ಧಾರವಾಡ(ಫೆ.01): ಮಹದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಹೇಳಿದ್ದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಿದೆ. ಕೊನೆಯ ಪಕ್ಷ ಅವರು ತಮ್ಮ ಪಕ್ಷದ ಮಾತು ಹಾಗೂ ಅವರಿವರ ಮಾತು ಕೇಳದೇ ಇದ್ದರೂ ಸುಪ್ರೀಂ ಕೋರ್ಟ್‌ ಆದೇಶವನ್ನಾದರೂ ಪಾಲಿಸಬೇಕು. ಮಹದಾಯಿ ವಿಚಾರದಲ್ಲಿ ಈಗಾಗಲೇ ತೀರ್ಪು ಬಂದಿದ್ದು, ಈಗ ಅನುಷ್ಠಾನದತ್ತ ರಾಜ್ಯ ಸರ್ಕಾರ ಗಂಭೀರ ಹೆಜ್ಜೆ ಹಾಕಬೇಕಿದೆ ಎಂದು ಶಾಸಕ ಎಚ್‌.ಕೆ. ಪಾಟೀಲ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರೆಲ್ಲ ಮುಂದೆ ಪಶ್ಚಾತ್ತಾಪ ಪಡುತ್ತಾರೆ. ಎಚ್‌. ವಿಶ್ವನಾಥ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಅವರು ಕಾಂಗ್ರೆಸ್‌ ಬಿಟ್ಟು ಹೋಗಿದ್ದೇ ತಪ್ಪು ಹೆಜ್ಜೆ. ಕಾಂಗ್ರೆಸ್‌ನಿಂದ ಯಾರು ಹೊರಗೆ ಹೋಗುತ್ತಾರೆಯೋ ಬರುವ ದಿನಗಳಲ್ಲಿ ಪಶ್ಚಾತ್ತಾಪ ಪಡುತ್ತಾರೆ ಎಂದರು.

ಜೆಡಿಎಸ್-ಬಿಜೆಪಿ ಮೈತ್ರಿ: ಪಕ್ಷದಲ್ಲಿ ಶುರುವಾಯ್ತು ಅಸಮಾಧಾನ..!

ಬೈಪಾಸ್‌ ರಸ್ತೆ ಬಗ್ಗೆ ನಾನು ಈಗಾಗಲೇ ಬೇಸರ ವ್ಯಕ್ತಪಡಿಸಿದ್ದೇನೆ. ಕಿರಿದಾದ ಈ ರಸ್ತೆಯ ಮೇಲೆ ಜನರ ಪ್ರಾಣ ಹೋದರೂ ಪರವಾಗಿಲ್ಲ. ತಾವು ರಸ್ತೆ ಗುತ್ತಿಗೆದಾರನಿಂದ ಲಾಭ ಪಡೆಯುತ್ತಿರಬೇಕು ಎನ್ನುವ ಭಾವನೆ ಕೆಲವರದ್ದು. ಸುಪ್ರೀಂ ಕೋರ್ಟ್‌ ಈ ಬಗ್ಗೆ ಪ್ರಶ್ನಿಸಿದಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಕೇಂದ್ರ, ರಾಜ್ಯದ ಮಂತ್ರಿಗಳು ಇಲ್ಲಿಯೇ ಇದ್ದು ಶೀಘ್ರಗತಿಯಲ್ಲಿ ಈ ರಸ್ತೆ ಅಗಲೀಕರಣಕ್ಕೆ ಪ್ರಯತ್ನ ಮಾಡಬೇಕು. ಇಲ್ಲದೇ ಹೋದಲ್ಲಿ ಸಾರ್ವಜನಿಕ ಹೋರಾಟ ಶುರುವಾಗಿ ರಸ್ತೆ ಗುತ್ತಿಗೆದಾರರಿಂದ ಯಾರಾರ‍ಯರು ಲಾಭ ಪಡೆದಿದ್ದಾರೆಯೋ ಅವರ ಬಣ್ಣ ಬಯಲಾಗುತ್ತದೆ ಎಂದರು.