Asianet Suvarna News Asianet Suvarna News

ಹಂಪಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ: ಹರಿದು ಬಂದ ಜನಸಾಗರ

ಹಂಪಿ ಉತ್ಸವದ ಮೊದಲ ದಿನ ಬೆಳಗ್ಗೆ ಬಣಬಣ, ಸಂಜೆ ಸಂಭ್ರ​ಮಕ್ಕೆ ಜನವೋ ಜನ|ಹಂಪಿ ಉತ್ಸವ ಉದ್ಘಾಟನೆಗೂ ಮುನ್ನ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌ ಹಾಸ್ಯಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು| ಉತ್ಸವದ ಗೊಡವೆಯಿಲ್ಲದೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು|

Hampi Utsava Held on Jan. 10th in Hampi in Ballari District
Author
Bengaluru, First Published Jan 11, 2020, 7:43 AM IST

ಕೆ.ಎಂ. ಮಂಜುನಾಥ್‌ 

ಹಂಪಿ (ಗಾಯಿತ್ರಿಪೀಠ) (ಜ.11):  ಹಂಪಿ ಉತ್ಸವಕ್ಕೆ ಈ ಬಾರಿ ಜನರ ಕೊರತೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಬೆಳಗ್ಗೆ ಹಂಪಿ ಪರಿಸರ ಬಣಬಣ ಎನ್ನುತ್ತಿತ್ತು. ಸಂಜೆ ಹೇಗೋ ಎಂಬ ಗುಮಾನಿ ಮರೆಯಾಯಿತು. ಸಂಜೆಯಾಗುತ್ತಿದ್ದಂತೆಯೇ ನಿಲ್ಲಲೂ ಜಾಗವಿಲ್ಲದೆ ಭರ್ತಿಯಾಯಿತು!

ಉತ್ಸವವನ್ನು ಆಕರ್ಷಣೀಯಗೊಳಿಸಬೇಕು. ಅರ್ಥಪೂರ್ಣವಾಗಿಸಬೇಕು ಎಂಬ ಕಾರಣಕ್ಕಾಗಿಯೇ ಜಿಲ್ಲಾಡಳಿತ ಸಾಕಷ್ಟು ಶ್ರಮಿಸಿತ್ತು. ಇಷ್ಟಾಗಿಯೂ ಜನರು ಬರದೇ ಹೋದರೆ ಉತ್ಸವ ಯಶಸ್ವಿಯಾಗಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಕಾಡಿತ್ತು.

ಸಂಜೆಯಾಗುತ್ತಿದ್ದಂತೆಯೇ ಜಿಲ್ಲೆ, ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಉತ್ಸವ ಪ್ರಿಯರು ಹಂಪಿಯತ್ತ ಹೆಜ್ಜೆ ಹಾಕಿದರು. ಇದರಿಂದ ಪ್ರಮುಖ ವೇದಿಕೆ (ಗಾಯಿತ್ರಿಪೀಠ) ಸೇರಿದಂತೆ ಇತರೆ ವೇದಿಕೆಯಲ್ಲೂ ಜನ ಜಂಗುಳಿ ಜಮಾವಣೆಗೊಂಡಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೊಸಪೇಟೆಯಿಂದ ಹಂಪಿಗೆ ಬರಲು ಉಚಿತವಾಗಿ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದು ಜನ ಸೇರಿಸುವಿಕೆಯ ಉದ್ದೇಶಕ್ಕೆ ಫಲ ನೀಡಿತು. ಬೆಳಗ್ಗೆ ವಿರುಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ಜರುಗಿದ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿಯಲ್ಲಿ ಪ್ರೇಕ್ಷಕರ ಕೊರತೆ ಎದ್ದುಕಂಡಿತು. ಪುಸ್ತಕ ಮೇಳ, ಫಲಪುಷ್ಪಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಆಹಾರ ಮೇಳ, ಮರಳು ಶಿಲ್ಪಕಲೆ ಉತ್ಸವ, ಶಿಲ್ಪಕಲೆ ಪ್ರದರ್ಶನ, ಚಿತ್ರಕಲಾ ಪ್ರದರ್ಶನಗಳಲ್ಲಿ ಹೆಚ್ಚಿನ ಜನರು ಕಂಡು ಬರಲಿಲ್ಲ. ಸಂಜೆಯಾಗುತ್ತಿದ್ದಂತೆಯೇ ಎಲ್ಲ ವಸ್ತು ಪ್ರದರ್ಶನ ಮಳಿಗೆಗಳು ಜನರಿಂದ ತುಂಬಿಕೊಂಡವು. ಬೆಳಗ್ಗೆ ಜರುಗಿದ ಸಾಹಸ ಕ್ರೀಡೆಗಳು, ಪಾರಂಪರಿಕ ತೆಪ್ಪ ಸ್ಪರ್ಧೆ, ಮತ್ಸ್ಯಮೇಳದಲ್ಲೂ ಆಸಕ್ತರ ಕೊರತೆ ಹೆಚ್ಚಾಗಿತ್ತು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂದರು:

ಬೆಳಗಿನ ಕಾರ್ಯಕ್ರಮಗಳತ್ತ ಹೆಚ್ಚು ಆಸ್ಥೆವಹಿಸದ ಜನರು ಸಂಜೆಯಾಗುತ್ತಿದ್ದಂತೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಿಸಲು ಹಂಪಿಯತ್ತ ಹೆಜ್ಜೆ ಹಾಕಿದರು. ಹಂಪಿಯ ರಾಜಬೀದಿ, ಮಾತಂಗ ಪರ್ವತ ಮೈದಾನ, ವಿರುಪಾಕ್ಷೇಶ್ವರ ದೇವಸ್ಥಾನ ಮುಂಭಾಗ, ಎದುರು ಬಸವಣ್ಣ ಪ್ರದೇಶ, ಸಾಸಿವೆ ಕಾಳು ಗಣಪ ಮುಂಭಾಗದ ಬಳಿ ಜನ ಸಾಗರ ಹರಿದು ಬಂತು.

ಹಂಪಿ ಉತ್ಸವ ಉದ್ಘಾಟನೆಗೂ ಮುನ್ನ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌ ಅವರ ಹಾಸ್ಯಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡು ಬರಲಿ ಎಂಬ ಕಾರಣಕ್ಕಾಗಿಯೇ ಪ್ರಾಣೇಶ್‌ ಅವರ ಹಾಸ್ಯ ಆಯೋಜಿಸಲಾಗಿದೆ ಎಂಬ ಮಾತು ಕೇಳಿ ಬಂತು.

ಮುಖ್ಯವೇದಿಕೆಯಲ್ಲಿ ಹೆಚ್ಚು ಜನ

ಗಾಯಿತ್ರಿ ಪೀಠದ ಬಳಿಯ ಮುಖ್ಯ ವೇದಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಂಡು ಬಂದರು. ಉಳಿದ ವೇದಿಕೆಯಲ್ಲಿ ಹೊತ್ತಾಗುತ್ತಿದ್ದಂತೆಯೇ ವೀಕ್ಷಕರು ಹೆಚ್ಚಿದರು. ಚಿತ್ರನಟ ಯಶ್‌ ಬರುತ್ತಿದ್ದಾರೆ ಎಂಬ ಕಾರಣಕ್ಕಾಗಿ ಯುವಕರು ಮುಖ್ಯ ವೇದಿಕೆಯತ್ತ ಹರಿದು ಬರುತ್ತಿರುವುದು ಕಂಡು ಬಂತು. ಮಹಿಳೆಯರು ಹಾಗೂ ಮಕ್ಕಳಿಗಿಂತ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಹಂಪಿ ಉತ್ಸವದಲ್ಲಿ ಚುರುಕಿನಿಂದ ಓಡಾಡುತ್ತಿರುವುದು ಕಂಡು ಬಂತು.

ವಿರುಪಾಕ್ಷನ ದರ್ಶನ ಪಡೆದರು:

ಹಂಪಿ ಉತ್ಸವ ಹಿನ್ನೆಲೆಯಲ್ಲಿ ಆರಾಧ್ಯದೈವ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಹೆಚ್ಚಿನ ಭಕ್ತರ ದಂಡು ಕಂಡುಬಂತು. ಉತ್ಸವಕ್ಕೆ ಬಂದವರು ದೇವರ ದರ್ಶನಕ್ಕೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ವಿರುಪಾಕ್ಷೇಶ್ವರನಿಗೆ ವಿಶೇಷವಾಗಿ ವಿವಿಧ ಪುಷ್ಪ, ಬಿಲ್ವಪತ್ರೆಗಳಿಂದ ಅಲಂಕರಿಸಲಾಗಿತ್ತು. ಕೃಷ್ಣದೇವರಾಯ ನೀಡಿದ್ದ ಚಿನ್ನದ ಕಿರೀಟವನ್ನು ವಿರುಪಾಕ್ಷ ದೇವನಿಗೆ ಇರಿಸಲಾಗಿತ್ತು. ಎಂದಿಗಿಂತಲೂ ಸುಮಾರು ಹತ್ತುಪಟ್ಟು ಜನರು ದರ್ಶನಕ್ಕೆ ಬಂದಿದ್ದಾರೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದರು.

ವಿದೇಶಿಯರ ಸಂಭ್ರಮ:

ಸ್ಥಳೀಯರು ಸೇರಿದಂತೆ ವಿದೇಶಿಯರು ಸಹ ಹಂಪಿ ಉತ್ಸವದಲ್ಲಿ ಉತ್ಸುಕದಿಂದ ಭಾಗವಹಿಸಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ರಷ್ಯಾದ ಲೇಖಕಿ ನಾವಿನ್ಸ್‌ ಲೀ ಅವರು ರಂಗೋಲಿ ಹಾಕಿ ಗಮನ ಸೆಳೆದರು. ಇವರ ಸಂಗಾತಿ ರೀಬನ್‌ ರೋ ಅವರು ಸಾಥ್‌ ನೀಡಿದರು. ಮೆಹಂದಿ ಸ್ಪರ್ಧೆಯಲ್ಲೂ ವಿದೇಶಿಯರು ಭಾಗವಹಿಸಿದ್ದು ಗಮನ ಸೆಳೆಯಿತು. ಸಂಜೆಯ ಕಾರ್ಯಕ್ರಮದಲ್ಲಿ ವಿದೇಶಿಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿತ್ತು.

ಹಂಪಿ ಉತ್ಸವಕ್ಕೆ ಬರುವ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ವೇದಿಕೆಗಳ ಹೊರ ವಲಯದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಗಣ್ಯರು, ಪತ್ರಕರ್ತರು ಹಾಗೂ ಕಲಾವಿದರಿಗೆ ಮಾತ್ರ ನೇರವಾಗಿ ವೇದಿಕೆಯ ಕಡೆ ಬರಲು ಅವಕಾಶವಿತ್ತು. ಹೀಗಾಗಿ ಸಾವಿರಾರು ಜನರು ಕಾಲ್ನಡಿಗೆಯಲ್ಲಿಯೇ ತಮಗಿಷ್ಟದ ವೇದಿಕೆಗಳಿಗೆ ಆಗಮಿಸಿ ಕಾರ್ಯಕ್ರಮ ವೀಕ್ಷಣೆಗೆ ಆಸೀನರಾದರು.

ಹಂಪಿ ಪರಿಸರದಲ್ಲಿ ಕಂಡು ಬಂದದ್ದು

· ಕಳೆದ ಬಾರಿಗಿಂತ ಹೆಚ್ಚಿನ ಜನರು ಸಂಜೆ ವೇಳೆ ಕಂಡು ಬಂದರು.
· ಉತ್ಸವಕ್ಕೆ ಜನರು ಬರುತ್ತಾರೋ ಇಲ್ಲವೋ ಎಂಬ ದುಗುಡ ಬೆಳಗ್ಗೆ ಜಿಲ್ಲಾಧಿಕಾರಿ ಮುಖದಲ್ಲಿ ಕಂಡು ಬಂತು. ಸಂಜೆ ಜನರು ಕಂಡು ನಿರಾಳಗೊಂಡರು.
· ಮುಖ್ಯ ವೇದಿಕೆಯಲ್ಲಿ ಹೆಚ್ಚಿನ ಜನರು ಜಮಾಯಿಸಿದರು.
· ಉತ್ಸವ ವೀಕ್ಷಣೆಗೆ ಬಂದವರಿಗೆ ಕುಡಿವ ನೀರಿನ ಕೊರತೆ ಕಂಡು ಬಂತು.
· ಮೊಬೈಲ್‌ ಶೌಚಾಲಯಗಳು ನಿರ್ವಹಣೆಯಿಲ್ಲದೆ ಸೊರಗಿದವು
· ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಬೆಳಗ್ಗೆಯಿಂದಲೇ ಉತ್ಸವದ ಯಶಸ್ವಿಯಾಗಿ ಬಿಡುವಿಲ್ಲದೆ ಓಡಾಡುವುದು ಕಂಡು ಬಂತು.
· ಉತ್ಸವದ ಗೊಡವೆಯಿಲ್ಲದೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
· ಶ್ರೀಕೃಷ್ಣದೇವರಾಯನ ವಂಶಸ್ಥ ಆನೆಗೊಂದಿಯ ಶ್ರೀಕೃಷ್ಣದೇವರಾಯ ಅವರು ಮುಖ್ಯವೇದಿಕೆಗೆ ಬರಲು ಪೊಲೀಸರು ತಡೆಯೊಡ್ಡಿದರು. ಗೊತ್ತಾಗುತ್ತಿದ್ದಂತೆಯೇ ಕಳಿಸಿದರು.

Follow Us:
Download App:
  • android
  • ios