ಶಂಕಿತ ಉಗ್ರರ ಬಂಧನ: ಯುವಕರು ತಪ್ಪಾದ ದಾರಿ ಹಿಡಿಯುತ್ತಿರುವುದು ಸತ್ಯ, ಮಹಮ್ಮದ್ ನಲಪಾಡ್
ನಿರುದ್ಯೋಗ ಇರುವ ಕಾರಣ ಯುವಕರು ತಪ್ಪು ದಾರಿ ಹಿಡಿದಿದ್ದಾರೆ. ಇದಕ್ಕೆ ಬಿಜೆಪಿಯೇ ಹೊಣೆ. ಕೆಲಸ ಇದ್ದರೆ ಯುವಕರಿಗೆ ತಪ್ಪು ದಾರಿಗೆ ತುಳಿಯುವ ಯೋಚನೆ ಬರಲ್ಲ ಎಂದ ನಲಪಾಡ್
ಮೈಸೂರು(ಸೆ.22): ಡಿಗ್ರಿ ಪಡೆದ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಹೀಗಾಗಿ ಅವರು ಕ್ರೈಂ ದಾರಿ ಹಿಡಿಯುತ್ತಿದ್ದಾರೆ. ತಪ್ಪಾದ ದಾರಿ ಹೋಗುತ್ತಿದ್ದಾರೆ. ಇದೇ ನಡೆಯುತ್ತಿರುವುದು. ಐಸಿಸ್ ಸಂಘಟನೆ ಅಂತಲ್ಲ. ಯುವಕರು ತಪ್ಪಾದ ದಾರಿ ಹಿಡಿಯುತ್ತಿರುವುದು ಸತ್ಯ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ತಿಳಿಸಿದರು.
ಶಿವಮೊಗ್ಗದಲ್ಲಿ ಐಸಿಸ್ ಸಂಪರ್ಕದಲ್ಲಿದ್ದ ಯುವಕರ ಬಂಧನ ವಿಚಾರಕ್ಕೆ ಮೈಸೂರಿನಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ನಿರುದ್ಯೋಗ ಇರುವ ಕಾರಣ ಯುವಕರು ತಪ್ಪು ದಾರಿ ಹಿಡಿದಿದ್ದಾರೆ. ಇದಕ್ಕೆ ಬಿಜೆಪಿಯೇ ಹೊಣೆ. ಕೆಲಸ ಇದ್ದರೆ ಯುವಕರಿಗೆ ತಪ್ಪು ದಾರಿಗೆ ತುಳಿಯುವ ಯೋಚನೆ ಬರಲ್ಲ ಎಂದರು.
SUSPECTED TERRORISTS: ಶಂಕಿತ ಉಗ್ರ ಶಾರೀಕ್‌ಗಾಗಿ ತೀವ್ರ ಶೋಧ
2023ರವರೆಗೆ ಯುವಕರು ತಾಳ್ಮೆಯಿಂದ ಇರಿ. ಸುವರ್ಣ ಕಾಲ ಬರುತ್ತೆ. ತಪ್ಪು ದಾರಿಗೆ ಹೋಗಬೇಡಿ ಎಂದ ಅವರು, ಐಸಿಸ್ ಸಂಪರ್ಕದಲ್ಲಿ ಇರೋರರನ್ನು ಭಾರತದಲ್ಲಿ ಇಟ್ಟುಕೊಳ್ಳಬೇಡಿ, ಅವರಿಗೆ ಗಲ್ಲು ಶಿಕ್ಷೆ ಕೊಡಿ ಎಂದು ಆಗ್ರಹಿಸಿದರು.
ಬೆಂಗಳೂರಿನಲ್ಲಿ ಒತ್ತುವರಿ ತೆರವಿಗೆ ಕಾಂಗ್ರೆಸ್ ವಿರೋಧವಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ಗೂ ಒತ್ತುವರಿ ತೆರವಿಗೂ ಸಂಬಂಧವಿಲ್ಲ. ಬಿಜೆಪಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ. ಒತ್ತುವರಿ ತೆರವು ಮಾಡುವ ಮುನ್ನ ವೈಜ್ಞಾನಿಕವಾಗಿ ವರದಿ ತಯಾರಿಸಿ. ಪ್ರವಾಹ ಬಂದ ತಕ್ಷಣ ಆ ಕಟ್ಟಡ ಒಡೆಯಿರಿ, ಈ ಕಟ್ಟಡ ಒಡೆಯಿರಿ ಎಂದರೆ ಹೇಗೆ?
ವೈಜ್ಞಾನಿಕವಾಗಿ ವರದಿ ತಯಾರು ಮಾಡದೇ ಸಿಕ್ಕಸಿಕ್ಕವರ ಮನೆ ಒಡೆದರೆ ಹೇಗೆ ಹೇಳಿ ಎಂದು ಪ್ರಶ್ನಿಸಿದರು. ಭಾರತ್ ಜೋಡೋ ಯಾತ್ರೆ ಸಂಘಟನೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರಲ್ಲೇ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷ ಅಂದ ಮೇಲೆ ಅದು ಮನೆ ಇದ್ದಂತೆ. ಮಾತು ಬರುತ್ತವೆ. ನಾವೇ ಮನೆಯೊಳಗೆ ಕೂತು ಮಾತಾಡಿ ಕೊಂಡು ಸರಿ ಮಾಡಿ ಕೊಳ್ತಿವಿ. ಯಾತ್ರೆಯ ಸಂಘಟನೆ ವಿಚಾರದಲ್ಲಿ ಯಾರು ತಾರತಮ್ಯ ಮಾಡುವಂಗಿಲ್ಲ. ಯಾರು ತುಟಿಕ್ ಪಿಟಿಕ್ ಅನ್ನೋ ಹಾಗಿಲ್ಲ ಎಂದು ಹೇಳಿದರು.