Man died after Jumps onto Metro Track at Kengeri Purple Line: ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ರೈಲು ಹಳಿಗೆ ಹಾರಿ ಆತ್ಮ೧ಹತ್ಯೆ. ಈ ದುರ್ಘಟನೆಯಿಂದಾಗಿ ನೇರಳೆ ಮಾರ್ಗದ ಮೈಸೂರು ರಸ್ತೆಯಿಂದ ಚಲ್ಲಘಟ್ಟದವರೆಗಿನ ಮೆಟ್ರೋ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ

ಬೆಂಗಳೂರು (ಡಿ.5): ರಾಜಧಾನಿಯ ಮೆಟ್ರೋ ನಿಲ್ದಾಣಗಳಲ್ಲಿ ಟ್ರ್ಯಾಕ್‌ಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಳ್ಳುವ ಯತ್ನದ ಪ್ರಕರಣಗಳು ಮುಂದುವರಿದಿದ್ದು, ಭದ್ರತಾ ಸಿಬ್ಬಂದಿ ಎಷ್ಟೇ ಅಲರ್ಟ್ ಆಗಿದ್ದರೂ ಸಹ ಇದೀಗ ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ.

ಇಂದು ಬೆಳಿಗ್ಗೆ 8:15ರ ಸುಮಾರಿಗೆ, ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ 35-40 ವರ್ಷದ ವ್ಯಕ್ತಿಯೊಬ್ಬರು ರೈಲು ಬರುತ್ತಿದ್ದಂತೆಯೇ ಹಳಿಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ವ್ಯಕ್ತಿಯ ಮೃತದೇಹವು ಮೆಟ್ರೋ ರೈಲಿನಡಿ ಸಿಲುಕಿದ್ದು, ಅದನ್ನು ಹೊರತೆಗೆಯಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ನೆರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ:

ಘಟನೆಯ ಹಿನ್ನೆಲೆಯಲ್ಲಿ, ಪ್ರಮುಖ ಮಾರ್ಗವಾದ ನೇರಳೆ ಮಾರ್ಗದಲ್ಲಿ (Purple Line) ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಸದ್ಯ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದವರೆಗೆ ಮಾತ್ರ ರೈಲುಗಳು ಸಂಚರಿಸುತ್ತಿವೆ. ಮೈಸೂರು ರಸ್ತೆಯಿಂದ ಚಲ್ಲಘಟ್ಟದವರೆಗಿನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಸ್ಥಳಕ್ಕೆ ಆಗಮಿಸಿದ ಮೆಟ್ರೋ ಅಧಿಕಾರಿಗಳು:

ಮೆಟ್ರೋ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ವ್ಯಕ್ತಿಯ ಮೃತದೇಹವನ್ನು ಹೊರತೆಗೆಯಲು ಮತ್ತು ರೈಲು ಸಂಚಾರವನ್ನು ಪುನರಾರಂಭಿಸಲು ಪೊಲೀಸರಿಗಾಗಿ ಕಾಯುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ನಂತರವೇ ಮೆಟ್ರೋ ರೈಲನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯಲಿದೆ.

ಪ್ರಯಾಣಿಕರಿಗೆ ಸೂಚನೆ

ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ಪ್ರಯಾಣಿಸಬೇಕಾದವರು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಲು ಬಿಎಂಆರ್‌ಸಿಎಲ್ (BMRCL) ಮನವಿ ಮಾಡಿದೆ.