ಆಲೂರು [ಜ.12]:  ಕೇಂದ್ರ, ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಸಹಾಯ ಮಾಡುವುದಕ್ಕಿಂತ ಜನರಲ್ಲಿ ದ್ವೇಷದ ಬೀಜ ಬಿತ್ತುತ್ತಿವೆ ಎಂದು ಜೆ.ಡಿ.ಎಸ್‌ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಟೀಕಿಸಿದ್ದಾರೆ.

ತಾಲೂಕಿನ ಚೆನ್ನಾಪುರ ಗ್ರಾಮದ ಹಜರತ್‌ ಸಯ್ಯದ್‌ ಮೀರಾ ಮೊಹಿಯುದ್ದೀನ್‌ ಷಾ ಖಾದ್ರಿ ದರ್ಗಾ ಕಮಿಟಿ ವತಿಯಿಂದ ಚನ್ನಾಪುರ ಗ್ರಾಮದ ದರ್ಗಾ ಆವರಣದಲ್ಲಿ ನಡೆದ ಗಂಧೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಬದುಕುವ ಹಕ್ಕು ಎಲ್ಲ ಸಮಾಜದವರಿಗೂ ಇದೆ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಎಲ್ಲರನ್ನೂ ನೆಮ್ಮದಿಯಿಂದ ಬದುಕಲು ಬಿಡಬೇಕು. ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್‌ಆರ್‌ಸಿ ಕಾಯಿದೆ ತಂದು ದೇಶದಲ್ಲಿ ಜನಸಾಮಾನ್ಯರ ನೆಮ್ಮದಿ ಕೆಡಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂತಹ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಮಾಜಮುಖಿ ಕಾರ್ಯಕ್ರಮಗಳನ್ನು ಬಿಟ್ಟು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನಸಾಮಾನ್ಯರನ್ನು ಸರಿದಾರಿಗೆ ತೆಗೆದುಕೊಂಡು ಹೋಗಬೇಕು. ದರ್ಗಾ ಕಮಿಟಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುದರಿಂದ ಸಮಾಜದಲ್ಲಿ ಶಾಂತಿ ಸಹಬಾಳ್ವೆ ಮೂಡುತ್ತದೆ ಎಂದು ಹೇಳಿದರು.

ಬಿಗ್ ಶಾಕ್ ಕೊಟ್ಟ ಹೈಕಮಾಂಡ್: ಸಚಿವರಾಗ್ಬೇಕೆಂದು ಬಿಜೆಪಿಗೆ ಹೋದವರಿಗೆಲ್ಲ ಇಲ್ಲ ಮಂತ್ರಿಗಿರಿ?...

ಜಿಲ್ಲಾ ಎಪಿಎಂಸಿ ಅಧ್ಯಕ್ಷ ಕೆ.ಎಸ್‌.ಮಂಜೇಗೌಡ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಎಲ್ಲ ವರ್ಗದ ಜನರನ್ನು ಸಮಾನವಾಗಿ ತೆಗೆದುಕೊಂಡು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕೆಂಬುದು ಅಂಬೇಡ್ಕರ್‌ ಗಾಂಧೀಜಿ ಅವರ ಆಶಯವಾಗಿತ್ತು. ಅದರಂತೆ ನಮ್ಮನ್ನಾಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರ ಆದರ್ಶಗಳನ್ನು ಪಾಲನೆ ಮಾಡಬೇಕಾಗಿದೆ. ಇಲ್ಲಿ ಬದುಕುವ ಎಲ್ಲ ಸಮಾಜದವರು ಕೂಡ ಈ ದೇಶದ ಸಂಸ್ಕೃತಿಯನ್ನು ಅರಿತು ಬಾಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿ.ಕೆ.ಲಿಂಗರಾಜು, ಕೆ.ಎನ್‌.ಕಾಂತರಾಜ್‌, ತನು ಗೌಡ ಅಬ್ದುಲ್‌ ಮಜಿದ್‌, ಪರ್ವಿಶ್‌ ಷಾ ಸಯ್ಯದ್‌ ಅಕ್ಬರ್‌, ಅಜ್ಜೇಗೌಡ, ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್‌ ಹಾಗೂ ಇತರರು ಇದ್ದರು.