ಮೈಸೂರು (ನ.25):  ನನ್ನ ಅವಧಿಯಲ್ಲಿ ಅನುಮತಿ ಪಡೆದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿಕೊಂಡು ಓಡಾಡುತ್ತಿರುವ ಶಾಸಕ ಎಸ್‌.ಎ. ರಾಮದಾಸ್‌ಗೆ ನಾಚಿಕೆ ಇಲ್ಲ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಟೀಕಿಸಿದರು.

ಶಾಸಕರಾಗಿ ಎರಡೂವರೆ ವರ್ಷವಾದರೂ ಯಾವುದೇ ಹೊಸ ಯೋಜನೆ ಅಥವಾ ಅನುದಾನ ತಂದಿಲ್ಲ. ಆದರೂ ಸುಳ್ಳು ಹೇಳಿಕೊಂಡು ಬಡವರ ಕಣ್ಣಿಗೆ ಮಣ್ಣೆರಚಿ ಮೋಸ ಮಾಡುತ್ತಿದ್ದಾರೆ. ಆಶ್ರಯ ಮನೆ ನೀಡುವುದಾಗಿ ಹೇಳುತ್ತಿರುವುದೂ ಕೂಡ ದೊಡ್ಡ ಸುಳ್ಳು. ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆ ನಿರ್ಮಿಸಲು ಎಂಡಿಎ ಸದಸ್ಯರ ಮನವೊಲಿಸಿ ಮಳಲವಾಡಿ 3.5 ಎಕರೆ ಜಮೀನು, ವಿಶ್ವೇಶ್ವರನಗರದ 1.5 ಎಕರೆ ಜಮೀನು ಪಡೆದು ಮಳಲವಾಡಿಯಲ್ಲಿ 1,344 ಮನೆಗೆ ಟೆಂಡರ್‌ ಪೂರ್ಣಗೊಂಡಿತ್ತು,ಈಗ ಮನೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಇಂತಹ ಕುತಂತ್ರ ಕೆಲಸ ಬಿಟ್ಟು ನಿಜವಾದ ಬಡವರಿಗೆ ಹೊಸದಾಗಿ ಮನೆ ನೀಡಲಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.

ಕೆ.ಆರ್‌. ಕ್ಷೇತ್ರದಲ್ಲಿ ಆಶ್ರಯ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಯಾವುದೇ ಅನುಮತಿ ನೀಡದಿದ್ದರೂ, 2022 ರವರೆಗೆ ಕ್ಷೇತ್ರದ ಎಲ್ಲಾ ಬಡವರಿಗೆ ಮನೆ ನೀಡುತ್ತೇನೆ ಎಂದು ಸುಳ್ಳು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಗೃಹಪ್ರವೇಶಕ್ಕೆ ಮರೆಯದೆ ಕರೆಯಿರಿ ನನ್ನನ್ನು ಎಂದು ಹೇಳುವ ಮೋಸಗಾರ ರಾಮದಾಸ್‌ರ ಘನತೆ ಏನೆಂದು ಜನತೆಗೆ ಗೊತ್ತಿದೆ. ಮೊದಲು ಹೊಸ ಮನೆಗಳಿಗೆ ಅನುಮತಿ ತಂದು ಜನತೆಗೆ ಉತ್ತರ ನೀಡಲಿ. ಈಗ ರಾಮದಾಸ್‌ ಸುಳ್ಳನ್ನು ಜನರಿಗೆ ತಿಳಿಸಲು ದೊಡ್ಡ ಹೋರಾಟ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿಯತ್ತ ಕುಮಾರಸ್ವಾಮಿ ಒಲವು : ಅವಕಾಶವಾದಿ ಎಂದ್ರು ನಾಯಕ! ..

ನಗರಾಭಿವೃದ್ಧಿ ಪ್ರಾಧಿಕಾರದಿಂದ 13.05 ಎಕರೆ ಜಮೀನನ್ನು ಹಣ ಪಾವತಿಸಿ ಜಿಪ+2 ಮಾದರಿಯಲ್ಲಿ 1440 ಮನೆ ಹಾಗೂ ಗೊರೂರಿನಲ್ಲಿ 1,644 ಮನೆ ಕಟ್ಟಲು ಅನುಮತಿ ಪಡೆದು ಆಶ್ರಯ ಸಮಿತಿಯಿಂದ ಫಲಾನುಭವಿಗಳನ್ನು ಗುರುತಿಸಿ ಹಂಚಿಕೆಯಾಗಿ ಜಿಲ್ಲಾಧಿಕಾರಿ ಖಾತೆಗೆ . 18 ಕೋಟಿ ಬಿಡುಗಡೆಯಾಗಿದೆ. ಜಿ+11 ಮಾದರಿಯಲ್ಲಿ ಮನೆ ನಿರ್ಮಿಸಲು ರಾಮದಾಸ್‌ ಸರ್ಕಾರದ ಅನುಮತಿ ಕೋರಿದ್ದರು. ಆದರೆ ಸಚಿವ ಸೋಮಣ್ಣ ಈ ಪ್ರಸ್ತಾವನೆ ರದ್ದುಪಡಿಸಿದರು. ಅಂತೆಯೇ ಸಂಸದ ಪ್ರತಾಪ ಸಿಂಹ ಕೂಡ ಈ ಮನೆಗಳ ನಿರ್ಮಾಣ ವಿರೋಧಿಸಿ, ಈಗಾಗಲೇ ಅನುಮತಿ ದೊರೆತಿರುವ ಮನೆಗಳನ್ನು ಮಾತ್ರ ನಿರ್ಮಿಸುವಂತೆ ಸೂಚಿಸಿದ್ದಾಗಿ ಅವರು ತಿಳಿಸಿದರು.

ಕೆ.ಆರ್‌. ಕ್ಷೇತ್ರದಲ್ಲಿನ ವಸತಿ ರಹಿತರು ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸುವಂತೆ ತಿಳಿಸಿದ್ದಾರೆ. ಆದರೆ, ಅದು ಸರ್ಕಾರಿ ವೆಬ್‌ಸೈಟ್‌ ಆಗಿರದೆ, ತಮ್ಮ ಸ್ವಂತ ವೆಬ್‌ಸೈಟ್‌ ಆಗಿದೆ. ಈಗಾಗಲೇ ನಗರಪಾಲಿಕೆಯಲ್ಲಿ ಸರ್ಕಾರದ ವೆಬ್‌ಸೈಟ್‌ ಇದ್ದು, ಅದರಲ್ಲಿ ಮನೆ ಇಲ್ಲದ 6200 ಫಲಾನುಭವಿಗಳು ಅರ್ಜಿಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಗರ ಪಾಲಿಕೆ ಸದಸ್ಯರಾದ ಶೋಭಾ ಸುನಿಲ್‌, ಗೋಪಿ, ಮಾಜಿ ಸದಸ್ಯ ಸುನಿಲ್‌, ಕಾಂಗ್ರೆಸ್‌ ಮುಖಂಡ ಜಿ. ಸೋಮಶೇಖರ್‌ ಇದ್ದರು.