ಜೆಡಿಎಸ್-ಬಿಜೆಪಿ ಮೈತ್ರಿ: ಪಕ್ಷದಲ್ಲಿ ಶುರುವಾಯ್ತು ಅಸಮಾಧಾನ..!
ವಿಧಾನಪರಿಷತ್‌ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಧಾರವಾಡ, (ಜ.30): ನಾವು ಯಾರನ್ನು ಒದ್ದು ಬಂದಿದ್ದೇವೋ.. ಇಂದು ಅವರ ಜೊತೆಗೆನೇ ಮದುವೆಯಾಗಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು...ಆಡಳಿತರೂಢ ಬಿಜೆಪಿ, ಪರಿಷತ್ ಸಭಾಪತಿಯನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ತಾನು ಉಪಸಭಾಪತಿ ಕುರ್ಚಿಯಲ್ಲಿ ಕುಳಿತುಕೊಂಡಿದೆ. ಆದ್ರೆ, ಇಲ್ಲಿ ತಮ್ಮ ಮಾಜಿ ಪಕ್ಷ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದಕ್ಕೆ ವಿಶ್ವನಾಥ್ ಕೊಂಚ ಬೇಸರಗೊಂಡಂತಿದೆ. ಯಾಕಂದ್ರೆ ಈ ಹಿಂದೆ ವಿಶ್ವನಾಥ್ ಅವರು ಜೆಡಿಎಸ್ ಶಾಸಕರಾಗಿದ್ದವರು. ಅಲ್ಲದೇ ಕುಮಾರಸ್ವಾಮಿ ನಡೆಗೆ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು.
'ಬಿಜೆಪಿ-ಜೆಡಿಎಸ್ ಮೈತ್ರಿ: ದೇವೇಗೌಡ್ರು ನನ್ನ ಸಲುವಾಗಿ ಈ ತೀರ್ಮಾನ ಮಾಡಿದ್ರು'
ಇನ್ನು ಈ ಬಗ್ಗೆ ಧಾರವಾಡದಲ್ಲಿ ಇಂದು (ಶನಿವಾರ) ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾನು ಹಠದಿಂದ ಮಂತ್ರಿ ಆಗಬೇಕು ಎಂದು ಜೆಡಿಎಸ್ ಬಿಟ್ಟು ಬಂದಿಲ್ಲ. 17 ಜನರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ವಿ. ಇಲ್ಲಿ ಪಕ್ಷ ರಾಜಕಾರಣ ಸತ್ತು ಹೋಗಿದೆ. ಶಾಸಕಾಂಗ ಪಕ್ಷದ ನಾಯಕನ ವಿರುದ್ಧ ನಡೆದ ಷ್ಯಡ್ಯಂತ್ರ ಇದು ಎಂದು ಗುಡುಗಿದರು.
ದೇಶದಲ್ಲಿ ಪ್ರಧಾನಿ ಮೋದಿ ಕುಟುಂಬ ರಾಜಕಾರಣ ನಡೆಯುತ್ತಿದೆ ಅಂತಿದ್ದಾರೆ. ಕುಟುಂಬ ರಾಜಕಾರಣಕ್ಕೆ ಕೊನೆ ಹಾಡಿದ್ದೇ ನಾವು. ಅನಂತಕುಮಾರ್ ನಿಧನದ ನಂತರ ಅವರ ಕುಟುಂಬಕ್ಕೆ ಟಿಕೆಟ್ ಸಿಕ್ಕಿಲ್ಲ. ಇನ್ನು ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡೋದರ ಬಗ್ಗೆ ಕಾದು ನೋಡೋಣ ಎಂದರು.