ಆಂದ್ರ ಮೂಲದ 19 ವರ್ಷದ ಎಂ ಐ ಟಿ ವಿದ್ಯಾರ್ಥಿಗೆ  ಮಣಿಪಾಲ - ಉಡುಪಿ ರಸ್ತೆಯಲ್ಲಿ  ಕಳೆದ ಅ.9ರಂದು ಅಪಘಾತ ಸಂಭವಿಸಿತ್ತು. ಅಪಘಾತದ ಪರಿಣಾಮದಿಂದ ತೀವ್ರತರವಾದ ಗಾಯವನ್ನು ಹೊಂದಿದ್ದರು. ಅವರು ಬದುಕುಳಿಯುವ ಯಾವ ಲಕ್ಷಣಗಳೂ ಇರಲಿಲ್ಲ. ಹೀಗಾಗಿ ಕುಟುಂಬ ಅವರ ಅಂಗಾಗವನ್ನು ದಾನ ಮಾಡಲು ನಿರ್ಧರಿಸಿದರು.

ಉಡುಪಿ (ಅ.13): 19 ವರ್ಷದ ಎಂ ಐ ಟಿ ವಿದ್ಯಾರ್ಥಿ ಶ್ರೀ ವೆಮುಲಾ ಸುದರ್ಶನ್ ಚೌಧರಿ (ಆಂಧ್ರಪ್ರದೇಶ)  ಇವರಿಗೆ ಮಣಿಪಾಲ - ಉಡುಪಿ ರಸ್ತೆಯಲ್ಲಿ 9. 10. 2022ರಂದು ರಾತ್ರಿ ಗಂಟೆ 8.40 ಸುಮಾರಿಗೆ  ರಸ್ತೆ ಅಪಘಾತ ಸಂಭವಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ  ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ  ದಾಖಲಾಗಿ  ಚಿಕಿತ್ಸೆ ಪಡೆಯುತ್ತಿದ್ದರು. ಗುರುಜಾಲ ಮಂಡಾಲ್, ಆಂಧ್ರಪ್ರದೇಶ ಇಲ್ಲಿನ ಶ್ರೀ ವೆಮುಲ ಅಲೇಖಾ ಪ್ರಸಾದ್   ಎಂಬವರ ಮಗನಾದ ಶ್ರೀ ವೆಮುಲಾ ಸುದರ್ಶನ್ ಚೌಧರಿ  ಅವರು ಅಪಘಾತದ ಪರಿಣಾಮದಿಂದ ತೀವ್ರತರವಾದ ಗಾಯವನ್ನು ಹೊಂದಿದ್ದರು. ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರು ವೆಮುಲಾ ಸುದರ್ಶನ್ ಚೌಧರಿ  ಅವರನ್ನು  ರಕ್ಷಿಸಲು ಪ್ರಯತ್ನಿಸಿದರೂ,  ಅವರು  ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ .  ವೆಮುಲಾ ಸುದರ್ಶನ್ ಚೌಧರಿ ಅವರ ತಂದೆ  ಮತ್ತು ಅವರ ಕುಟುಂಬ ಸದಸ್ಯರು ಇತರ  ರೋಗಿಗಳ ಜೀವ ಉಳಿಸಲು   ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು.  ತರುವಾಯ ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಅನುಸಾರ ವೆಮುಲಾ ಸುದರ್ಶನ್ ಚೌಧರಿ  ಅವರನ್ನು 6 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು  ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ  ಎಂದು ಘೋಷಿಸಿದರು. 

ಮೊದಲನೆಯದು 11.10. 2022 ರಂದು ಸಂಜೆ  4. 10ಕ್ಕೆ ಮತ್ತು ಎರಡನೆಯದು 11.10.2022 ರಂದು ರಾತ್ರಿ  11.42ಕ್ಕೆ ಪರೀಕ್ಷೆ ನಡೆಸಲಾಗಿತ್ತು. ಜೀವನ ಸಾರ್ಥಕತೆ  ಪ್ರೋಟೋಕಾಲ್ ಗಳು  ಮತ್ತು ನಿರ್ಧಾರಗಳ ಪ್ರಕಾರ, ನೋಂದಾಯಿತ ರೋಗಿಗಳಿಗೆ,  ಯಕೃತ್ತು ಕೆ ಎಂ ಸಿ ಆಸ್ಪತ್ರೆ ಅಂಬೇಡ್ಕರ್ ಸರ್ಕಲ್ ಮಂಗಳೂರಿಗೆ, ಶ್ವಾಸಕೋಶ ಆಸ್ಟರ್ ಆಸ್ಪತ್ರೆ ಬೆಂಗಳೂರಿಗೆ , ಒಂದು ಮೂತ್ರಪಿಂಡ ಎ ಜೆ  ಆಸ್ಪತ್ರೆ ಮಂಗಳೂರಿಗೆ  ಕಳುಹಿಸಿಕೊಡಲಾಯಿತು. ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳು, ಒಂದು ಮೂತ್ರಪಿಂಡ ಮತ್ತು ಚರ್ಮ ವನ್ನು ಕಸ್ತೂರ್ಬಾ  ಆಸ್ಪತ್ರೆ ಮಣಿಪಾಲದಲ್ಲಿ ರೋಗಿಗಳಿಗೆ ಬಳಸಲಾಯಿತು.

Belagavi; ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅಥಣಿ ಯುವಕ

ವೆಮುಲ ಅಲೇಖಾ ಪ್ರಸಾದ್   ಮತ್ತು ಕುಟುಂಬ ಸದಸ್ಯರು   "ಅಂಗದಾನ ಒಂದು ಪುಣ್ಯದ ಕೆಲಸ. ಸುದರ್ಶನ್   ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ  " ಎಂದು ತಿಳಿಸಿದ್ದಾರೆ.  ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ "ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಟವಾದ ಕೆಲಸವಾಗಿದ್ದು, ಅತ್ಯಂತ ಮಹತ್ವವನ್ನು ಪಡೆದಿದೆ. ಎಂದು ತಿಳಿಸಿ ಅಂಗ ದಾನ ಮಾಡಲು  ನಿರ್ಧರಿಸಿದ ವೆಮುಲಾ ಸುದರ್ಶನ್ ಚೌಧರಿ   ಕುಟುಂಬಕ್ಕೆ ಕ್ರತಜ್ಞತೆ  ಸಲ್ಲಿಸಿದರು.  "ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಲ್ಲಿ ದಿನದಿಂದ ದಿನಕ್ಕೆ ಜಾಗೃತಿ ಹೆಚ್ಚಾಗುತ್ತಿರುವುದು ಒಳ್ಳೆಯ ಸಂಗತಿ." ಎಂದು ಅಭಿಪ್ರಾಯಪಟ್ಟರು. 

ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ, 8 ಜನರ ಜೀವ ಉಳಿಸಿದ ಮಹಾತಾಯಿ

ದಾನ  ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಮತ್ತು ಬೆಂಗಳೂರಿಗೆ  ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗೆ ವರ್ಗಾಯಿಸಲಾಯಿತು.