'ಹಂಪಿಯಿಲ್ಲದೆ ಬಳ್ಳಾರಿ ಜಿಲ್ಲೆ ಕಲ್ಪಿಸಿಕೊಳ್ಳಲು ಹೇಗೆ ಸಾಧ್ಯ?'
ಬಳ್ಳಾರಿ ಜಿಲ್ಲೆಯನ್ನು ತುಂಡು ಮಾಡುವುದಕ್ಕೆ ನನ್ನ ವಿರೋಧವಿದೆ| ವಿಜಯನಗರ ಪ್ರತ್ಯೇಕ ಜಿಲ್ಲೆಯಾಗುವುದರಿಂದ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಸಾಧ್ಯವಾಗುವುದಿಲ್ಲ| ಜಿಲ್ಲೆಯ ಆಡಳಿತಾರೂಢ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಧ್ವನಿ ಎತ್ತದಿರುವುದು ಬೇಸರ ತಂದಿದೆ: ಶಾಸಕ ಬಿ. ನಾಗೇಂದ್ರ|
ಬಳ್ಳಾರಿ(ನ.20): ಜಿಲ್ಲೆಯ ವಿಭಜಿಸಿ ವಿಜಯನಗರ ಜಿಲ್ಲೆ ರಚನೆಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣಿನಾಡು ಬಳ್ಳಾರಿ ಜಿಲ್ಲೆಯ ವಿಭಜನೆಯಿಂದಾಗಿ ಆಂಧ್ರಪ್ರದೇಶದ ಜನರ ದಬ್ಬಾಳಿಕೆ ಹೆಚ್ಚಾಗುತ್ತದೆ. ಕನ್ನಡ ಭಾಷೆ ಉಳಿಯೋದು ಕಷ್ಟವಾಗುತ್ತದೆ. ಬಳ್ಳಾರಿ ಗ್ರಾಮೀಣ, ಸಿರುಗುಪ್ಪ, ಬಳ್ಳಾರಿ ನಗರದಲ್ಲಿ ತೆಲುಗು ಭಾಷೆಯ ಪ್ರಭಾವ ಹೆಚ್ಚಿದೆ. ಜಿಲ್ಲೆ ವಿಭಜನೆಯಾದ್ರೆ ಅಷ್ಟು ಸುಲಭವಾಗಿ ಇಲ್ಲಿನ ಕನ್ನಡ ನಾಡಿನ ಸಂಸ್ಕೃತಿ ಉಳಿಯೋದಿಲ್ಲ, ಇದನ್ನು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಬೆಳಗಾವಿ ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿಯೂ ಹೆಚ್ಚು ತಾಲೂಕುಗಳಿವೆ, ಅವನ್ನು ವಿಭಜನೆ ಮಾಡದೇ, ಯಾಕೆ ಏಕಾ, ಏಕಿ ಬಳ್ಳಾರಿ ಜಿಲ್ಲೆಯನ್ನ ವಿಭಜನೆ ಯಾಕೆ ಮಾಡಿದ್ರಿ? ಹೊಸ ಜಿಲ್ಲೆಯ ಉದಯದಿಂದ ಪಶ್ಚಿಮ ತಾಲೂಕಿನ ಜನರಿಗೆ ಅನುಕೂಲವಾಗುತ್ತದೆ ಎಂಬುದು ಸ್ವಾಗತ, ಆದ್ರೆ ಬಳ್ಳಾರಿಯನ್ನೂ ಇಬ್ಭಾಗ ಮಾಡಬೇಡಿ. ನನ್ನ ಮೊದಲ ಬೇಡಿಕೆಯೇ ಇದು, ವಿಭಜನೆ ಬೇಡ, ಒಂದು ವೇಳೆ ವಿಜಯನಗರ ಜಿಲ್ಲೆಯೇ ಆಗಬೇಕೆಂದಾದ್ರೆ, ಜಿಲ್ಲಾ ಕೇಂದ್ರ ಹೊಸಪೇಟೆ ಮಾಡಿಕೊಂಡು, ನಮ್ಮನ್ನೂ ಸೇರಿಸಿಕೊಳ್ಳಿ ಎಂದು ಹೇಳಿದ್ದಾರೆ.
ನಾವೆಲ್ಲ ಬಿಜೆಪಿಯ ಮುತ್ತು, ಸಂಪತ್ತು: ಸಚಿವ ಆನಂದ ಸಿಂಗ್
ಹಂಪಿ ಮತ್ತು ತುಂಗಭದ್ರಾ ಜಲಾಶಯ ಇಲ್ಲದ ಬಳ್ಳಾರಿ ಜಿಲ್ಲೆಯನ್ನೂ ಊಹಿಸಿಕೊಳ್ಳಲು ಅಸಾಧ್ಯವಾಗಿದೆ. ಹೀಗಿರುವಾಗ ಯಾಕೆ, ಜಿಲ್ಲೆ ವಿಭಜನೆಗೆ ಕೈ ಹಾಕಿದ್ರಿ?, ಯಾರದೋ ಒಬ್ಬರ ವೈಯಕ್ತಿಕ ಹಿತಾಸಕ್ತಿಗೆ ಮಾಡಿದ್ದೀರಿ, ಆ ಭಾಗದ ಜನರ ಅನುಕೂಲ ಆದ್ರೆ ಓಕೆ, ಆದ್ರೆ ನಮ್ಮನ್ನು ಕೈ ಬಿಡಬೇಡಿ ಎಂದು ಶಾಸಕ ನಾಗೇಂದ್ರ ಮನವಿ ಮಾಡಿದ್ದಾರೆ.
ಕೆ.ಸಿ. ಕೊಂಡಯ್ಯ ಅವರು ಸ್ವಾಗತ ಮಾಡಿದ್ದು, ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಆದ್ರೆ ಬಳ್ಳಾರಿ ಜಿಲ್ಲೆಯ ಬಿಜೆಪಿಯ ಬಲಿಷ್ಠ ಶಾಸಕರು ಯಾಕೆ ಮೌನ ವಹಿಸಿದ್ದಾರೆ. ಈ ಸಂಬಂಧ ಯಾಕೆ ಧ್ವನಿ ಎತ್ತುತ್ತಿಲ್ಲಾ, ಅಖಂಡ ಜಿಲ್ಲೆಯಾಗಿ ಬಳ್ಳಾರಿ ಉಳಿಯಲಿ, ಒಡೆಯೋದು ಬೇಡ ಎಂದು ಶಾಸಕ ನಾಗೇಂದ್ರ ಮನವಿ ಮಾಡಿದ್ದಾರೆ.