Asianet Suvarna News Asianet Suvarna News

ವಿಜಯಪುರ ಜಿಲ್ಲೆ ತೋಟಗಾರಿಕೆಗೆ ಸಮೃದ್ಧವಾದ ನೆಲವಾಗಿದೆ: ಶಾಸಕ ಯತ್ನಾಳ

ಮೂರು ದಿನ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಶಾಸಕ ಯತ್ನಾಳ|ಮೊದಲು ರೈತರಿಗೆ ಒಣದ್ರಾಕ್ಷಿಗೆ ಕನಿಷ್ಠ 280 ಪ್ರತಿಕಿಲೋಗೆ ದೊರಕಿದರೆ ರೈತರೇ ಕೋಟ್ಯಾಧೀಶರಾಗುತ್ತಾರೆ|  ವಿಮಾನ ನಿಲ್ದಾಣದ ಬದಲು ರೈಲುಗಳ ಸಂಖ್ಯೆ ಹೆಚ್ಚಾಗಬೇಕು|

MLA Basanagouda Patil Yatnal Talks Over Horticulture
Author
Bengaluru, First Published Jan 16, 2020, 12:31 PM IST

ವಿಜಯಪುರ(ಜ.16): ನಗರದಲ್ಲಿ ನಿರ್ಮಿಸಲಾಗಿರುವ ಒಣದ್ರಾಕ್ಷಿ ಮಾರುಕಟ್ಟೆ ಸೇವೆಯನ್ನು ಒಂದು ತಿಂಗಳೊಳಗಾಗಿ ಆರಂಭಿಸುವ ಪ್ರಯತ್ನ ಮಾಡುತ್ತೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದ್ದಾರೆ. 

ನಗರದ ಅಂಬೇಡ್ಕರ್ ವೃತ್ತದ ಬಳಿಯ ಬಸವ ವನದ ಆವರಣದಲ್ಲಿ ಬುಧವಾರ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತಿ ವತಿಯಿಂದ ಮೂರು ದಿನ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ತೋಟಗಾರಿಕೆಗೆ ಸಮೃದ್ಧವಾದ ನೆಲವಾಗಿದೆ. ಆದರೆ, ರೈತರ ಮೇಲೆ ಅನ್ಯಾಯ, ಶೋಷಣೆ ತಪ್ಪಿಲ್ಲ. ಈ ಭಾಗದಲ್ಲಿಯೇ ಸಾವಿರಾರು ಕೋಟಿ ರುಪಾಯಿ ವ್ಯವಹಾರ ನಡೆಸಲು ಆನಲೈನ್ ಮೂಲಕ ಒಣದ್ರಾಕ್ಷಿ ಮಾರುಕಟ್ಟೆ ಸೇವೆ ಬಂದಾಗಿದ್ದು, ಇದನ್ನು ಒಂದು ತಿಂಗಳೊಳಗಾಗಿ ಆರಂಭಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತೋಟಗಾರಿಕೆ ಬೆಳೆಗಾರರಿಗೆ ದೊರಕಬೇಕಾದ ವಿಶ್ವಮಟ್ಟದ ಮಾರುಕಟ್ಟೆ ವ್ಯವಸ್ಥೆ ಇನ್ನೂ ದೊರಕಿಲ್ಲ. ಮಾರುಕಟ್ಟೆ ಎನ್ನುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. 3 ಕೋಟಿ ಖರ್ಚು ಮಾಡಿ ಕಟ್ಟಿಸಲಾಗಿರುವ ಆನಲೈನ್ ಟ್ರೇಡಿಂಗ್ ಸೆಂಟರ್ ವ್ಯವಸ್ಥಿತವಾಗಿ ಪ್ರಾರಂಭವಾಗದಂತೆ ನೋಡಿಕೊಂಡಿದ್ದರು. ಕೆಲ ವ್ಯಕ್ತಿಗಳು ವ್ಯವಸ್ಥಿತ ಲಾಬಿ ನಡೆಸಿದ್ದರು. ಆದರೆ, ನಾನು ಯಾವುದೇ ಲಾಬಿಗೂ ಮಣಿಯುವುದಿಲ್ಲ. ಯಾವ ಮೂಲದಿಂದಲೂ ಲಾಬಿ ನಡೆಸಲು ಬಿಡುವುದಿಲ್ಲ. ಒಂದು ತಿಂಗಳಲ್ಲಿ ಆನಲೈನ್ ಒಣದ್ರಾಕ್ಷಿ ಮಾರಾಟ ಆರಂಭಗೊಳ್ಳಲಿದೆ ಎಂದರು. 

ವಿಜಯಪುರದಲ್ಲಿಯೇ ಖರೀದಿಯಾದ ಒಣದ್ರಾಕ್ಷಿ ಹೊರಗೆ ನೂರಾರು ರುಪಾಯಿಗೆ ಮಾರಾಟವಾಗುತ್ತದೆ. ಆದರೆ, ರೈತರಿಗೆ ಮಾತ್ರ ವೈಜ್ಞಾನಿಕ ಬೆಲೆ ದೊರಕುತ್ತಿಲ್ಲ. ಕೋಟ್ಯಂತರ ರುಪಾಯಿ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ. 2 ಸಾವಿರ ಕೋಟಿ ವ್ಯವಹಾರ ನೆರೆಯ ಮಹಾರಾಷ್ಟ್ರದ ಪಾಲಾಗುತ್ತಿದೆ. ಇದನ್ನು ತಪ್ಪಿಸುವ ಆನಲೈನ್ ಮಾರಾಟ ವ್ಯವಸ್ಥೆ ರೂಪಿಸಲಾಗುವುದು. ಕೂಡಲೇ ಈ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು. 

ವಿಜಯಪುರದಲ್ಲಿ 50 ಸಾವಿರ ಟನ್ ಸಾಮರ್ಥ್ಯದ ಶೀತಲ ಘಟಕದ ಅವಶ್ಯಕತೆ ಇದೆ. ತೊರವಿಯ ಎಪಿಎಂಸಿ ಜಾಗದಲ್ಲಿ 15.56 ಕೋಟಿ ವೆಚ್ಚದಲ್ಲಿ ಶೀತಲ ಘಟಕ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಗಾಗಲೇ ಸಿದ್ದೇಶ್ವರ ಸಂಸ್ಥೆಯ ವತಿಯಿಂದ 5 ಸಾವಿರ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. 

ಸಾನ್ನಿಧ್ಯ ವಹಿಸಿದ್ದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದ ಅವರು, ಮಣ್ಣಿನಿಂದ ಸೌಭಾಗ್ಯ ಹೊರಬಂದು ಫಲ, ಪುಷ್ಪಗಳ ರೂಪದಲ್ಲಿ ಹೊರಬಂದಿದೆ. ನಮ್ಮ ಮನೆಯ ಹಿತ್ತಲಲ್ಲಿ, ಮಾಳಿಗೆಯಲ್ಲಿ ಒಳ್ಳೆಯ ಸಸ್ಯಗಳನ್ನು ಬೆಳೆಸುವುದು. ಹೂ-ಹಣ್ಣುಗಳನ್ನು ಬೆಳೆಸಬೇಕು. ಆಗ ಮನೆಯ ಅಂದ, ಬೆಳ್ಳಿ-ಬಂಗಾರದಿಂದ ಸೌಂದರ್ಯ ವೃದ್ಧಿಸುವುದಿಲ್ಲ. ನಿಸರ್ಗದ ಅರಳುವಿಕೆ, ಹಸಿರಿನಿಂದ ಸೌಂದರ್ಯ ಹೆಚ್ಚಿಸುತ್ತದೆ. ಎಲ್ಲಿ ಹಸಿರಿರುತ್ತದೆಯೋ, ಎಲ್ಲಿ ತಿಳಿತಿಳಿಯಾದ ನೀರು ಆಕಾಶದಿಂದ ಸುರಿಯತ್ತದೆಯೋ, ಎಲ್ಲಿ ನಗುವ ಜನರಿರುತ್ತಾರೋ ಅಲ್ಲಿ ಭಗವಂತ ನೆಲೆಸಿದ್ದಾರೆ ಎಂದು ತಿಳಿಸಿದರು. 

ಮನುಷ್ಯ ಪ್ರಯತ್ನ ಮಾಡಿದರೆ ಏನೂ ಬೇಕಾದರೂ ಸಾಧಿಸಬಹುದು, ಸುತ್ತಲಿರುವ ಪರಿಸರವನ್ನು ಅದ್ಭುತವಾಗಿ ಬೆಳೆಸಬೇಕು, ಒಳ್ಳೆಯ ಪದಾರ್ಥಗಳನ್ನು ತಿನ್ನಬೇಕು, ಒಳ್ಳೆಯ ಪದಾರ್ಥಗಳನ್ನು ತಿನಿಸಬೇಕು, ಸುಂದರ ಕುಸುಮಗಳ ರಚನೆ ಅತ್ಯಂತ ಅದ್ಭುತ ಎಂದರು. 

ಡಿಸಿ ವೈ.ಎಸ್. ಪಾಟೀಲ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಇನಾಮದಾರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್. ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್. ಶಿವಕುಮಾರ, ಪ್ರಗತಿಪರ ರೈತರಾದ ಸಂಜಯ ಪಾಟೀಲ ಕನಮಡಿ, ಬಿ.ಆರ್. ಪಾಟೀಲ ಕಡ್ಲೇವಾಡ, ಗುರುನಾಥ ಬಗಲಿ, ವಿ.ಜಿ. ರೇವಡಿಗಾರ, ಬಿ.ಎನ್. ಪಾಟೀಲ, ಹಾಪಕಾಮ್ಸ್ ಅಧ್ಯಕ್ಷ ಭೀಮಸೇನ ಕೋಕರೆ ಮುಂತಾದವರು ಇದ್ದರು.

ಈಗ ವಿಮಾನ ನಿಲ್ದಾಣ ಬೇಡ 

ರೈತರು, ಗಣ್ಯರು ವಿಮಾನ ನಿಲ್ದಾಣ ಮಾಡಬೇಕೆಂದು ಕೇಳುತ್ತಾರೆ. ಮೊದಲು ರೈತರಿಗೆ ಒಣದ್ರಾಕ್ಷಿಗೆ ಕನಿಷ್ಠ 280 ಪ್ರತಿಕಿಲೋಗೆ ದೊರಕಿದರೆ ರೈತರೇ ಕೋಟ್ಯಾಧೀಶರಾಗುತ್ತಾರೆ. ಆಗ ವಿಮಾನ ನಿಲ್ದಾಣ ಮಾಡಿದರೆ ಸಾರ್ಥಕವಾಗುತ್ತದೆ. ಈಗ ವಿಮಾನ ನಿಲ್ದಾಣವನ್ನು ತಲೆಯಲ್ಲಿ ತೆಗೆದುಕೊಂಡಿದ್ದಾರೆ. ಈಗ ವಿಮಾನ ನಿಲ್ದಾಣವಾಗಿ ವಿಮಾನ ಹಾರಾಡಿದರೂ ಕುಳಿತುಕೊಳ್ಳವರು ಬೇಕಲ್ಲ. ನಾಲ್ಕೈದು ಮಂದಿ ಓಡಾಡುತ್ತಾರೆ ಅಷ್ಟೇ. ವಿಮಾನ ನಿಲ್ದಾಣದ ಬದಲು ರೈಲುಗಳ ಸಂಖ್ಯೆ ಹೆಚ್ಚಾಗಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. 
 

Follow Us:
Download App:
  • android
  • ios