ವಿಧಾನಸಭೆ (ಫೆ.05):  ಮಲೆನಾಡ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕೊಡಗು ಜಿಲ್ಲೆಯಲ್ಲಿ ಕಾಡುಹಂದಿಯನ್ನು ತಡೆಯಲು ಬಂದೂಕು ಬಳಕೆಗೆ ಅನುಮತಿ ನೀಡಿರುವಂತೆ ನಮಗೂ ಅವಕಾಶ ನೀಡಬೇಕು ಎಂದು ಮಲೆನಾಡ ಭಾಗದ ಶಾಸಕರು ಒಕ್ಕೊರಲ ಧ್ವನಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಹರತಾಳು ಹಾಲಪ್ಪ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಹುಲಿ, ಚಿರತೆ, ಕಾಡುಹಂದಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಬೆಳೆಗಳು ನಾಶವಾಗುತ್ತಿದೆ ಎಂದು ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ದನಿಗೂಡಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದು ಒಂದು ಕ್ಷೇತ್ರದ ಸಮಸ್ಯೆಯಲ್ಲ, ಇಡೀ ಮಲೆನಾಡು ಭಾಗದ ಸಮಸ್ಯೆಯಾಗಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು. ನಂತರ ಪಕ್ಷಭೇದ ಮರೆತು ಮಲೆನಾಡ ಭಾಗದ ಶಾಸಕರು ಕಾಡುಪ್ರಾಣಿಗಳ ಹಾವಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಪ್ರಾಣಿಗಳ ಹಾವಳಿಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದರೆ, ಕ್ರಮ ಕೈಗೊಳ್ಳಬೇಕಾದ ಸರ್ಕಾರ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಆಗಿರುವ ಹಾನಿಗೆ ಪರಿಹಾರವನ್ನೂ ನೀಡುತ್ತಿಲ್ಲ ಎಂದು ತಮ್ಮ ನೋವು ತೋಡಿಕೊಂಡರು.

ಅಡಕೆಗೆ ಡ್ರಗ್ಸ್‌ ಪಟ್ಟ ಕಟ್ಟಿದ್ದಕ್ಕೆ ತೀವ್ರ ಆಕ್ರೋಶ: ಕ್ವಿಂಟಲ್‌ ಬೆಲೆ 5 ಸಾವಿರ ರು. ಕುಸಿತ!

ಹರತಾಳು ಹಾಲಪ್ಪ ಮಾತನಾಡಿ, ಮಲೆನಾಡು ಭಾಗದಲ್ಲಿ ಹಂದಿಕಾಟ ವಿಪರೀತವಾಗಿದೆ. ಗುಂಪು ಗುಂಪಾಗಿ ನುಗ್ಗುವ ಹಂದಿಗಳು ಬೆಳೆ ನಾಶಪಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವೇ, ಕೊಡಗು ಜಿಲ್ಲೆಯಲ್ಲಿ ಹಂದಿಗಳ ಹಾವಳಿ ತಡೆಯಲು ಬಂದೂಕು ಬಳಸಲು ಪರವಾನಗಿ ನೀಡಲಾಗಿದೆ. ನಮಗೂ ಇದಕ್ಕೆ ಅವಕಾಶ ನೀಡಬೇಕು. ನಮ್ಮ ಭಾಗದಲ್ಲಿ ಬಂದೂಕು ಬಳಕೆಗೆ ಅವಕಾಶ ಇಲ್ಲ. ಬಳಕೆ ಮಾಡಿದರೆ ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಲಾಗುತ್ತದೆ ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಸದಸ್ಯರಾದ ಎಚ್‌.ಕೆ.ಕುಮಾರಸ್ವಾಮಿ, ಅರಗ ಜ್ಞಾನೇಂದ್ರ ಸೇರಿದಂತೆ ಇತರರು ತಮ್ಮ ಕ್ಷೇತ್ರದಲ್ಲಿ ಕಾಡುಪ್ರಾಣಿಗಳಿಂದಾಗುವ ಸಮಸ್ಯೆಗಳ ಕುರಿತು ಸದನಕ್ಕೆ ಹೇಳಿದರು.

ಎಲ್ಲರ ಭಾವನೆಗಳಿಗೆ ಸ್ಪಂದಿಸಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಈ ವಿಷಯದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಮಲೆನಾಡ ಭಾಗದ ಎಲ್ಲಾ ಶಾಸಕರನ್ನು ಕರೆದು ಸಭೆ ನಡೆಸಿ ಯಾವ ತೀರ್ಮಾನ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ಕಾಡುಪ್ರಾಣಿಗಳಿಂದ ಸಾಕು ಪ್ರಾಣಿಗಳಿಗೆ ಹಾನಿಯಾದರೆ 10 ಸಾವಿರ ರು. ಪರಿಹಾರ, ಕುರಿ, ಮೇಕೆಗಳಿಗೆ ಹಾನಿಯಾದರೆ 50 ಸಾವಿರ ರು., ಮನುಷ್ಯರಿಗೆ ಹಾನಿಯಾದರೆ ಏಳುವರೆ ಲಕ್ಷ ರು. ಪರಿಹಾರ ನೀಡಲಾಗುತ್ತಿದೆ. ಪರಿಹಾರ ಮೊತ್ತ ಹೆಚ್ಚಳ ಮಾಡುವ ಬೇಡಿಕೆಯೂ ಇದೆ. ಇ-ತಂತ್ರಾಂಶ ಬಳಕೆ ಮಾಡಿ ಪರಿಹಾರ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.