ಮಂಗಳೂರು(ಜೂ.25): ಕೊರೋನಾದಿಂದ ಮೃತಪಟ್ಟಕುಟುಂಬಸ್ಥರ ಮೃತದೇಹ ನೋಡಲೂ ಹೋಗದಿರುವ ಭೀತಿಯ ವಾತಾವರಣ ಇರುವಾಗ ಮಂಗಳೂರಿನಲ್ಲಿ ಮಂಗ​ಳವಾರ, ಕೊರೋನಾದಿಂದ ಸಾವಿಗೀಡಾದ 70 ವರ್ಷ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಶಾಸಕ ಯು.ಟಿ. ಖಾದರ್‌ ಸ್ವತಃ ಹಾರೆ ಹಿಡಿದು ಗುಂಡಿ ತೋಡಿ, ಅಂತ್ಯಸಂಸ್ಕಾರದ ಉಸ್ತುವಾರಿಯನ್ನೂ ವಹಿಸಿ ಗಮನ ಸೆಳೆ​ದಿ​ದ್ದಾರೆ. ಬುಧವಾರ ಉಳ್ಳಾಲ ಮುಕ್ಕಚೇರಿಯ ವೃದ್ಧರೊಬ್ಬರು ತೀರಿಕೊಂಡಾಗಲೂ ಅಂತ್ಯಸಂಸ್ಕಾರಕ್ಕೆ ನೆರವಾಗಿದ್ದಾರೆ.

ಈ ಹಿಂದೆ ಜಿಲ್ಲೆಯಲ್ಲಿ ಕೊರೋನಾದಿಂದ ಸಾವಿಗೀಡಾದವರ ಅಂತ್ಯಸಂಸ್ಕಾರ ನೆರವೇರಿಸಲು ಊರಿನವರೇ ಬಿಡದೆ ಭಾರಿ ಸುದ್ದಿಗೆ ಗ್ರಾಸವಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಮೃತದೇಹ ಆಂಬ್ಯುಲೆನ್ಸ್‌ನಲ್ಲಿ ಕೊಂಡೊಯ್ಯುವಾಗ ಜನರು ಭೀತಿಯಿಂದ ಬಾಗಿಲು ಮುಚ್ಚಿ ಮನೆಯೊಳಗೆ ಸೇರಿಬಿಡುವ ಪರಿಸ್ಥಿತಿಗೂ ಸುಶಿಕ್ಷಿತರ ಜಿಲ್ಲೆ ಸಾಕ್ಷಿಯಾಗಿತ್ತು.

ಕೊರೋನಾದಿಂದ ಮೃತಪಟ್ಟ ಶವದಿಂದ ಸೋಂಕು ಹರಡೋದಿಲ್ಲ ಎಂದು ಶಾಸಕ ಖಾದರ್

ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಕೊರೋನಾದೊಂದಿಗೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ 70 ವರ್ಷ ವಯಸ್ಸಿನ ವ್ಯಕ್ತಿ ಮಂಗಳವಾರ ಮೃತಪಟ್ಟಿದ್ದರು. ಆರಂಭದಲ್ಲಿ ಬಂದರು ಮಸೀದಿ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಗುಂಡಿ ತೋಡಲಾಗಿತ್ತು. ಆದರೆ ಅಲ್ಲಿ ನೀರು ಉಕ್ಕಿ ಬಂದಿದ್ದರಿಂದ ಬೋಳಾರ ಮಸೀದಿಯ ದಫನ ಭೂಮಿಯಲ್ಲಿ ಸಿದ್ಧತೆ ನಡೆಸಲಾಯಿತು. ಗುಂಡಿ ತೋಡುವ ವೇಳೆ ಸ್ಥಳಕ್ಕೆ ತೆರಳಿದ ಶಾಸಕ ಖಾದರ್‌ ಸ್ವತಃ ಹಾರೆ ಹಿಡಿದು ಗುಂಡಿ ತೋಡುವ ಕೆಲಸವನ್ನೂ ಮಾಡಿದ್ದರು. ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ಜತೆ ಮೃತದೇಹದ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದಾರೆ.

ಪಿಪಿಇ ಕಿಟ್‌ ಧರಿಸಿರಲಿಲ್ಲ:

ಅಂತ್ಯಸಂಸ್ಕಾರದ ವೇಳೆ ಖಾದರ್‌ ಪಿಪಿಇ ಕಿಟ್‌ ಧರಿಸಿರಲಿಲ್ಲ. ಈ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಖಾದರ್‌, ಅಂತ್ಯಸಂಸ್ಕಾರ ನಡೆಸುವುದು ಪುಣ್ಯ ಕಾರ್ಯ. ಹಾಗಾಗಿ ಈ ಕಾರ್ಯದಲ್ಲಿ ಭಾಗಿಯಾಗಿದ್ದೆ. ಕೊರೋನಾದಿಂದ ಸತ್ತ ವ್ಯಕ್ತಿಯಿಂದ ಸೋಂಕು ಹರಡುತ್ತದೆ ಎನ್ನುವುದಕ್ಕೆ ಎಲ್ಲೂ ನಿದರ್ಶನಗಳಿಲ್ಲ. ಈ ಕುರಿತು ತಜ್ಞರೊಂದಿಗೆ ಸಮಾಲೋಚನೆ ಮಾಡಿಯೇ ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಂಡ ಬಳಿಕವೇ ಭಾಗಿಯಾಗಿದ್ದೇನೆ. ನಂತರವೂ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿದ್ದೇನೆ. ಪಿಪಿಇ ಕಿಟ್‌ ಧರಿಸುವುದು ಒಳ್ಳೆಯದೇ ಎಂದಿದ್ದಾರೆ.

ಕೊರೋನಾ ಮಾರ್ಗಕೂಚು ಜ.31ರವರೆಗೆ ಮುಂದುವರಿಕೆ

ಭಯ ಬೇಡ: ಕೊರೋನಾದಿಂದ ಸಾವಿಗೀಡಾದ ತಂದೆ- ತಾಯಿ ಮೃತದೇಹದ ಅಂತ್ಯಸಂಸ್ಕಾರಕ್ಕೆ ಮಕ್ಕಳೇ ಬಾರದಿರುವ ಪ್ರಕರಣಗಳು ನಡೆದಿವೆ. ಆಸ್ಪತ್ರೆಯ ಡಿ ಗ್ರೂಪ್‌ ನೌಕರರಿಗೆ ಯಾರದ್ದೋ ಮೃತದೇಹ ಹೊತ್ತು ತರಲು ಧೈರ್ಯ ಬರುತ್ತದೆ. ಹಾಗಿರುವಾಗ ಕುಟುಂಬಸ್ಥರ ಅಂತ್ಯಕ್ರಿಯೆಯ ಪುಣ್ಯಕಾರ್ಯದಲ್ಲಿ ಭಾಗವಹಿಸಲು ಜನರೇಕೆ ಹೆದರಬೇಕು? ಈ ಮಾನವೀಯ ಕಾರ್ಯ ಮಾಡಲು ಆಗದೆ ಇದ್ದರೆ ಎಷ್ಟುಶಿಕ್ಷಣ ಪಡೆದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಖಾದರ್‌, ಕೊರೋನಾದಿಂದ ಯಾರೋ ತೀರಿಕೊಂಡರೂ ಅವರವರ ಧರ್ಮಕ್ಕೆ ಅನುಗುಣವಾಗಿ ಅಂತ್ಯಸಂಸ್ಕಾರ ಮಾಡುವುದು ಎಲ್ಲರ ಜವಾಬ್ದಾರಿ. ಈ ಮನಸ್ಥಿತಿ ಜನರಲ್ಲಿ ಬರಬೇಕು ಎಂದು ಹೇಳಿದರು.