ಹೊಸಕೋಟೆ ದೇವಸ್ಥಾನ ಪ್ರಸಾದದಿಂದ ಫುಡ್ ಪಾಯ್ಸನ್ ಆಗಿಲ್ಲವೆಂದ ಶಾಸಕ ಶರತ್ ಬಚ್ಚೇಗೌಡ!
ಹೊಸಕೋಟೆಯಲ್ಲಿ ಫುಡ್ ಪಾಯ್ಸನ್‌ನಿಂದ ಮಹಿಳೆ ಸಾವನ್ನಪ್ಪಿದ್ದು, 135 ಮಂದಿ ಆಸ್ವಸ್ಥರಾದ್ದಾರೆ. ಆದರೆ, ದೇವಸ್ಥಾನದ ಪ್ರಸಾದದಿಂದಲೇ ಫುಡ್ ಪಾಯ್ಸನ್ ಆಗಿಲ್ಲವೆಂದು ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
ಹೊಸಕೋಟೆ (ಡಿ.25): ಹೊಸಕೋಟೆಯಲ್ಲಿ ಫುಡ್ ಪಾಯ್ಸನ್ ಪ್ರಕರಣದಿಂದ ಒಬ್ಬ ಮಹಿಳೆ ಸಾವನ್ನಪ್ಪಿದ್ದು, 135 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ದೇವಸ್ಥಾನದ ಪ್ರಸಾದದಿಂದಲೇ ಫುಡ್ ಪಾಯ್ಸನ್ ಆಗಿದೆ ಎಂದು ಹೇಳಲಾಗುವುದಿಲ್ಲ. ಈ ಬಗ್ಗೆ ತನಿಖೆ ನಡೆದ ನಂತರವೇ ಸತ್ಯಾಂಶ ಹೊರಬರಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
ಹೊಸಕೋಟೆಯಲ್ಲಿ ಪುಡ್ ಪಾಯ್ಸನ್ ಪ್ರಕರಣದಿಂದ ಪಟ್ಟಣದ ಕಾವೇರಿ ನಗರದ ನಿವಾಸಿ ಸಿದ್ದಗಂಗಮ್ಮ (61) ಸಾವನ್ನಪ್ಪಿದ್ದಾರೆ. ಬೆಳಗ್ಗೆ ವಾಂತಿ ಬೇದಿ ಕಾಣಿಸಿಕೊಂಡಿದ್ದರಿಂದ ಬೆಂಗಳೂರಿನ ಆಸ್ವತ್ರೆಗೆ ದಾಖಲಾಗಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. ಇನ್ನು ಹೊಸಕೋಟೆಯ 15ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ. ಜೊತೆಗೆ, ಹೊಸಕೋಟೆ ಸೇರಿದಂತೆ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ 135ಕ್ಕೂ ಅಧಿಕ ಜನರು ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಾಸಕ ಶರತ್ ಬಚ್ಚೇಗೌಡ ಅವರು, ನಾವು ಇಲ್ಲಿ ಯಾರ ಮೇಲೂ ಬೆರಳು ಮಾಡಿ ತೋರಿಸಲ್ಲ. ನಮ್ಮ ಗಮನ ಈಗ ಅಸ್ವಸ್ಥ ಆದ ಜನರಿಗೆ ಸೂಕ್ತ ಆರೋಗ್ಯ ವ್ಯವಸ್ಥೆ ಮಾಡುವುದು. ಆರು ಆಸ್ಪತ್ರೆಗಳಲ್ಲಿ 135 ಪ್ರಕರಣ ದಾಖಲು ಆಗಿದೆ. ಆದರೆ ತಾಲೂಕಿನ ಪೂರ್ತಿ ಈ ರೀತಿ ಆಗಿಲ್ಲ. ದೇವಸ್ಥಾನದಿಂದ ಕೊಟ್ಟ ಪ್ರಸಾದದಿಂದ ಈ ರೀತಿ ಆಗಿದೆ ಅಂತಾ ಹೇಳುವುದಕ್ಕೆ ಆಗಲ್ಲ. ಇನ್ನು ಜನರು ಗಾಬರಿಯಾಗಿ ಆತಂಕ ಪಡುವ ಅಗತ್ಯವಿಲ್ಲ. ಇದಕ್ಕೆ ನಿಖರ ಕಾರಣ ಏನು ಅಂತ ತಿಳಿದುಕೊಳ್ಳಲು ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಕರ್ನಾಟಕದಲ್ಲಿಯೇ 35 ಕೋವಿಡ್ ಉಪತಳಿ ಜೆಎನ್1 ಕೇಸ್‌ಗಳು ಪತ್ತೆ: ಬೆಂಗಳೂರು ಮತ್ತೆ ಕೊರೊನಾ ಹಾಟ್‌ಸ್ಪಾಟ್!
ಹೊಸಕೋಟೆಯಲ್ಲಿ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ನೂರಕ್ಕೆ ನೂರರಷ್ಟು ತನಿಖೆ ಮಾಡುತ್ತೇವೆ. ಇದರ ಹಿಂದಿನ ಕಾರಣ ಕಲೆ ಹಾಕುತ್ತೇವೆ. ಸದ್ಯ ಹೊಸಕೋಟೆಯಲ್ಲಿರುವ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಯಾವುದೇ ದೇವಸ್ಥಾನಗಳಲ್ಲಿ ತೀರ್ಥ, ಪ್ರಸಾದವನ್ನು ನೀಡದಿರಲು ಸೂಚನೆ ನೀಡಲಾಗಿದೆ. ಸದ್ಯ ಮೃತಪಟ್ಟ ಮಹಿಳೆ, ಯಾವ ದೇವಸ್ಥಾನದಲ್ಲಿ ಪ್ರಸಾದ ಸೇವನೆ ಮಾಡಿದ್ದರು ಅನ್ನೋದರ ಮೇಲೆ ತನಿಖೆ ಆರಂಭ ಆಗುತ್ತದೆ. ಇನ್ನು 35 ಜನರ ಸ್ಥಿತಿ ಗಂಭೀರವಿದ್ದರೂ ಅವರು ಸ್ಟೇಬಲ್ ಆಗಿದ್ದಾರೆ ಎಂದು ಮಾಹಿತಿ ನೀಡಿದರು.
ಹೊಸಕೋಟೆಯಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ಪ್ರಕರಣದ ರೋಗಿಗಳನ್ನು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ. ಅವಲಹಳ್ಳಿ, ನಂದಗುಡಿ, ಹಾಗೂ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಈವರೆಗೆ ಅಸ್ವಸ್ಥತೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೊಸಕೋಟೆ ಠಾಣೆ ಪೊಲೀಸರು ಸದ್ಯ ಅಸ್ವಸ್ಥಗೊಂಡವರ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ತಾಲೂಕು ಆರೋಗ್ಯಾಧಿಕಾರಿಗಳಿಂದ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ಎಲ್ಲ ಖಾಸಗಿ ಆಸ್ಪತ್ರೆಗಳಿಂದ ಅಸ್ವಸ್ಥತೆಗೆ ಕಾರಣ ಏನೆಂಬದನ್ನು ತಾಲೂಕು ವೈದ್ಯಾಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕ್ರಿಸ್‌ಮಸ್ ದಿನವೇ ನಿರ್ಮಾಣ ಹಂತದ ಕಟ್ಟಡ ಕುಸಿತ: ಒಬ್ಬ ಸಾವು, ಇಬ್ಬರ ಸ್ಥಿತಿ ಗಂಭೀರ
ಹೊಸಕೋಟೆಯ ಆಸ್ಪತ್ರೆಗಳಿಗೆ ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಸ್ವಸ್ಥರಾಗಿರೋರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ 30 ಮಂದಿ ದಾಖಲಾಗಿದ್ದಾರೆ. ಯಾವಾವ ಆಸ್ಪತ್ರೆಗಳಲ್ಲಿ ಎಷ್ಟು ಮಂದಿ ದಾಖಲಾಗಿದ್ದಾರೆ ಅಂತಾ ಮಾಹಿತಿ ಪಡೆದುಕೊಂಡು ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ಸೂಚನೆ ನೀಡಿದ್ದಾರೆ.