ಬೆಂಗಳೂರಿಗೆ ಆಗಮಿಸಿದ ವಿದೇಶಿ ಪ್ರಜೆಯ ಬ್ಯಾಗ್‌ ಕಳ್ಳತನವಾದ ಕೆಲವೇ ಗಂಟೆಗಳಲ್ಲಿ ಸೇಪ್ಟಿ ಐಲ್ಯಾಂಡ್‌ ನೆರವಿನ ಮೂಲಕ ಬ್ಯಾಗ್‌ ಅನ್ನು ಪತ್ತೆ ಮಾಡಲಾಗಿದೆ.

ವರದಿ: ಹರೀಶ್ ರಾಮಸ್ವಾಮಿ ಏಷಿಯಾನೆಟ್ ಸುವರ್ಣ ನ್ಯೂಸ್ 
ಬೆಂಗಳೂರು (ಜೂ.27): ವಿದೇಶಿ ಪ್ರಜೆಯೊಬ್ಬರು ಕಳೆದುಕೊಂಡ ವಸ್ತುಗಳು ಸೇಫ್ಟಿ ಐಲ್ಯಾಂಡ್ ಸಹಾಯದಿಂದ ಕೆಲವೇ ಗಂಟೆಗಳಲ್ಲಿ ಪತ್ತೆಯಾದ ಘಟನೆ ನಿನ್ನೆ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಲ್ಡೀವ್ಸ್ ಮೂಲದ ಫೋಟೋಗ್ರಾಫರ್ ಕಳೆದುಕೊಂಡಿದ್ದ ಲ್ಯಾಪ್‌ಟಾಪ್, ಮಾಲ್ಡೀವ್ಸ್ ಕರೆನ್ಸಿ ಮತ್ತಿತರ ವಸ್ತುಗಳಿದ್ದ ಬ್ಯಾಗನ್ನ ಪತ್ತೆ ಹಚ್ಚಿ ಹಸ್ತಾಂತರಿಸುವಲ್ಲಿ ಅಶೋಕನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೌತ್ ಏಷ್ಯನ್ ಫುಟ್‌ಬಾಲ್‌ ಫೆಡರೇಶನ್ ಚಾಂಪಿಯನ್ಶಿಪ್ ಗಾಗಿ ಮಾಲ್ಡೀವ್ಸ್ ತಂಡ ಬೆಂಗಳೂರಿಗೆ ಬಂದಿದೆ. ತಂಡದೊಂದಿಗೆ ಬಂದಿದ್ದ ಫೋಟೋಗ್ರಾಫರ್ ಹಸನ್ ಸಿಮಾಹ್ ನಿನ್ನೆ ಸಂಜೆ ತಮ್ಮ ಇಬ್ಬರು ಸ್ನೇಹಿತರೊಂದಿಗೆ ಆಟೋದಲ್ಲಿ ಎಂ.ಜಿ.ರಸ್ತೆಯ ಗರುಡಾ ಮಾಲ್ ಗೆ ತೆರಳಿದ್ದರು. ಆಟೋದಿಂದ ಇಳಿಯುವಾಗ ತಮ್ಮ ಲ್ಯಾಪ್‌ಟಾಪ್‌, ಪಾಸ್‌ಪೋರ್ಟ್, ಕ್ಯಾಮೆರಾ ಉಪಕರಣಗಳು, ಮಾಲ್ಡೀವ್ಸ್ ಕರೆನ್ಸಿಯಿದ್ದ ಬ್ಯಾಗನ್ನ ಮರೆತು ಇಳಿದಿದ್ದರು. ಏನು ಮಾಡಬೇಕೆಂದು ಅರಿಯದೇ ಕಂಗಾಲಾಗಿದ್ದ ಹಸನ್ ಗೆ ಸ್ಥಳಿಯರು ಅಲ್ಲೇ ಇದ್ದ ಸೇಫ್ಟಿ ಐಲ್ಯಾಂಡ್ ಸಹಾಯ ಪಡೆಯುವಂತೆ ಸೂಚಿಸಿದ್ದರು.

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ತಗ್ಗು-ದಿಣ್ಣೆ : ವಾಹನ ಸವಾರರೇ ಎಚ್ಚರ

ಅದರಂತೆ ಸೇಫ್ಟಿ ಐಲ್ಯಾಂಡ್ ಮೂಲಕ ಹಸನ್ ಬೆಂಗಳೂರು ಪೊಲೀಸ್ ನಿಯಂತ್ರಣ ಕೊಠಡಿಯನ್ನ ಸಂಪರ್ಕಿಸಿದ್ದರು. ಅಗತ್ಯ ಮಾಹಿತಿಗಳನ್ನ ಪಡೆದ ನಿಯಂತ್ರಣ ಕೊಠಡಿಯ ಸಿಬ್ಬಂದಿ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿ ತಕ್ಷಣ ಅಶೋಕನಗರ ಠಾಣಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.ಕೂಡಲೇ ಎಚ್ಚೆತ್ತ ಅಶೋಕನಗರ ಠಾಣಾ ಹೊಯ್ಸಳ ಸಿಬ್ಬಂದಿ ಆಟೋವನ್ನ ಪತ್ತೆಮಾಡಿ ಹಸನ್ ರ ಬ್ಯಾಗ್ ಹಿಂದಿರುಗಿಸಿದ್ದಾರೆ. 

ಏಷಿಯಾನೆಟ್ ಸುವರ್ಣ ನ್ಯೂಸ್ ವರದಿಯ ಬಿಗ್ ಇಂಫ್ಯಾಕ್ಟ್ : ಇನ್ನೂ ಸೇಫ್ಟಿ ಐ ಲ್ಯಾಂಡ್ ಕುರಿತು ಮೊದಲು ವರದಿ ಮಾಡಿದ್ದ ಸುವರ್ಣ ನ್ಯೂಸ್, ಸೇಫ್ಟಿ ಐಲ್ಯಾಂಡನ್ನ ಸಾರ್ವಜನಿಕರಿಗೆ ಹೇಗೆ ಬಳಸಬೇಕು ಅನ್ನೋದನ್ನ ರಿಯಾಲಿಟಿ ಮುಖಾಂತರ ತೋರಿಸಿತ್ತು. ಈ ವರದಿ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮನ್ನಣೆಯನ್ನ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಸೇಫ್ಟಿ ಐ ಲ್ಯಾಂಡ್ ಯೋಜನೆಗೆ ಮೊದಲ ಸಕ್ಸಸ್ ದೊರೆತಿದೆ.

30 ಸೇಫ್ಟಿ ಐಲ್ಯಾಂಡ್ಸ್ ನಿರ್ಮಾಣ: ಘಟನೆಯ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, 'ಸೇಫ್ ಸಿಟಿ ಯೋಜನೆಯ ಭಾಗವಾಗಿ ನಗರದ ವಿವಿಧೆಡೆ 30 ಸೇಫ್ಟಿ ಐಲ್ಯಾಂಡ್ಸ್ ನಿರ್ಮಿಸಲಾಗಿದೆ. ಇನ್ನೂ 20 ಐಲ್ಯಾಂಡ್ಸ್ ನಿರ್ಮಾಣವಾಗಲಿವೆ. ನಿನ್ನೆಯ ಘಟನೆ ಸೇಫ್ಟಿ ಐಲ್ಯಾಂಡ್ ನ ಮೂಲ ಉದ್ದೇಶ ಯಶಸ್ವಿಯಾದ ಮೊದಲ ನಿದರ್ಶನವಾಗಿದೆ. ಕಳೆದುಕೊಂಡಿದ್ದ ಬ್ಯಾಗನ್ನ ವಿದೇಶಿ ಪ್ರಜೆಗೆ ಹಿಂದಿರುಗಿಸಲಾಗಿದ್ದು ಆಟೋ ಚಾಲಕ ಉದ್ದೇಶಪೂರ್ವಕವಾಗಿ ಬ್ಯಾಗ್ ಕೊಂಡೊಯ್ದಿದ್ದನಾ ಇಲ್ಲವಾ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಟೆಲಿಫೋನ್‌ನಂತೆ ಸೇಫ್ಟಿ ಐಲ್ಯಾಂಡ್ ನಿರ್ಮಾಣ: ನಗರದ ವಿವಿಧ ಜಂಕ್ಷನ್‌ಗಳಲ್ಲಿ ಸೇಫ್ಟಿ ಐಲ್ಯಾಂಡ್‌ (Safety Island) ಸ್ಥಾಪಿಸಲಾಗಿದೆ. ಮಷೀನ್​​ ನೀಲಿ ಬಣ್ಣದಿಂದ ಕೂಡಿದ್ದು ಟೆಲಿಫೋನ್ ಬೂತ್‌ನಂತೆ ಕಾಣುತ್ತದೆ. ಯಾರಾದರೂ ತೊಂದರೆಯಲ್ಲಿದ್ದಾಗ ದೂರು ನೀಡಲು ಸಾಧ್ಯವಾಗದಿದ್ದರೇ ಅಥವಾ ಪೊಲೀಸರಿಗೆ ಕರೆ ಮಾಡಲು ಸಾಧ್ಯವಾಗದಿದ್ದರೇ ಅಲ್ಲಿಯೇ ಹತ್ತಿರದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಈ ಸುರಕ್ಷತಾ ದ್ವೀಪಗಳನ್ನು ಬಳಸಬಹುದು. ಪ್ರತಿ ಸುರಕ್ಷತಾ ದ್ವೀಪದ ಬಳಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯ ಬಗ್ಗೆ ನೈಜ ಸಮಯದ ಮಾಹಿತಿ ನೀಡುತ್ತದೆ.

Bengaluru: ಪೀಣ್ಯ- ಹೊಸೂರು ಸುರಂಗ ರಸ್ತೆ ನಿರ್ಮಾಣ: ಕೇಂದ್ರಕ್ಕೆ ರಾಜ್ಯದ ಮನವಿ

ಸೇಫ್ಟಿ ಐಲ್ಯಾಂಡ್ ಸಾಧನ ಬಳಕೆ: 
ನಿಮಗೆ ತೊಂದರೆಯಾದಾಗ ಹತ್ತಿರದ ಮಷೀನ್​ ಬಳಿ ಹೋಗಿ SOS ಬಟನ್ ಒತ್ತಬೇಕು. ಇದು ಸಮೀಪದ ಪೊಲೀಸ್​ ಠಾಣೆಗೆ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ, ಕರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯನ್ನು ಅವಲಂಬಿಸಿ, ಪೊಲೀಸ್ ಸಿಬ್ಬಂದಿ ಸಾಧ್ಯವಾದಷ್ಟು ಬೇಗ ಸ್ಥಳವನ್ನು ತಲುಪುತ್ತಾರೆ. ತೊಂದರೆಯಲ್ಲಿರುವ ವ್ಯಕ್ತಿಯು ಮೊಬೈಲ್ ಫೋನ್ ಬಳಸುತ್ತಿಲ್ಲದಿದ್ದರೂ ಸಹ ಪೊಲೀಸರು ಸುಲಭವಾಗಿ ತೊಂದರೆಯಲ್ಲಿರುವ ವ್ಯಕ್ತಿಯ ಬಳಿ ತಲುಪುತ್ತಾರೆ.