ಚಿತ್ರದುರ್ಗ(ಏ.28): ನರೇಗಾದ ಉದ್ಯೋಗಾಕಾಂಕ್ಷಿಗಳ ಜಾಬ್‌ಕಾರ್ಡ್‌ ಗ್ರಾಪಂ ಅಧ್ಯಕ್ಷರು, ಸದಸ್ಯರು ಇಲ್ಲವೇ ಗುತ್ತಿಗೆದಾರರ ಬಳಿ ಇದ್ದರೆ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಿಮಿನಲ್‌ ಕೇಸ್‌ ಬುಕ್‌ ಮಾಡುವಂತೆ ಶಾಸಕ ಗೂಳಿಹಟ್ಟಿಶೇಖರ್‌ ತಾಪಂ ಇಒಗೆ ತಾಕೀತು ಮಾಡಿದ್ದಾರೆ.

ಹೊಸದುರ್ಗ ಪಟ್ಟಣದ ತಾಪಂ ಸಭಾಂಗಣದಲ್ಲಿ ನರೇಗಾ ಕಾಮಗಾರಿ ಅನುಷ್ಠಾನ ಕುರಿತು ಸೋಮವಾರ ಕರೆಯಲಾಗಿದ್ದ ಪಿಡಿಒಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾನವ ದಿನಗಳ ಗುರಿ ಮುಟ್ಟಲು ನಿಯಮ ಬಿಟ್ಟು ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.

ತೆವಳುತ್ತಿರುವ ವೃದ್ಧನ ವಿಡಿಯೋ ವೈರಲ್, ಮನೆ ಬಾಗಿಲಿಗೆ ಬಂತು ಪಿಂಚಣಿ

ಕೊರೊನಾ ಎಫೆಕ್ಟ್ನಿಂದ ಜನರ ಬಳಿ ದುಡ್ಡಿಲ್ಲದಂತಾಗಿದೆ. ವಲಸೆ ಹೋಗಿದ್ದವರು ಮರಳಿ ಸ್ವಗ್ರಾಮಗಳಿಗೆ ಮರಳಿದ್ದಾರೆ. ಅವರೆಲ್ಲಾ ಪುನಃ ಹೊಲಸೆ ಹೊಗದಂತೆ ಅವರಿಗೆ ಜಾಬ್‌ಕಾರ್ಡ್‌ ನೀಡುವ ಮೂಲಕ ಸ್ಥಳೀಯ ಮಟ್ಟದಲ್ಲಿ ಜನರಿಗೆ ಹೆಚ್ಚು ಕೆಲಸ ಕೊಡುವ ಕಾರ್ಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಜಾಬ್‌ಕಾರ್ಡ್‌ ದುರುಪಯೋಗವಾಗದಂತೆ ನೋಡಿಕೊಳ್ಳಬೇಕೆಂದರು.

ತಾಲೂಕಿನ ಯಾವ ಹಳ್ಳಿಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆæ ನೋಡಿಕೊಳ್ಳಬೇಕು. ತಾಲೂಕಿನಾದ್ಯಂತ ಸ್ಥಾಪಿಸಲಾಗಿರುವ ಬಹುತೇಕ ಶುದ್ಧ ನೀರಿನ ಘಟಕಗಳು ದುರಸ್ತಿಯಲ್ಲಿವೆ ಎಂಬ ದೂರುಗಳಿವೆ. ಗ್ರಾಮಕ್ಕೆ ತೆರಳಿದಾಗಲೆಲ್ಲಾ ಜನ ದೂರು ಹೇಳುತ್ತಿದ್ದು, ಘಟಕಗಳನ್ನು ಸರಿಪಡಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸೂಚಿಸಿದರು.

ಮಾಸ್ಕ್ ಧರಿಸದಿದ್ರೆ 100 ರೂ. ದಂಡ, ಏ.30ರಿಂದಲೇ ಜಾರಿ..!

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ನಾಗರಾಜ್‌ ಮಾತನಾಡಿ, ಸದ್ಯ ತಾಲೂಕಿನ ಯಾವುದೇ ಹಳ್ಳಿಯಲ್ಲಿ ನೀರಿನ ಸಮಸ್ಯೆ ಇಲ್ಲ. ತಾಲೂಕಿನಲ್ಲಿ 30 ಶುದ್ಧ ನೀರಿನ ಘಟಕಗಳು ರಿಪೇರಿಯಾಗಬೇಕಿದೆ. ಲಾಕ್‌ಡೌನ್‌ ಇರುವುದರಿಂದ ಮೆಟಿರಿಯಲ್ಸ್‌ ಸಪ್ಲೈ ಆಗುತ್ತಿಲ್ಲ ಎಂದು ಉತ್ತರಿಸಿದರು.

ಜಲಜೀವನ್‌ ಮಿಷನ್‌ ಯೋಜನೆ:

ಕೇಂದ್ರ ಸರ್ಕಾರ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಲು ಜಲಜೀವನ್‌ ಮಿಷನ್‌ ಯೋಜನೆ ಜಾರಿಗೊಳಿಸಿದೆ. ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಗಳಿಗೆ ಪೈಪ್‌ಲೈನ್‌ ಮುಖಾಂತರ ನೀರು ಸರಬರಾಜು ಮಾಡಲಾಗುವುದು. ಈ ಸಂಬಂಧ ಪಿಡಿಒಗಳು ಆಯಾ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಕ್ರಿಯಾ ಯೋಜನೆ ತಯಾರಿಸಿ ವರದಿ ನೀಡಿದರೆ ಕೆಲಸ ಪ್ರಾರಂಭಿಸಲಾಗುವುದು ಎಂದು ಎಇಇ ನಾಗರಾಜ್‌ ಸಭೆಗೆ ಮಾಹಿತಿ ನೀಡಿದರು. ತಾಪಂ ಇಒ ಜಾನಕಿರಾಮ್‌, ತಾಪಂ ಸಹಾಯಕ ನಿರ್ದೇಶಕ ರಂಗನಾಥ್‌, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ವಿಶೇಷ ಮನವಿಯೊಂದಿಗೆ ಸಿಎಂಗೆ ಪತ್ರ ಬರೆದ ದೇವೇಗೌಡರು!

ಕೆಲವು ಗ್ರಾಪಂಗಳಲ್ಲಿ ಅಧ್ಯಕ್ಷರು ಹಾಗೂ ಪಿಡಿಒಗಳು ಸೇರಿ 14ನೇ ಹಣಕಾಸು ಯೋಜನೆಯಡಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಇಒ ಸಮಗ್ರ ತನಿಖೆ ಮಾಡಿ ದುರ್ಬಳಕೆ ಮಾಡಿಕೊಂಡ ಪಿಡಿಒ ಹಾಗೂ ಅಧ್ಯಕ್ಷರ ವಿರುದ್ಧ ನೇರವಾಗಿ ಪೊಲೀಸ್‌ ಠಾಣೆಗೆ ದೂರು ನೀಡಿ ಎಂದು ಶಾಸಕ ಗೂಳಿಹಟ್ಟಿಶೇಖರ್ ತಿಳಿಸಿದ್ದಾರೆ.