Asianet Suvarna News Asianet Suvarna News

ನಾವೆಲ್ಲ ಬಿಜೆಪಿಯ ಮುತ್ತು, ಸಂಪತ್ತು: ಸಚಿವ ಆನಂದ ಸಿಂಗ್‌

ವೈಯಕ್ತಿಕ ಹಿತಾಸಕ್ತಿ ಇಲ್ಲ, ಹೋರಾಟಕ್ಕೆ ಸಂದ ಜಯ ಇದು| ಆನಂದ ಸಿಂಗ್‌ ಹಾಡಿ ಹೊಗಳಿದ ಬಿಸಿಪಾ ಮತ್ತು ಸೋಮಶೇಖರ| ವಿಜಯನಗರ ಜಿಲ್ಲೆಯ ವಿಜಯೋತ್ಸವ| 

Minister Anand Singh Talks Over BJP grg
Author
Bengaluru, First Published Nov 20, 2020, 1:26 PM IST

ಹೊಸಪೇಟೆ(ನ.20): ರಾಜೀನಾಮೆ ನೀಡಿ ಬಂದಿರುವ ನಾವೆಲ್ಲರೂ ಬಿಜೆಪಿಯ ಸಂಪತ್ತು. ಸದ್ಯ ರಾಜ್ಯ ಸಂಪುಟದಲ್ಲಿ ಇರುವ ನಾವೆಲ್ಲರೂ ಅನುಭವಿಗಳು. ಅನುಭವಿಗಳಾಗಿ ಬಿಜೆಪಿಗೆ ಬಂದಿದ್ದೇವೆ. ನಾವೆಲ್ಲರೂ ಬಿಜೆಪಿ ಮುತ್ತುಗಳು ಎಂದು ಅರಣ್ಯ ಸಚಿವ ಆನಂದ ಸಿಂಗ್‌ ಹೇಳಿದ್ದಾರೆ.

67ನೇ ಸಹಕಾರ ಸಪ್ತಾಹದ ಅಂಗವಾಗಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್‌ ಸಮಾವೇಶದಲ್ಲಿ ನಾನು ಜಿಲ್ಲೆ ಮಾಡ್ತೇನೆ ಎಂದಿದ್ದೆ, ಮಾಡಲಾಗದೇ ಇದ್ದಾಗ ನನ್ನನ್ನು ಚುಚ್ಚಿದ್ರು. ಹೀಗಾಗಿ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದು ಜಿಲ್ಲೆ ಮಾಡಿದ್ದೇನೆ. ಪ್ರತಿಷ್ಠೆಗಾಗಿ ಜಿಲ್ಲೆ ಮಾಡಿಲ್ಲ. ವೈಯಕ್ತಿಕ ಹಿತಾಸಕ್ತಿ ಇಲ್ಲ. ಕೈ ಮುಗಿಯುತ್ತೇನೆ, ಜಿಲ್ಲೆ ರಚನೆ ವಿರೋಧಿಸಿ ಪ್ರತಿಭಟನೆ ಮಾಡುವುದು ಬೇಡ. ಜಿಲ್ಲಾ ಹೋರಾಟದ ಇತಿಹಾಸ ಇದೆ. ಹೋರಾಟಕ್ಕೆ ಸಂದ ಜಯ ಇದಾಗಿದೆ ಎಂದು ಮನವಿ ಮಾಡಿಕೊಂಡರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ, ವಿಜಯನಗರ ಜಿಲ್ಲೆಯ ರೂವಾರಿ ಆನಂದ ಸಿಂಗ್‌ ಮತ್ತು ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿ, ನಿನ್ನೆ ಕ್ಯಾಬಿನೆಟ್‌ದಲ್ಲಿ ಈ ವಿಷಯ ವಿಚಾರ ಚರ್ಚೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೂ ಜಿಲ್ಲೆ ಘೋಷಣೆ ಮಾಡಿರುವ ವಿಚಾರ ಸಂತಸ ತಂದಿದೆ ಎಂದರು.

ವಿಜಯನಗರ ಜಿಲ್ಲೆ ರಚನೆ: ರೆಡ್ಡಿ ಹೇಳಿದಂತೆ ಬಳ್ಳಾರಿಯಲ್ಲಿ ಭುಗಿಲೆದ್ದ ಆಕ್ರೋಶ

ನಾನು ಮತ್ತು ಬಿ.ಸಿ. ಪಾಟೀಲ್‌ ಬೇರೆ ಕಾರಣಕ್ಕೆ ರಾಜೀನಾಮೆ ನೀಡಿದೆವು. ಆದರೆ, ವಿಜಯನಗರ ಜಿಲ್ಲೆ ರಚನೆಗಾಗಿ ಆನಂದ ಸಿಂಗ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ನೀಡಲು, ಯಮಗಂಡ ಕಾಲ, ಗುಳಿ ಕಾಲ, ರಾಹುಕಾಲ ನೋಡಲಿಲ್ಲ. ಜಿಲ್ಲೆಗಾಗಿ ರಾಜೀನಾಮೆ ನೀಡಿದರು ಎಂದರು. ನಾವೆಲ್ಲ ರಾಜೀನಾಮೆ ನೀಡಿ ಮುಂಬೈ, ದೆಹಲಿ ಸುತ್ತಾಡಿದರೆ ಆನಂದ್‌ ಸಿಂಗ್‌ ಕ್ಷೇತ್ರದಲ್ಲಿ ಉಳಿದುಕೊಂಡರು. ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಾಗೂ ಹಿಂದೂ ಸಾಮ್ರಾಜ್ಯದ ನೆನಪನ್ನು ಸದಾ ಉಳಿಸಲು ವಿಜಯನಗರ ಜಿಲ್ಲೆ ಸರ್ಕಾರ ಮಾಡುತ್ತಿದೆ ಎಂದರು.

ಸಂದೇಶ ರವಾನೆ:

ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ವಿಜಯನಗರ ಜಿಲ್ಲೆ ರಚನೆಗೆ ಆನಂದ್‌ಸಿಂಗ್‌ ರೂವಾರಿಯಾಗಿದ್ದಾರೆ. ಡಿಸಿಎಂ ಲಕ್ಷ್ಮಣ್‌ ಸವದಿ ಅವರ ಮೂಲಕ ಕ್ಯಾಬಿನೆಟ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಜಯನಗರ ಜಿಲ್ಲೆ ರಚನೆ ಸಂದೇಶ ರವಾನಿಸಿದರು. ನಾನು ಕೂಡ ಕಂಪ್ಲಿ, ಕುರುಗೋಡು ಭಾಗದಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಆಗಿ ಕೆಲಸ ಮಾಡಿರುವೆ. ಈ ನೆಲದ ಮಹತ್ವ ನನಗೆ ತಿಳಿದಿತ್ತು. ಹಾಗಾಗಿ ತುಂಬು ಹೃದಯದಿಂದ ಕ್ಯಾಬಿನೆಟ್‌ನಲ್ಲಿ ಸ್ವಾಗತಿಸಿದೆ. ರಾಜೀವ್‌ ಗಾಂಧಿ ಅವರ ಕಾರ್ಯಕ್ರಮದಲ್ಲಿ ಈ ಹೈಸ್ಕೂಲ್‌ ಗ್ರೌಂಡ್‌ನಲ್ಲಿ ಬಂದೋಬಸ್ತ್‌ ಮಾಡಿರುವೆ. ಈಗ ನಿಮ್ಮ ಆಶೀರ್ವಾದದಿಂದ ಮಂತ್ರಿಯಾಗಿರುವೆ ಎಂದರು.

ವಿಜಯನಗರ ಜಿಲ್ಲೆಯ ವಿಜಯೋತ್ಸವ!

ಸಹಕಾರ ಸಪ್ತಾಹವೋ ವಿಜಯನಗರ ಜಿಲ್ಲೆಯ ವಿಜಯೋತ್ಸವ ಕಾರ್ಯಕ್ರಮವೋ ಗೊತ್ತಾಗುತ್ತಿಲ್ಲ. ವಿಜಯನಗರ ಜಿಲ್ಲೆ ಮಾಡೋಕೆ ಕಾಂಗ್ರೆಸ್‌ ಒಪ್ಪದ ಕಾರಣ ರಾಜೀನಾಮೆ ನೀಡಿದ ಆನಂದ ಸಿಂಗ್‌. ಅಂದು ಮೊದಲ ವ್ಯಕ್ತಿಯಾಗಿ ರಾಜೀನಾಮೆ ನೀಡಿದ ಕಾರಣ ಇಂದು ಮಂತ್ರಿಯಾದರು. ಪ್ರತಿ ಕ್ಯಾಬಿನೆಟ್‌ ಮುಂಚೆ ಜಿಲ್ಲೆ ಮಾಡಿ ಎಂದು ಎಲ್ಲ ಮಂತ್ರಿಗಳ ಬಳಿ ಮನವಿ ಮಾಡ್ತಿದ್ದರು. ಯಡಿಯೂರಪ್ಪ ಜಿಲ್ಲೆ ಘೋಷಣೆ ಮಾಡಿದ ಕೂಡಲೇ ಆನಂದ ಸಿಂಗ್‌ ಕಣ್ಣಲ್ಲಿ ನೀರು ಬಂತು ಎಂದು ಸಚಿವ ಬಿ.ಸಿ. ಪಾಟೀಲ್‌ ಎಂದರು.
 

Follow Us:
Download App:
  • android
  • ios