ಹಂಪಿ (ಗಾಯಿತ್ರಿಪೀಠ)(ಜ.11): ಸಚಿವ ಸಂಪುಟ ವಿಸ್ತರಣೆಯಾಗಬೇಕು. ಹಾಗಂತ ನನಗೆ ಸಚಿವ ಸ್ಥಾನಮಾನ ಮುಖ್ಯವಲ್ಲ. ವಿಜಯನಗರ ಜಿಲ್ಲೆ ಘೋಷಣೆಯಾಗಬೇಕು ಎಂಬುದು ನನ್ನ ಹಕ್ಕೊತ್ತಾಯವಾಗಿದೆ ಎಂದು ವಿಜಯನಗರ ಶಾಸಕ ಆನಂದಸಿಂಗ್‌ ಹೇಳಿದರು.

ಹಂಪಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಸಿಂಗ್‌, ಮುಖ್ಯಮಂತ್ರಿ ಇಂದೇ ನೂತನ ಜಿಲ್ಲೆ ಘೋಷಣೆ ಮಾಡುತ್ತಾರೆ ಎಂದು ಭಾವಿಸಿರುವೆ ಎಂದು ಹೇಳಿದರು. ನಾನು ರಾಜೀನಾಮೆ ನೀಡಿದ್ದೇ ವಿಜಯನಗರ ಜಿಲ್ಲೆ ಮಾಡಬೇಕು ಎಂಬ ಬೇಡಿಕೆಗಾಗಿ. ಮುಖ್ಯಮಂತ್ರಿ ನಮ್ಮ ಮನವಿಗೆ ಸ್ಪಂದಿಸಬೇಕು ಎಂದು ಕೋರಿದರು.

ಹಂಪಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ: ಹರಿದು ಬಂದ ಜನಸಾಗರ

ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ವಿಜಯನಗರ ಹೊಸ ಜಿಲ್ಲೆ ಘೋಷಣೆಯ ಬಗ್ಗೆ ಯಾವುದೇ ವಿಚಾರವನ್ನು ಪ್ರಸ್ತಾಪಿಸಲೇ ಇಲ್ಲ. ವಿಜಯನಗರ ಜಿಲ್ಲೆ ಘೋಷಿಸಬಹುದು ಎಂಬ ಊಹಾಪೋಹ, ನಿರೀಕ್ಷೆಗಳೆಲ್ಲವೂ ಹುಸಿಯಾದವು.
ಆನಂದ ಸಿಂಗ್‌ ಮಾತು ಮುಂದುವರಿಸಿ ಮೈಸೂರು ದಸರಾ ಮಾದರಿಯಲ್ಲಿ ಹಂಪಿ ಉತ್ಸವ ನಡೆಯಬೇಕು. ಪ್ರತಿವರ್ಷ ನವೆಂಬರ್‌ 3, 4, 5ರಂದು ಉತ್ಸವ ಜರುಗಿಸಲು ದಿನಾಂಕ ನಿಗದಿಗೊಳಿಸಬೇಕು. ಇದಕ್ಕಾಗಿ 10 ಕೋಟಿ ನಿಗದಿಯಾಗಬೇಕು ಎಂದು ಮನವಿ ಮಾಡಿದರು. ಬಳಿಕ ಜಿಲ್ಲೆ ರಚನೆ ಮಾಡುವಂತೆ ಮನವಿ ಪತ್ರವನ್ನು ಶಾಸಕ ಆನಂದಸಿಂಗ್‌ ಅವರು ಮುಖ್ಯಮಂತ್ರಿಗೆ ನೀಡಿದರು.

ವಿಜಯನಗರ ಇತಿಹಾಸ ಹೇಳಲು ಮುಂದಾದ ಆನಂದಸಿಂಗ್‌ ಕಡೆ ಸಿಟ್ಟಿನಿಂದ ನೋಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಾಚ್‌ ತೋರಿಸಿ, ಟೈಮ್‌ ಆಗಿದೆ ಬೇಗ ಮುಗಿಸಿ ಎಂದು ಸೂಚಿಸಿದರು.

ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮಾತನಾಡಿ, ವಿಜಯನಗರ ಅವನತಿಗೆ ಕಾರಣವಾದ ಮನಸ್ಥಿತಿಗಳು ಸ್ವಾತಂತ್ರ್ಯ ನಂತರವೂ ದೇಶದಲ್ಲಿ ಅಭದ್ರತೆಯನ್ನುಂಟು ಮಾಡುವ ಪ್ರಯತ್ನದಲ್ಲಿವೆ ಎಂದು ಹೇಳಿದರು. ವಿಜಯನಗರ ಉತ್ಸವ ದುಷ್ಟಮನಸ್ಥಿತಿಗಳಿಗೆ ಪಾಠವಾಗಬೇಕು. ಹಂಪಿ ಉತ್ಸವಕ್ಕೆ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಸಚಿವ ಸಿ.ಟಿ. ರವಿ ಭರವಸೆ ನೀಡಿದರು.