ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಲ್ಲಿ ಮುಂಗಾರು ಮಳೆ ವಿಳಂಬವಾಗಿರುವುದರಿಂದ ರೈತರು ತೀವ್ರ ಆತಂಕದಲ್ಲಿದ್ದಾರೆ. ಸಕಾಲಿಕ ಮಳೆಯಾಗದ ಕಾರಣ ಗದ್ದೆ ಉಳುಮೆ, ಬಿತ್ತನೆ ಹಾಗೂ ನಾಟಿ ಕಾರ್ಯಗಳು ಸ್ಥಗಿತಗೊಂಡಿದ್ದು, ಇದು ಭತ್ತದ ಇಳುವರಿ ಮತ್ತು ಕೃಷಿ ವೆಚ್ಚದ ಮೇಲೆ ಪರಿಣಾಮ ಬೀರುವ ಭೀತಿ ಎದುರಾಗಿದೆ.
ವರದಿ: ರಾಂ ಅಜೆಕಾರು
ಕಾರ್ಕಳ: ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ರೈತರು ಇದೀಗ ಮಳೆ ಕೊರತೆಯಿಂದ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಸಕಾಲಿಕ ಮಳೆಯಾಗದ ಹಿನ್ನೆಲೆಯಲ್ಲಿ ಗದ್ದೆ ಉಳುಮೆ, ಬಿತ್ತನೆ ಹಾಗೂ ನಾಟಿ ಕಾರ್ಯಗಳು ವಿಳಂಬವಾಗುತ್ತಿದ್ದು, ರೈತರಲ್ಲಿ ಅನಿಶ್ಚಿತತೆ ಮನೆ ಮಾಡಿದೆ.
ಪ್ರತಿ ವರ್ಷ ಮುಂಗಾರು ಆರಂಭವಾಗುತ್ತಿದ್ದಂತೆ ಕೃಷಿ ಕಾರ್ಯಗಳು ಚುರುಕುಗೊಳ್ಳುವ ಕಾರ್ಕಳ ಮತ್ತು ಹೆಬ್ರಿ ಭಾಗಗಳಲ್ಲಿ ಈ ಬಾರಿ ಹೊರ ಜಿಲ್ಲೆಗಳಿಂದಲೂ ಟ್ರಾಕ್ಟರ್‌ಗಳು ಆಗಮಿಸಿ ಉಳುಮೆ ಕಾರ್ಯಕ್ಕೆ ಸಿದ್ಧವಾಗಿವೆ. ಆದರೆ ಮಳೆ ಕೊರತೆಯಿಂದಾಗಿ ಸಾಕಷ್ಟು ರೈತರು ಇನ್ನೂ ಗದ್ದೆಗೆ ಇಳಿಯಲು ಸಾಧ್ಯವಾಗಿಲ್ಲ. ಮಳೆ ಬರುವ ನಿರೀಕ್ಷೆಯಲ್ಲಿಯೇ ಹಲವರು ಕಾಯುವ ಪರಿಸ್ಥಿತಿಯಲ್ಲಿದ್ದಾರೆ.
ಮಳೆಯ ಅಭಾವ ದೊಡ್ಡ ಅಡ್ಡಿ
ಕೃಷಿ ಇಲಾಖೆಯು 2026ರ ಮುಂಗಾರು ಹಂಗಾಮಿಗೆ ಜಿಲ್ಲೆಯಾದ್ಯಂತ 37,742 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಿದೆ. ಆದರೆ ಕಳೆದ ವರ್ಷ ಉತ್ತಮ ಮಳೆಯಿದ್ದರೂ ಕೇವಲ 25,997 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತದ ಬೆಳೆ ಬೆಳೆಯಲಾಗಿತ್ತು. ಸುಮಾರು 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗುರಿ ಸಾಧಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಗುರಿ ತಲುಪುವ ನಿಟ್ಟಿನಲ್ಲಿ ರೈತರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ಮಳೆಯ ಅಭಾವ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.
ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಲ್ಲಿ ಒಟ್ಟು 29,044 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಇದರಲ್ಲಿ ಅಡಕೆ 9,097 ಹೆಕ್ಟೇರ್, ತೆಂಗು 8,294 ಹೆಕ್ಟೇರ್, ಬಾಳೆ 896 ಹೆಕ್ಟೇರ್, ಗೇರು 1,576 ಹೆಕ್ಟೇರ್ ಹಾಗೂ ಕಾಳುಮೆಣಸು 1,034 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಒಟ್ಟಾರೆ 24,480 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ವ್ಯಾಪಿಸಿಕೊಂಡಿವೆ. ಆದರೆ ಮಳೆ ಕೊರತೆಯಿಂದ ತೋಟಗಾರಿಕಾ ಬೆಳೆಗಳ ಮೇಲೂ ಪರಿಣಾಮ ಬೀಳುವ ಭೀತಿ ಎದುರಾಗಿದೆ.
ಆರಂಭಿಕ ಮಳೆ ಸಿಗದಿದ್ದರೆ ನಾಟಿ ಕಾರ್ಯ ಸಂಪೂರ್ಣ ಹಿನ್ನಡೆ
ಕಳೆದ ಕೆಲವು ವರ್ಷಗಳಿಂದ ಎಲ್‌ನಿನೋ ಸೇರಿದಂತೆ ವಿವಿಧ ಹವಾಮಾನ ವೈಪರೀತ್ಯಗಳು ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿವೆ. ಈ ಬಾರಿ ಕೂಡ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ರೈತರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಭತ್ತ ಬೆಳೆಗೆ ಅತ್ಯಂತ ಮುಖ್ಯವಾದ ಆರಂಭಿಕ ಮಳೆ ಸಿಗದಿದ್ದರೆ ನಾಟಿ ಕಾರ್ಯ ಸಂಪೂರ್ಣವಾಗಿ ಹಿನ್ನಡೆಯಾಗುವ ಸಾಧ್ಯತೆಯಿದೆ.
ಈಗಲೇ ಮಳೆ ಆರಂಭವಾಗದಿದ್ದರೆ ಕೃಷಿ ವೆಚ್ಚ ಹೆಚ್ಚಾಗಲಿದೆ. ನಾಟಿ ವಿಳಂಬವಾದರೆ ಇಳುವರಿಯೂ ಕುಸಿಯಬಹುದು ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳ ಮೇಲೆ ಅವಲಂಬಿತವಾಗಿರುವ ಸಾವಿರಾರು ಕುಟುಂಬಗಳ ಬದುಕು ಈ ಬಾರಿ ಮುಂಗಾರು ಮಳೆಯ ಮೇಲೆಯೇ ನಿಂತಿದೆ.
ಮಳೆ ಇನ್ನಷ್ಟು ವಿಳಂಬವಾದರೆ ಭತ್ತದ ಉತ್ಪಾದನೆ ಕುಸಿಯುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಅಕ್ಕಿಯ ಬೆಲೆಯೂ ಏರಿಕೆಯಾಗುವ ಸಾಧ್ಯತೆಯನ್ನು ಕೃಷಿಕರು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಕಾರ್ಕಳ ಮತ್ತು ಹೆಬ್ರಿ ಭಾಗದ ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದು, ಆಕಾಶದತ್ತ ಕಣ್ಣಿಟ್ಟು ಕಾಯುವಂತಾಗಿದೆ.
*ಸಾಮಾನ್ಯವಾಗಿ ಜೂನ್ ಎರಡನೇ ವಾರದಲ್ಲೇ ಗದ್ದೆ ನಾಟಿ ಕಾರ್ಯ ಆರಂಭಿಸುತ್ತಿದ್ದೆವು. ಆದರೆ ಈ ಬಾರಿ ಸಮರ್ಪಕ ಮಳೆಯಾಗದ ಕಾರಣ ಉಳುಮೆ ನಡೆಸಿದ ಹೊಲಗಳಲ್ಲಿಯೂ ನೀರಿನ ಕೊರತೆ ಎದುರಾಗಿದೆ. ಹೀಗಾಗಿ ನಾಟಿ ಕಾರ್ಯ ಆರಂಭಿಸಲು ಸಾಧ್ಯವಾಗಿಲ್ಲ. ಮುಂದಿನ ಕೆಲ ದಿನಗಳಲ್ಲಿ ಉತ್ತಮ ಮಳೆಯಾದರೆ ಜುಲೈ ತಿಂಗಳಲ್ಲಿ ನಾಟಿ ಕಾರ್ಯ ಆರಂಭವಾಗುವ ನಿರೀಕ್ಷೆಯಿದೆ.
-ಕೃಷ್ಣ ನಾಯಕ್, ಕೃಷಿಕರು ಚಿಕ್ಕಲ್ ಬೆಟ್ಟು


