ಕೊಡಗು ಜಿಲ್ಲಾಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅಪ್ಪ-ಮಗನ ದರ್ಬಾರ್.  ಶಾಸಕ (ಮಗ) ಮಂತರ್‌ಗೌಡ ನಡೆಸಿದ್ದನ್ನು ಶಾಸಕ (ಅಪ್ಪ) ಎ.ಮಂಜು ನೋಡಿ ಖುಷಿಪಟ್ಟರು.

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜೂ.27): ಕೊಡಗು ಜಿಲ್ಲಾಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅಪ್ಪ-ಮಗನ ದರ್ಬಾರ್. ಶಾಸಕ (ಮಗ) ಮಂತರ್‌ಗೌಡ ನಡೆಸಿದ್ದನ್ನು ಶಾಸಕ (ಅಪ್ಪ) ಎ.ಮಂಜು ನೋಡಿ ಖುಷಿಪಟ್ಟರು. ಬಿಜೆಪಿ ಸರಿಯಿಲ್ಲ ಎನ್ನುವುದು ರಾಜ್ಯದ ಜನತೆಗೆ ಐದು ವರ್ಷಗಳಲ್ಲಿ ಗೊತ್ತಾಯಿತು. ಆದರೆ ಕಾಂಗ್ರೆಸ್ ಏನು ಎನ್ನುವುದು ಅವರ ಬಂಡವಾಳ ಒಂದು ತಿಂಗಳಲ್ಲಿಯೇ ಗೊತ್ತಾಗಿದೆ ಎಂದು ಅರಕಲಗೂಡು ಶಾಸಕ ಎಸ್ಎಲ್ಡಿಪಿ ನಿರ್ದೇಶಕ ಎ. ಮಂಜು ಅಸಮಾಧಾನ ವ್ಯಕ್ತಪಡಿದರು. 

ಕೊಡಗು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಮತ್ತು ಗ್ಯಾರಂಟಿ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಗ್ಯಾರಂಟಿ ವಿಚಾರವಾಗಿ ಮಾಜಿ ಸಿಎಂ ಹೆಚ್‌ಡಿಕೆ ಟ್ವೀಟ್ ಮಾಡಿರೋದು ಸರಿಯಾಗಿಯೇ ಇದೆ. ಬಿಜೆಪಿಯವರು ಸರಿಯಿಲ್ಲ ಅಂತ ಕಾಂಗ್ರೆಸ್‌ಗೆ ರಾಜ್ಯದ ಜನ ಓಟು ಹಾಕಿದರು. ಕಾಂಗ್ರೆಸ್ ಜನರಿಗೆ ಸೌಕರ್ಯ ಕೊಡ್ತೀವಿ ಅಂತ ಹೇಳಿ ಗೆದ್ದು ಬಂದಿದ್ದಾರೆ. ಜನರನ್ನ ಸೌಕರ್ಯ ವಂಚಿತರನ್ನಾಗಿ ಮಾಡಬೇಡಿ, ನುಡಿದಂತೆ ನಡೆಯಿರಿ ಎಂದು ಕುಟುಕಿದರು.

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ತಗ್ಗು-ದಿಣ್ಣೆ : ವಾಹನ ಸವಾರರೇ ಎಚ್ಚರ

ಕೊಟ್ಟ ಮಾತನ್ನು ಕಾಂಗ್ರೆಸ್‌ ಉಳಿಸಿಕೊಳ್ಳಬೇಕು: ಅಕ್ಕಿ ವಿಚಾರದಲ್ಲಿ ಕೇಂದ್ರದ ಪಾಲೇನು ಮತ್ತು ರಾಜ್ಯದ ಪಾಲೇನು ಅನ್ನೋದು ಜನಕ್ಕೆ ಗೊತ್ತಾಗಿದೆ. ಕೇಂದ್ರದ ಅಕ್ಕಿಯನ್ನು ಇವರು ನಮ್ಮದು ಎನ್ನುವುದಕ್ಕೆ ಆಗುವುದಲ್ಲ. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಒಂದಲ್ಲ, ಇಡೀ ದೇಶ ಇದೆ. ಚುನಾವಣೆ ವೇಳೆ ನೀವು 10 ಕೆ.ಜಿ. ಕೊಡ್ತೀವಿ ಅಂತ ಹೇಳಿದ್ರಿ, ಹಾಗಾಗಿ ಆ ಹತ್ತು ಕೆಜಿಯನ್ನ ಹೇಗಾದ್ರೂ ಕೊಡಿ. ಸಾಲವಾದರೂ ಮಾಡಿ, ಏನಾದರೂ ಮಾಡಿ. ಆದರೆ ಹೇಳಿದ್ದ ಮಾತನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದರೆ, ಪರೋಕ್ಷವಾಗಿ ಕೇಂದ್ರದ ಪರ ಬ್ಯಾಟ್ ಬೀಸಿದರು. 

ಅಪ್ಪ, ಮಗ ಯಾರೇ ಆಗಿರಲಿ ಜನರ ಪರವಾಗಿ ಕೆಲಸ ಮಾಡಬೇಕು: ಇನ್ನು ಗ್ಯಾರಂಟಿ ವಿಚಾರದಲ್ಲಿ ಎಡವಿದ ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮ ಮಗನೇ ಶಾಸಕರಾಗಿದ್ದಾರಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎ. ಮಂಜು, ಅಪ್ಪ ಇರಲಿ, ಮಗ ಇರಲಿ, ನಾವು ಜನರ ಪರವಾಗಿ ಮಾತನಾಡಬೇಕು. ಈ ವ್ಯವಸ್ಥೆಯಲ್ಲಿ ಎಲ್ಲರೂ ಶಾಸಕರು. ಯಾರು ಮಾಡಿದರೂ ತಪ್ಪು ತಪ್ಪೆ. ನಾವು ಜನರ ಬಗ್ಗೆ ಅಭಿವೃದ್ಧಿ ಬಗ್ಗೆ ಚಿಂತೆ ಮಾಡಬೇಕು ಎಂದು ಅರಕಲಗೂಡು ಶಾಸಕ ಎ ಮಂಜು ತಮ್ಮ ಮಗ ಶಾಸಕರಾಗಿರುವ ಕ್ಷೇತ್ರದ ಕೆಡಿಪಿ ಸಭೆಗೆ ಬಂದು ಕಾಂಗ್ರೆಸ್ ಗೆ ಜಾಡಿಸಿದರು. 

ಮಗ ನಡೆಸುವ ಸಭೆ ನೋಡಿ ಖುಷಿಯಾಗಿದೆ: 
SLDP ನಿರ್ದೇಶಕನಾಗಿ ನನಗೆ ಕೊಡಗು ಮತ್ತು ಹಾಸನದ ಉಸ್ತುವಾರಿ ಇದೆ. ಹೀಗಾಗಿ ನನಗೆ ಸಭೆಗೆ ಆಹ್ವಾನ ಇತ್ತು ಬಂದಿದ್ದೇನೆ ಎಂದರು. ನಾನೂ ಕೂಡ ಕೊಡಗು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಗೆ ಸದಸ್ಯನಾಗಿದ್ದೇನೆ. SLDPಗೆ ಅನುದಾನ ಕೊಡದಿರುವುದರಿಂದ ಈ ಸಭೆಯಲ್ಲಿ ನಮ್ಮದೇನು ವಿಚಾರಗಳು ಚರ್ಚೆಗೆ ಇಲ್ಲ. ಜೊತೆಗೆ ಮಗ ನಡೆಸುವ ಸಭೆ ನೋಡಿ ಖುಷಿ ಆಗಿದೆ. ಅದಕ್ಕೆ ಅಧಿಕಾರಿಗಳ ಸಾಲಿನಲ್ಲಿ ಕುಳಿತು ಸಭೆಯಲ್ಲಿ ಭಾಗಿಯಾಗಿ ವೀಕ್ಷಿಸಿದ್ದೇನೆ ಎಂದು ಪ್ರತಿಕ್ರಿಯಿಸಿದರು. 

ಬೆಂಗಳೂರು ಪೊಲೀಸರ ಸೇಫ್ಟಿ ಐಲ್ಯಾಂಡ್‌ ಸಕ್ಸಸ್‌: ಕೆಲವೇ ಗಂಟೆಗಳಲ್ಲಿ ಮಾಲ್ಡೀವ್ಸ್‌ ಪ್ರಜೆಯ ಬ್ಯಾಗ್ ಪತ್ತೆ

ಹಾಸನದಲ್ಲಿ ಕಂಪಿಸಿದ ಭೂಮಿ: ಹಾಸನ ಜಿಲ್ಲೆಯ ಕೆಲವು ಕಡೆಗಳಲ್ಲಿ ಭೂಮಿ‌ ಕಂಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಆ ಅನುಭವ ನನಗೂ ಆಗಿದೆ. ಬೆಳಗ್ಗೆ 10:15 ರ ಸುಮಾರಿಗೆ ತಿಂಡಿ‌ ಮಾಡಿ ಕಾರಿನಲ್ಲಿ ಕುಳಿತುಕೊಳ್ಳುವಾಗ ನನಗೂ ಅನುಭವ ಆಗಿದೆ. ಭೂಮಿ ಅಲುಗಾಡಿದ ಹಾಗೆ ನನಗೂ ಅನ್ನಿಸಿತು. ಆದರೆ, ದೊಡ್ಡ ಮಟ್ಟದಲ್ಲಿ ಏನೂ ಆಗಿಲ್ಲ ಎಂದು ಪ್ರತಿಕ್ರಿಯಿಸಿದರು.