ಶಿವಮೊಗ್ಗ[ಜ.03] ಮಂಗನ ಕಾಯಿಲೆ ಉಲ್ಬಣಗೊಂಡು ನಾಲ್ಕು ಜೀವಗಳು ಬಲಿಪಡೆದರೂ ಸರ್ಕಾರ ಎಚ್ಚೆತ್ತುಕೊಳ್ಳದಿರುವುದನ್ನು ಖಂಡಿಸಿ ಸಾಗರ ಬಿಜೆಪಿ ಶಾಸಕ ಮೈತ್ರಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಮನೆಯೆದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಈಗಾಗಲೇ ಸಾಗರ ತಾಲೂಕಿನಲ್ಲಿ ಪಾರ್ಶ್ವನಾಥ್ ಜೈನ್, (45), ಕೃಷ್ಣಪ್ಪ (57), ಮಂಜುನಾಥ್ (22), ಲೋಕರಾಜ್ ಜೈನ್ (28) ಎನ್ನುವವರು ಮೃತಪಟ್ಟಿದ್ದಾರೆ. ಇಂದು ಶ್ವೇತಾ ಎಂಬ ಮಗು ಕೂಡಾ ಗಂಭೀರ ಸ್ಥಿತಿಯಲ್ಲಿದೆ. ಇಷ್ಟಾದರೂ ಯಾವ ಆರೋಗ್ಯ ಅಧಿಕಾರಿಗಳು ಈ ಕುರಿತಂತೆ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಮಂಗನಕಾಯಿಲೆ ಬಗ್ಗೆ ಶಿವಮೊಗ್ಗ ಅಥವಾ ಸಾಗರದಲ್ಲಿ ಪ್ರಯೋಗಾಲಯ ಮಾಡಿ ಎಂದರೂ ಇವತ್ತಿನವರೆಗೆ ಮಾಡಿಲ್ಲ. ಮಂಗನಕಾಯಿಲೆ ಬಗ್ಗೆ ಖಚಿತಪಡಿಸಿಕೊಳ್ಳಲು ವರದಿಗಳನ್ನು ಪುಣೆಗೆ ಕಳಿಸಬೇಕು. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಿ ಎಂದರೂ ತಮ್ಮ ಮನವಿಯನ್ನು ಸಿಎಂ, ಆರೋಗ್ಯ ಸಚಿವರು ಕಿವಿ ಮೇಲೆ ಹಾಕಿಕೊಳ್ತಿಲ್ಲ ಎಂದು ಆರೋಪಿಸಿದ್ದಾರೆ.

ಬೇಳೂರು ಗೋಪಾಲಕೃಷ್ಣ ವಿರುದ್ಧ ಹಾಲಪ್ಪ ಗರಂ

ಕಳೆದ ಬಾರಿ ಉಡುಪಿ ಪುತ್ತೂರು ಭಾಗದಲ್ಲೂ ಮಂಗನಕಾಯಿಲೆ ಸಮಸ್ಯೆ ಕಂಡುಬಂದಿತ್ತು, ಜತೆಗೆ ಬೆಳ್ತಂಗಡಿ, ತೀರ್ಥಹಳ್ಳಿಯಲ್ಲೂ ಕಾಣಿಸಿಕೊಂಡಿತ್ತು. ದಿನೇದಿನೇ ಮಂಗನಕಾಯಿಲೆ ಉಲ್ಬಣವಾಗುತ್ತಿದ್ದು, ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ಪರಿಸ್ಥಿತಿ ಕೈಮೀರಲಿದೆ ಎಂದು ಹರತಾಳು ಹಾಲಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.