4 ಗ್ಯಾರಂಟಿ ಯೋಜನೆಗೆ ಬೆಂಗ್ಳೂರು ನಗರದಲ್ಲೇ ಹೆಚ್ಚು ಫಲಾನುಭವಿಗಳು: ವರ್ಷಕ್ಕೆ 40,000 ಉಳಿಕೆ..!
ಕುಟುಂಬ ನಿರ್ವಹಣೆಯ ಹೊಣೆ ಹೊತ್ತ ಮಹಿಳೆಯರು ನಿತ್ಯ ಎದುರಿಸುತ್ತಿರುವ ಬೆಲೆ ಏರಿಕೆಯ ಸಂಕಷ್ಟಗಳನ್ನು ತಗ್ಗಿಸಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ಸರ್ಕಾರವು ಬುಧವಾರವಷ್ಟೆಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದೆ.

ಬೆಂಗಳೂರು(ಆ.31): ರಾಜ್ಯ ಸರ್ಕಾರ ಇದುವರೆಗೆ ಜಾರಿಗೊಳಿಸಿರುವ ನಾಲ್ಕೂ ಗ್ಯಾರಂಟಿ ಯೋಜನೆಗಳಲ್ಲಿ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿದ್ದಾರೆ.
ಕುಟುಂಬ ನಿರ್ವಹಣೆಯ ಹೊಣೆ ಹೊತ್ತ ಮಹಿಳೆಯರು ನಿತ್ಯ ಎದುರಿಸುತ್ತಿರುವ ಬೆಲೆ ಏರಿಕೆಯ ಸಂಕಷ್ಟಗಳನ್ನು ತಗ್ಗಿಸಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ಸರ್ಕಾರವು ಬುಧವಾರವಷ್ಟೆಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯಲ್ಲೇ ಒಟ್ಟು 7,79,603 ಲಕ್ಷ ಮನೆಯೊಡತಿಯರು ನೋಂದಾಯಿಸಿ ಕೊಂಡಿದ್ದಾರೆ. ಆಗಸ್ಟ್ 30ರಿಂದ ಎಲ್ಲ ನೋಂದಾಯಿತ ಮಹಿಳೆಯರ ಬ್ಯಾಂಕ್ ಖಾತೆಗೆ ಮಾಸಿಕ .2,000 ನಗದು ನೇರ ವರ್ಗಾವಣೆಯಾಗಲಿದೆ.
ಮಹಿಳೆಯರಿಗೆ ಊಟ ಹಾಕಿಸಿ ಗೃಹಲಕ್ಷ್ಮಿ ಅದ್ಧೂರಿಯಾಗಿ ಉದ್ಘಾಟಿಸಿ ಬಿಜೆಪಿ ಶಾಸಕ..!
ಸರ್ಕಾರ ಮೊದಲು ಆರಂಭಿಸಿದ ಶಕ್ತಿ ಯೋಜನೆಯಡಿ ನಗರ ಜಿಲ್ಲೆಯಾದ್ಯಾಂತ ನಿತ್ಯ 20.10 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ತಮ್ಮ ಕೆಲಸ ಕಾರ್ಯ ನಿಮಿತ್ತ ಉಚಿತವಾಗಿ ಸಂಚರಿಸುತ್ತಿದ್ದಾರೆ ಎನ್ನುತ್ತವೆ ಸಾರಿಗೆ ಇಲಾಖೆಯ ಅಂಕಿ ಅಂಶಗಳು. ಯೋಜನೆ ಬಗ್ಗೆ ನಗರದ ಸ್ತ್ರೀಯರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಶಕ್ತಿ ಯೋಜನೆ ಬಳಿಕ ನನಗೆ ಮಾಸಿಕ .1200 ರಂತೆ ವರ್ಷದಲ್ಲಿ ಸುಮಾರು .15 ಸಾವಿರದಷ್ಟುಉಳಿತಾಯವಾಗಲಿದೆ. ಇದು ನನ್ನ ಮನೆಯ ಇನ್ನಿತರೆ ಖರ್ಚು ವೆಚ್ಚಕ್ಕೆ ಬಳಸಬಹುದಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಶಾಂತಿನಗರದ ನಿವಾಸಿ ಪೂರ್ಣಿಮಾ.
ಇನ್ನು, ಗೃಹಜ್ಯೋತಿ ಯೋಜನೆಯಡಿ ನಗರ ಜಿಲ್ಲೆಯಲ್ಲಿ ಶೇ.68ರಷ್ಟುಅಂದರೆ, 7,81,842 ಗ್ರಾಹಕರು ಫಲಾನುಭವಿಗಳಾಗಿದ್ದಾರೆ. ಆಗಸ್ಟ್ 1ರಿಂದ ನೋಂದಾಯಿತ ಗ್ರಾಹಕರಿಗೆ ಶೂನ್ಯ ಬಿಲ್ಲನ್ನು ವಿತರಿಸಲಾಗುತ್ತಿದೆ. ಅದೇ ರೀತಿ ಅನ್ನ ಭಾಗ್ಯ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶದ ವಲಯಗಳ ವ್ಯಾಪ್ತಿಯಲ್ಲಿ 19,352 ಅಂತ್ಯೋದಯ ಪಡಿತರ ಚೀಟಿದಾರರು ಹಾಗೂ 9,36,091 ಎಪಿಎಲ್ ಕಾರ್ಡುದಾರರಿಗೆ ಒಟ್ಟು .45.43 ಕೋಟಿಗಳನ್ನು ಪಾವತಿಸಲಾಗಿದೆ.
ವರ್ಷಕ್ಕೆ 40 ಸಾವಿರ ಉಳಿಕೆ: ಫಲಾನುಭವಿ
ಸರ್ಕಾರದ ಈ ನಾಲ್ಕೂ ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ.ಆರ್.ಪುರದ ರವಿ ಎಂಬುವರ ಕುಟುಂಬ, ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಮಾತ್ರ ದುಡಿಮೆ ಮಾಡುತ್ತಿದ್ದೇವೆ. ನಮ್ಮ ದುಡಿಮೆ ಮಕ್ಕಳ ಶಾಲೆ, ಕಾಲೇಜು ಹಾಗೂ ತಾಯಿಯ ಔಷಧಿಗಳಿಗೆ ಸಾಲುವುದಿಲ್ಲ. ಆದರೆ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದಾಗಿ ವರ್ಷಕ್ಕೆ ಸುಮಾರು .40 ಸಾವಿರ ಉಳಿತಾಯವಾಗಲಿದೆ. ಇದನ್ನು ನಮ್ಮ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಮನೆಯ ಇತರೆ ಖರ್ಚು ವೆಚ್ಚಗಳಿಗೆ ಬಳಸಿಕೊಳ್ಳಬಹುದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.