರವಾರ) ಆರಂಭಿಸಲಿದ್ದು, ಮೊದಲ ಹಂತದಲ್ಲಿ 109 ಸ್ಥಳಗಳಿಂದ ಕಾರ್ಯಾಚರಣೆ ಶುರುವಾಗಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೊರತುಪಡಿಸಿ ಉಳಿದ ಮೂರು ನಿಗಮಗಳಲ್ಲಿ ಹೊಸ ಸೇವೆ ಆರಂಭಿಸಲಾಗುವುದು. ಅಂತಾರಾಜ್ಯಗಳ ಸರಕು ಸಾಗಾಣಿಕೆ ಸೇವೆ ಸಹ ಆರಂಭಿಸಲು ನಿರ್ಧರಿಸಲಾಗಿದೆ. ಈ ಯೋಜನೆಯಿಂದ ವಾರ್ಷಿಕ 80ರಿಂದ 100 ಕೋಟಿ ರು. ಲಾಭ ಬರುವ ನಿರೀಕ್ಷೆ ಇದೆ. ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸುವ ಎಲ್ಲ ಸ್ಥಳಗಳಲ್ಲಿ ಈ ಸೇವೆ ಲಭ್ಯವಿರುತ್ತದೆ. ಹಳ್ಳಿಯಿಂದ ಜಿಲ್ಲೆಗಳಿಗೂ ಸಹ ಸೇವೆ ನೀಡಲಾಗುವುದು ಎಂದರು.

ಹೆಚ್ಚುತ್ತಿರುವ ನಷ್ಟದ ಪ್ರಮಾಣ:

ಕೊರೋನಾ ಲಾಕ್‌ಡೌನ್‌ ಸೇರಿದಂತೆ ನಾನಾ ಕಾರಣಗಳಿಂದ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದು, ಕೋವಿಡ್‌ ನಂತರ ಈವರೆಗೆ ಸಾರಿಗೆ ಸಂಸ್ಥೆಗಳಿಗೆ ನಾಲ್ಕು ಸಾವಿರ ಕೋಟಿ ರು. ಆದಾಯ ಕಡಿಮೆಯಾಗಿದೆ. ಕೋವಿಡ್‌ ಪೂರ್ವದಲ್ಲಿ ನಷ್ಟದ ಪ್ರಮಾಣ 1508 ಕೋಟಿ ರು. ಇದ್ದರೆ, ಕೋವಿಡ್‌ ನಂತರ ನಷ್ಟದ ಪ್ರಮಾಣ 2780 ಕೋಟಿ ರು.ಗೆ ಏರಿಕೆಯಾಗಿದೆ. ಕೋವಿಡ್‌ ನಂತರ ಬಿಎಂಟಿಸಿಯ ನಷ್ಟದ ಪ್ರಮಾಣ 680 ಕೋಟಿ ರು.ಗಳಿಗೆ ಏರಿದೆ. ಹೀಗಿದ್ದರೂ ಸಿಬ್ಬಂದಿಗೆ ವೇತನ ಸ್ಥಗಿತಗೊಳಿಸದೇ ರಾಜ್ಯ ಸರ್ಕಾರದಿಂದ 1780 ಕೋಟಿ ರು. ಪಡೆದು 1.60 ಲಕ್ಷ ಸಿಬ್ಬಂದಿಗೆ ವೇತನ ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.

ಡೀಸೆಲ್ ದರ ಏರಿಕೆ: ಬಸ್ ಟಿಕೇಟ್ ದರ ಹೆಚ್ಚಳ ಬಗ್ಗೆ ಸ್ಪಷ್ಟನೆ ಕೊಟ್ಟ ಸವದಿ

ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‌ ಪಾಸ್‌ ನೀಡಿರುವ ಸಂಬಂಧ 2013ರಿಂದ 2980 ಕೋಟಿ ರು. ಬಾಕಿ ಸರ್ಕಾರದಿಂದ ಬರಬೇಕಾಗಿದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದರೂ ವಿದ್ಯಾರ್ಥಿಗಳ ಬಸ್‌ ಪಾಸ್‌ ದರವನ್ನು ಹೆಚ್ಚಳ ಮಾಡಿಲ್ಲ ಎಂದ ಸಚಿವರು, ವಿದ್ಯಾರ್ಥಿಗಳಿಗೆ ‘ಸೇವಾ ಸಿಂಧು’ ಯೋಜನೆಯಡಿ ಬಸ್‌ ಪಾಸ್‌ ನೀಡಲಾಗುತ್ತಿದ್ದು, ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಹೊಸ ಬಸ್‌ ಖರೀದಿಗೆ ಮನವಿ

10 ಲಕ್ಷ ಕಿ.ಮೀ. ಸಂಚರಿಸಿರುವ ಸುಮಾರು 2500 ಬಸ್‌ಗಳಿದ್ದು, ಇವುಗಳನ್ನು ಬದಲಾಯಿಸಬೇಕಾಗಿದೆ. ಹೀಗಾಗಿ ಹೊಸದಾಗಿ ಮೂರು ಸಾವಿರ ಬಸ್‌ ಖರೀದಿಸುವ ಅವಶ್ಯಕತೆ ಇದೆ. ಈಗಾಗಲೇ ಮೂರು ಕಂಪನಿಗಳು ಬಸ್‌ ಪೂರೈಕೆ ಸಂಬಂಧ ಟೆಂಡರ್‌ ಸಲ್ಲಿಸಿವೆ ಎಂದರು.

ಆರು ಬೇಡಿಕೆ ಈಡೇರಿಕೆ:

ಸಾರಿಗೆ ನೌಕರರು ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಆರು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಆರೋಗ್ಯ ಭಾಗ್ಯ ಯೋಜನೆ ಕಲ್ಪಿಸಲಾಗಿದೆ. ಕೊರೋನಾ ಕರ್ತವ್ಯದ ವೇಳೆ 112 ನೌಕರರು ಮೃತಪಟ್ಟಿದ್ದು, ಮೃತಪಟ್ಟಕುಟುಂಬಗಳಿಗೆ 15 ದಿನದಲ್ಲಿ 30 ಲಕ್ಷ ರು.ಗಳ ಪರಿಹಾರ ನೀಡಲಾಗುವುದು. ಅದೇ ರೀತಿ ಹಿರಿಯ ಅಧಿಕಾರಿಗಳಿಂದ ಕಿರುಕುಳ ಆಗುವುದನ್ನು ತಡೆಯಲು ಸಮಿತಿ ರಚನೆ ಮಾಡಲಾಗಿದೆ. ಆರನೇ ವೇತನ ಆಯೋಗದ ಶಿಫಾರಸಿನ ಅಡಿ ವೇತನ ಹೆಚ್ಚಳ ಸಂಬಂಧ ಸಭೆಗಳನ್ನು ನಡೆಸಲಾಗಿದೆ. ಅಂತರ-ನಿಗಮ ವರ್ಗಾವಣೆ ಬಗ್ಗೆ ಸಹ ಸಮಿತಿ ರಚಿಸಲಾಗಿದೆ ಎಂದು ವಿವರಿಸಿದರು.

ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್‌ ಅವರಿಗೂ ಸಾರಿಗೆ ಇಲಾಖೆಗೂ ಯಾವುದೇ ಸಂಬಂಧವಿಲ್ಲ. ಯಾವುದೇ ಸಮಸ್ಯೆ ಇದ್ದರೆ ಸಿಬ್ಬಂದಿ ತಮ್ಮ ಬಳಿ ಹೇಳಿಕೊಳ್ಳಬೇಕು ಎಂದು ಸಚಿವ ಲಕ್ಷ್ಮಣ ಸವದಿ ಸ್ಪಷ್ಟವಾಗಿ ಹೇಳಿದರು.

ಏನಿದು ಕಾರ್ಗೋ ಸೇವೆ?

ಸಾರಿಗೆ ಸಂಸ್ಥೆಗಳ ಆದಾಯ ಹೆಚ್ಚಿಸುವ ಉದ್ದೇಶದಿಂದ ಸರಕು ಸಾಗಣೆ ಸೇವೆಗು ಅವಕಾಶ ಮಾಡಿಕೊಡಲಾಗುತ್ತಿದೆ. ರಾಜ್ಯವಷ್ಟೇ ಅಲ್ಲ ಅಂತಾರಾಜ್ಯಗಳಿಗೂ ಈ ಸೇವೆ ಲಭ್ಯ. ಕರ್ನಾಟಕ ಸರ್ಕಾರದ ಸಾರಿಗೆ ಸೌಲಭ್ಯವಿರುವ ಎಲ್ಲಾ ಕೇಂದ್ರಗಳಲ್ಲಿಯೂ ಈ ಸೇವೆ ಇರಲಿದೆ.