ಅರಸೀಕೆರೆ (ನ.25):  ಅವಕಾಶವಾದಿ ರಾಜಕಾರಣಕ್ಕೆ ಮತ್ತೊಂದು ಹೆಸರೇ ಜೆಡಿಎಸ್‌ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ತಾಲೂಕಿನ ಗಂಡಸಿ ಹೋಬಳಿ ಮಂಗಳಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿರಾ ಹಾಗೂ ಆರ್‌.ಆರ್‌.ನಗರ ಉಪಚುನಾವಣೆಯಲ್ಲಿ ಜೆಡಿಎಸ್‌ ಗಳಿಸಿರುವ ಮತ ಪ್ರಮಾಣವನ್ನು ಗಮನಿಸಿದರೆ ಎರಡು ಪಕ್ಷಗಳ ನಡುವೆ ಒಳ ಒಪ್ಪಂದ ನಡೆದಿದೆಯೇ? ಎಂಬ ಅನುಮಾನ ವ್ಯಕ್ತವಾಗುತ್ತದೆ ಎಂದರು. 

ಈ ಹಿಂದೆ ಬಿಜೆಪಿ ಜೊತೆ ಹೋಗಿದ್ದ ಎಚ್‌.ಡಿ.ಕುಮಾರಸ್ವಾಮಿಗೆ ಈಗಲೂ ಆ ಪಕ್ಷದ ಬಗ್ಗೆ ಒಲವಿದೆ. ಆದ್ದರಿಂದಲೇ ಅವರು ಆಡಳಿತ ಪಕ್ಷದ ಬಗ್ಗೆ ಮೃದು ನಿಲುವು ತಳೆದಿದ್ದಾರೆ. ಅಧಿಕಾರಕ್ಕಾಗಿ ಯಾರೊಂದಿಗೆ ಬೇಕಾದರೂ ಹೋಗಲು ಜೆಡಿಎಸ್‌ ಸಿದ್ಧರಿರುವುದರಿಂದಲೇ ಅವಕಾಶವಾದಿ ಪಕ್ಷ ಎಂಬುದು ಸಾಬೀತಾಗಿದೆ ಎಂದು ಆರೋಪಿಸಿದರು.

ರೋಷನ್‌ ಬೇಗ್‌ ನಮ್ಮ ಪಾರ್ಟಿಯಲ್ಲಿಲ್ಲ, ನಮಗೂ ಅವರಿಗೂ ಸಂಬಂಧವಿಲ್ಲ: ಸಿದ್ದು ...

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿಗೆ ನಾವು ನೋವು ನೀಡಿದ್ದೀವಿ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ನೋವುಂಡವರು ತಾಜ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಾರೆಯೇ? ಸರ್ಕಾರ ಪತನವಾಗುತ್ತದೆ ಎಂದು ಗೊತ್ತಿದ್ದು, ಅಮೆರಿಕಾ ಪ್ರವಾಸ ಕೈಗೊಂಡಿದ್ದು ಎಷ್ಟುಸರಿ?. ಅವರ ಲೋಪ ಮುಚ್ಚಿಕೊಳ್ಳಲು ನಮ್ಮ ವಿರುದ್ಧ ಬಾಲಿಶಾ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಉಪಚುನಾವಣೆಗಳು ಭವಿಷ್ಯದ ರಾಜಕಾರಣದ ದಿಗ್ಸೂಚಿಯಲ್ಲ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮುನಿರತ್ನ ಹಣ ಚುನಾವಣೆಯಲ್ಲೂ ಕೆಲಸ ಮಾಡಿದೆ. ಆದ್ದರಿಂದಲೇ ಫಲಿತಾಂಶ ವ್ಯತಿರಿಕ್ತವಾಗಿದೆ. ನಮ್ಮ ಸರ್ಕಾರವಿದ್ದಾಗಲೂ ಎಲ್ಲಾ ಉಪ ಚುನಾವಣೆಗಳನ್ನು ಗೆದ್ದಿರುವ ಉದಾಹರಣೆ ಜನರ ಮುಂದಿದೆ. ಮಸ್ಕಿ ಹಾಗೂ ಬಸವ ಕಲ್ಯಾಣ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಕಾರ್ಯತಂತ್ರ ರೂಪಿಸಲು ಮಾಜಿ ಸಚಿವ ಎಂ.ಬಿ.ಪಾಟೀಲ್‌ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದರು.