ಶಿವಮೊಗ್ಗ(ಆ.07): ತುಂಬಿ ಹರಿಯುತ್ತಿರುವ ತುಂಗಾನದಿಗೆ ಮಾಜಿ ಡಿಸಿಎಂ ಹಾಗೂ ಶಾಸಕ ಕೆ.ಎಸ್‌. ಈಶ್ವರಪ್ಪ ತಮ್ಮ ಪತ್ನಿ ಜಯಲಕ್ಷ್ಮೀ ಹಾಗೂ ಕುಟುಂಬದವರೊಂದಿಗೆ ಮಂಗಳವಾರ ನಗರದ ಕೋರ್ಪಲಯ್ಯ ಛತ್ರ ಸಮೀಪದಲ್ಲಿ ಬಾಗಿನ ಅರ್ಪಿಸಿದರು.

ಕಳೆದೆರೆಡು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾನದಿ ತುಂಬಿ ಹರಿಯುತ್ತಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ತುಂಗಾನದಿಯಲ್ಲಿನ ಅಪಾಯದ ಸೂಚನೆ ನೀಡುವ ಮಂಟಪ ಮುಳುಗಿದೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ದಂಪತಿ ಬಾಗಿನ ಸಲ್ಲಿಸಿ, ವಿಶೇಷ ಪೂಜೆ ನೆರವೇರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಎಷ್ಟು ಬೇಕೋ ಅಷ್ಟುಮಳೆಯಾದರೆ ಸಾಕು. ಕೆಲ ದಿನಗಳ ಹಿಂದೆ ಭೀಕರ ಬರಗಾಲವಿತ್ತು. ಆದರೆ ಇದೀಗ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಪ್ರಕೃತಿ ನಿಯಮ ವಿಚಿತ್ರವಾಗಿದೆ. ಮಲೆನಾಡಿನಲ್ಲಿ ಎಂದಿನಂತೆ ಭರ್ಜರಿ ಮಳೆಯಾಗಿದೆ. ಇಷ್ಟುಹೊತ್ತಿಗೆ ಕೋರ್ಪಳಯ್ಯ ಛತ್ರದ ಮಂಟಪ ಎರಡು ಮೂರು ಬಾರಿ ಮುಳುಗುತ್ತಿತ್ತು. ಈ ಬಾರಿ ಮಳೆ ಬರುತ್ತೋ ಇಲ್ವೋ ಅಂದುಕೊಂಡಿದ್ವಿ. ಆದರೆ ಮಳೆಯಿಂದಾಗಿ ತುಂಗಾ ತುಂಬಿ ಹರಿಯುತ್ತಿದೆ ಎಂದು ಹೇಳಿದರು.

ತುಂಬಿ ಹರಿಯುತ್ತಿದ್ದಾಳೆ ತುಂಗೆ, ಪ್ರವಾಹ ಭೀತಿಯಲ್ಲಿ ಜನ

ಜನರಿಗೆ ಮತ್ತು ರೈತರಿಗೆ ಎಷ್ಟುಬೇಕೋ ಅಷ್ಟು ಮಳೆ ಕೊಡಪ್ಪ ಎಂದು ಕೇಳಿಕೊಳ್ಳುತ್ತೇನೆ ಎಂದು ಆ ದೇವರು ಮತ್ತು ತುಂಗೆಯಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು. ಮಳೆಯಿಂದ ನಗರದಲ್ಲಿ ಸಾಕಷ್ಟುಹಾನಿಯಗಿದೆ. ಮನೆಗಳ ಗೋಡೆಗಳು ಬಿದ್ದಿವೆ. ಸಾಕಷ್ಟುಹಾನಿಯಾಗಿದೆ. ಸಂತ್ರಸ್ತರಿಗೆ ಪಾಲಿಕೆ ಮತ್ತು ಸರ್ಕಾರದಿಂದ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದರು.