ಬೆಂಗಳೂರು, [ಜ.11]: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಉಪಚುನಾವಣೆಯಲ್ಲಿ ಗೆದ್ದ ಎಲ್ಲ ಶಾಸಕರಿಗೂ ಮಂತ್ರಿಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ. ಗೆದ್ದ 11 ಶಾಸಕರ ಪೈಕಿ ಕೆಲವರಿಗೆ ಮಾತ್ರ ಸಚಿವ ಸ್ಥಾನಕ್ಕೆ ಒಪ್ಪಿಗೆ ನೀಡಾಲಾಗಿದ್ದು, ಉಳಿದವರಿಗೆ ನಿರಾಸೆ ಕಾದಿದೆ.

ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರಿಗೂ ಸಚಿವ ಸ್ಥಾನ ನೀಡಾಲಾಗುವುದು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದರು. ಆದರೀಗ ಇದಕ್ಕೆ ಬಿಜೆಪಿ ವರಿಷ್ಠರು ಸಮ್ಮತಿ ಸೂಚಿಸಿಲ್ಲ ಎನ್ನಲಾಗಿದೆ. 

ಸಂಕ್ರಾಂತಿಗೆ ಎಳ್ಳು-ಬೆಲ್ಲೆ ತಿನ್ನುವ ಖಷಿಯಲ್ಲಿದ್ದ ಸಚಿವಾಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದ BSY ನಡೆ

ಹೈಕಮಾಂಡ್ ಹೊಸ ಕ್ಯಾತೆ..?

ಗೆದ್ದ 11 ಶಾಸಕರಲ್ಲಿ 8 ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನುವ ಮಾತು ರಾಜ್ಯ ಬಿಜೆಪಿ ವಲಯದಲ್ಲಿ ಗುಸು-ಗುಸು. ಇದರಿಂದ ಸಂಪುಟ ವಿಸ್ತರಣೆಗೆ ವಿಳಂಬವಾಗುತ್ತಿದೆಯಂತೆ.

ಆರಂಭದಲ್ಲಿ 11 ಶಾಸಕರ ಪೈಕಿ 6 ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲು ಅಮಿತ್ ಶಾ ಒಪ್ಪಿದ್ದರು. ಆದರೆ ವರಿಷ್ಠರ ನಿರ್ಧಾರವನ್ನು ಒಪ್ಪದ ಸಿಎಂ ಬಿ.ಎಸ್ ಯಡಿಯೂರಪ್ಪ, ಹೆಚ್ಚುವರಿ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದರಿಂದ ಅಂತಿಮವಾಗಿ 8 ಶಾಸಕರಿಗೆ ಸಚಿವ ಸ್ಥಾನ ನೀಡಲು ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ಯಾವ ಶಾಸಕರು ಸಚಿವ ಸ್ಥಾನದಿಂದ ವಂಚಿತರಾಗಲಿದ್ದಾರೆ ಹಾಗೂ ಯಾವ ಸಚಿವರಿಗೆ ಕೊಕ್ ನೀಡಲಿದ್ದಾರೆ ಎಂಬುದು ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.

ಸಂಪುಟ ಒತ್ತಡ: ಸಿಎಂ ವಿದೇಶ ಭೇಟಿ ರದ್ದು?

ಕೆರಳಿದ ನೂತನ ಅರ್ಹ ಶಾಸಕರು

ಒಂದು ಕಡೆ ಸಂಪುಟ ವಿಸ್ತರಣೆ ವಿಳಂಬ ಮತ್ತೊಂದೆಡೆ ಕೆಲವರಿಗೆ ಮಾತ್ರ ಸಚಿವ ಸ್ಥಾನ ಎನ್ನುವ ಮಾತುಗಳು ಬಿಜೆಪಿಯಲ್ಲಿ ಕೇಳಿಬಂದಿದ್ದರಿಂದ ಕೆರಳಿದ ನೂತನ ಅರ್ಹ ಶಾಸಕರು ಯಡಿಯೂರಪ್ಪ ಮೇಲೆ ಆಕ್ರೋಶಗೊಂಡಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ ಶಾಸಕರಲ್ಲಿ ಕೆಲವರಿಗೆ ಮಂತ್ರಿ ಇಲ್ಲ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆಯೇ 11 ಜನ ದಿಢೀರ್ ಸಭೆ ನಡೆಸಿದ್ದು, ಯಡಿಯೂರಪ್ಪ ಅವರು ಈ ಹಿಂದೆ ತಮಗೆ ನೀಡಿದ್ದ ಭರವಸೆಯಂತೆ ನಡೆದುಕೊಳ್ಳಬೇಕೆಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 

ಬಿಎಸ್ ವೈ ಫಾರಿನ್ ಟೂರ್ ರದ್ದು

 ಒಂದೆಡೆ ಹೈಕಮಾಂಡ್ ನಡೆ ಮತ್ತೊಂದೆಡೆ ನೂತನ ಅರ್ಹ ಶಾಸಕರ ಸಂದೇಶದಿಂದ ಬಿಎಸ್ ಯಡಿಯೂರಪ್ಪ ಒತ್ತಡದಲ್ಲಿದ್ದಾರೆ. ಯಾರಿಗೆ ಸಚಿವ ಸ್ಥಾನ ಕೊಡಬೇಕು..? ಯಾರನ್ನು ಕೈಬಿಡಬೇಕೆನ್ನುವ ಚಿಂತನೆಯಲ್ಲಿದ್ದಾರೆ. ಇದ್ರಿಂದ ತಲೆ ಕೆಟ್ಟು ಜನವರಿ 21 ರಿಂದ 24 ರವರೆಗೆ ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಇದೇ ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಭೇಟಿಗಾಗಿ ಇಂದು [ಶನಿವಾರ] ದೆಹಲಿಗೆ  ಹೋಗುವುದನ್ನು ಕ್ಯಾನ್ಸಲ್ ಮಾಡಿಕೊಂಡಿದ್ದು, ಇದೇ  18ರಂದು ರಾಜ್ಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗಮಿಸಲಿದ್ದು, ಅಂದೇ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸುತ್ತೇನೆಂದು ಸ್ಪಷ್ಟನೆ ನೀಡಿದ್ದಾರೆ.

ಹೊಸಬರಿಗೆ ಮಣೆ ಹಾಕಲು ಮೂವರ ತಲೆದಂಡ..?

ಹೌದು.. ಸಚಿವ ಸ್ಥಾನ ಸಿಕ್ಕಿಲ್ಲವೆಂದೇ ಕಾಂಗ್ರೆಸ್-ಜೆಡಿಎಸ್ ನಿಂದ ಹೊರಬಂದು ಉಪಚುನಾವಣೆ ಎದುರಿಸಿ ಮತ್ತೆ ವಿಧಾನಸಭೆಗೆ ಆಯ್ಕೆಯಾಗಿದ್ದು, ಇದೀಗ ಸಚಿವರಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಇದರಿಂದ ನೂತನ ಅರ್ಹ ಶಾಸಕರಿಗೆ ಮಂತ್ರಿ ಸ್ಥಾನ ಕೊಡಲೇಬೇಕಾದ ಅನಿವಾರ್ಯತೆ ಬಿಜೆಪಿ ಎದುರಾಗಿದೆ. 

ಇದರಿಂದ ಸಂಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೊಸಬರಿಗೆ ಮಣೆ ಹಾಕಲು ಇಬ್ಬರು ಅಥವಾ ಮೂವರು ಸಚಿವರಿಂದ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. 

ವಿಧಾನಪರಿಷತ್ ಸದಸ್ಯರಾಗಿ ಯಡಿಯೂರಪ್ಪ ಸಂಪುಟ ಸೇರಿರುವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಸಹ ಮನವೋಲಿಸುವ ಪ್ರಯತ್ನಗಳು ನಡೆದಿವೆ.  ಹೊಸಬರಿಗೆ ಚಾನ್ಸ್ ಕೊಡಲು ಪ್ರಭು ಚೌಹಾಣ್ ಜತೆ ಮಾತುಕತೆಗಳು ಸಹ ನಡೆದಿವೆ ಎನ್ನವ ಮಾಹಿತಿ ಕೂಡ ಸಿಕ್ಕಿವೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದ್ರೆ ಪ್ರಭು ಚೌಹಾಣ್ ಬಿಎಸ್ ವೈ ಸಂಪುಟದಿಂದ ಹೊರಹೋಗುವುದು ಖಚಿತ.

ಬೆಂಗಳೂರು ಸಚಿವರಿಗೂ ಸಂಕಷ್ಟ 

ಬೆಂಗಳೂರಿ ಮೂವರು ಅಂದ್ರೆ ಸೋಮಣ್ಣ, ಅಶ್ವಥ್ ನಾರಾಯಣ, ಅಶೋಕ್ ಅವರು ಸಂಪುಟದಲ್ಲಿದ್ದಾರೆ. ಇದೀಗ ಮತ್ತೆ ಮೂವರು ಯಶವಂತಪುರದ ಎಸ್.ಟಿ ಸೋಮಶೇಖರ್, ಮಮಾಲಕ್ಷ್ಮೀ ಲೇಔಟ್ ನಿಂದ ಗೋಪಾಲಯ್ಯ ಮತ್ತು ಕೆ.ಆರ್.ಪುರಂನಿಂದ ಬೈರತಿ ಬಸವರಾಜ್ ಗೆದ್ದಿದ್ದು, ಇವರಿಗೂ  ಸಂಪುಟಕ್ಕ ಸೇರಿಸಿಕೊಳ್ಳಲೇಬೇಕಾಗಿದೆ. ಇದರಿಂದ ಹೊಸಬರಿಗೆ ಚಾನ್ಸ್ ಕೊಡಲು ಓರ್ವ ಬೆಂಗಳೂರು ಮಿನಿಷ್ಟರ್ ನನ್ನು ಸಚಿವ ಸ್ಥಾನದಿಂದ ಕೈಬಿಡುವ ಚಿಂತನೆಗಳ ಸಹ ನಡೆದಿವೆ. ಅದರಲ್ಲೂ ವಿ.ಸೋಮಣ್ಣ ಅವರಿಗೆ ಕೊಕ್ ನೀಡುತ್ತಾರೆ ಎನ್ನವ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

ಸಂಪುಟದಿಂದ ಸವದಿ ಔಟ್..?

ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಲಕ್ಷ್ಮಣ ಸವದಿ ಡಿಎಸಿಎಂ ಆಗಿದ್ದು, ಅವರು ಫೆ.20ರೊಳಗೆ ಸದನದ ಸದಸ್ಯರಾಗಬೇಕು. ಈ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ಅವರನ್ನ ಕೈಬಿಡುವ ಎಲ್ಲಾ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ರಮೇಶ್ ಜಾರಿಕೊಳಿಗೆ ಪ್ರಮುಖ ಖಾತೆ ನೀಡಿ ಇನ್ನುಳಿದ ಜಿಲ್ಲೆಯ ನೂತನ ಅರ್ಹ ಶಾಸಕರಾದ ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ್ ಪಾಟೀಲ್ ಮೂಗಿಗೆ ತುಪ್ಪ ಸವರಲು ಮುಂದಾಗಿದ್ದಾರೆ.