'ಕಾಂಗ್ರೆಸ್‌ನಿಂದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ'
* ಸಚಿವ ಹಾಲಪ್ಪ ಆಚಾರ್‌ಹೇಳಿಕೆ ಸತ್ಯಕ್ಕೆ ದೂರವಾದದ್ದು
* ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡಿದ್ದು ಸಿದ್ದರಾಮಯ್ಯ
* ಇದೀಗ ನಮ್ಮ ಯೋಜನೆ ಎಂದು ಬಿಜೆಪಿ ಹೇಳುವುದು ಎಷ್ಟು ಸರಿ?
ಯಲಬುರ್ಗಾ(ಅ.07): ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್(Congress) ಸರ್ಕಾರವಧಿಯಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ(Iirrigation Projects) ಸೇರಿದಂತೆ ನಾನಾ ಯೋಜನೆಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ ಅದು ಬಿಜೆಪಿಯವರ ಕಣ್ಣಿಗೆ ಕಾಣುತ್ತಿಲ್ಲ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದ್ದಾರೆ.
ಪಟ್ಟಣದಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು(BJP) ಎಲ್ಲ ಯೋಜನೆಗಳನ್ನು ನಾವೇ ತಂದಿದ್ದೇವೆ ಎಲ್ಲವೂ ನಮ್ಮ ಯೋಜನೆಗಳೆಂದು ಸುಳ್ಳು ಹೇಳಲು ಹೊರಟಿದ್ದಾರೆ. ಇದರ ಬಗ್ಗೆ ಅವರ ಹತ್ತಿರ ಯಾವುದಾದರೂ ಅನುದಾನ ಬಿಡುಗಡೆ ಮಾಡಿಸಿದ ದಾಖಲೆಗಳಿದ್ದರೆ ಜನತೆ ಮುಂದೆ ತೋರಿಸಲಿ ಎಂದು ಸವಾಲು ಹಾಕಿದರು.
ನೀರಾವರಿ ಯೋಜನೆಯಲ್ಲಿ ಕಾಂಗ್ರೆಸ್ಸಿನ ಕೊಡುಗೆ ಶೂನ್ಯ ಎಂದು ಸಚಿವರಾದ ಹಾಲಪ್ಪ ಆಚಾರ್ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದದ್ದು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 290 ಕೋಟಿ ಅನುದಾನವನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾಗ ಅನುದಾನ ನೀಡಿದ್ದಾರೆ. ಇದೀಗ ನಮ್ಮ ಯೋಜನೆ ಎಂದು ಬಿಜೆಪಿಯವರು ಹೇಳುವುದು ಎಷ್ಟು ಸರಿ ಎಂದು ಆರೋಪಿಸಿದರು.
'ಬಿಜೆಪಿ ಪಕ್ಷದ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆ'
ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಈಗಾಗಲೇ ತಮ್ಮ ಅಧಿಕಾರವಧಿಯಲ್ಲಿ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿ ಹಾಗೂ ಸಮಿಶ್ರ ಸರ್ಕಾರದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ಎಲ್ಲ ನೀರಾವರಿ ಯೋಜನೆಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಿಸಲಾಗಿದೆ ಎನ್ನುವುದರ ಬಗ್ಗೆ ದಾಖಲೆ ಸಮೇತ ಪುಸ್ತಕವನ್ನು ಬಿಡುಗಡೆ ಕೂಡ ಮಾಡಿದ್ದಾರೆ. ಇದನ್ನು ಬಿಜೆಪಿಯವರು ಸಮಗ್ರವಾಗಿ ಅಧ್ಯಯನ ಮಾಡಿ ಮಾತನಾಡುವುದನ್ನು ಕಲಿಯಬೇಕು ಎಂದು ತಿರುಗೇಟು ನೀಡಿದರು.
ವಿಚಾರಗೋಷ್ಠಿ:
ತುಂಗಭದ್ರಾ ಮತ್ತು ಕೃಷ್ಣಾ ನದಿಗಳಿಂದ ಕೆರೆಗಳ ತುಂಬಿಸುವ ವಿಚಾರಗೋಷ್ಠಿ ಕಾರ್ಯಕ್ರಮ ಅ. 7, 8, 9, 10 ರಂದು ತಾಲೂಕಿನ 37 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಜಿ ಬಸವರಾಜ ರಾಯರಡ್ಡಿ ಅವರು ವಿಚಾರಗೋಷ್ಠಿ ನಡೆಸಲಿದ್ದಾರೆ ಎಂದರು.
ನ್ಯಾಯವಾದಿ ಬಿ.ಎಂ. ಶಿರೂರು ಹಾಗೂ ರಾಜಶೇಖರ ನಿಂಗೋಜಿ ಮಾತನಾಡಿದರು. ಜಿಪಂ ಸದಸ್ಯ ರಾಮಣ್ಣ ಸಾಲಭಾವಿ, ಅಶೋಕ ತೋಟದ, ಎಂ.ಎಫ್. ನದಾಫ್, ರೇವಣೆಪ್ಪ ಸಂಗಟಿ, ಸಂಗಣ್ಣ ಟೆಂಗಿನಕಾಯಿ, ಬಸವರಾಜ ಪೂಜಾರ, ಮಹಾಂತೇಶ ಗಾಣಿಗೇರ, ರಹೀಮಾನಸಾಬ ಮಕ್ಕಪ್ಪನವರ್, ಡಾ. ಶಿವನಗೌಡ ದಾನರಡ್ಡಿ, ಬಸವರಾಜ ಕುಡಗುಂಟಿ, ಈಶ್ವರ ಅಟಮಾಳಗಿ, ಸಂಗೂ ಗುತ್ತಿ, ಆನಂದ ಉಳ್ಳಾಗಡ್ಡಿ, ರಹಿಮಾನಸಾಬ ನಾಯಕ, ಸುರೇಶ ದಾನಕೈ ಮತ್ತಿತರರು ಇದ್ದರು.