ಕನ್ನಿಂಗ್‌ಹ್ಯಾಮ್ ರಸ್ತೆಯಿಂದ ಮಾಯವಾಗಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ ತಂಗುದಾಣ ಕೊನೆಗೂ ಸಿಕ್ಕಿದೆ.

ಬೆಂಗಳೂರು (ಅ.11): ಕನ್ನಿಂಗ್‌ಹ್ಯಾಮ್ ರಸ್ತೆಯಿಂದ ಮಾಯವಾಗಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ ತಂಗುದಾಣ ಕೊನೆಗೂ ಸಿಕ್ಕಿದೆ. ವಾಸ್ತವವಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳೇ ಅದನ್ನು ತೆಗೆದು ಹಾಕಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಮೂಲಕ ಬೆಂಗಳೂರು ಪೊಲೀಸರು ದಾಖಲಿಸಿಕೊಂಡಿದ್ದ ಕಳ್ಳತನ ಪ್ರಕರಣ ಸುಖಾಂತ್ಯವಾಗಿದೆ. 

ಸೆಪ್ಟೆಂಬರ್ 30 ರಂದು ಬಿಎಂಟಿಸಿ ಬಸ್‌ ತಂಗುದಾಣಗಳನ್ನು ನಿರ್ಮಿಸುವ ಕಂಪನಿಯಾದ ಸೈನ್ಫೋಸ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಹಾಯಕ ಉಪಾಧ್ಯಕ್ಷ ಎನ್ ರವಿ ರೆಡ್ಡಿ ಅವರು ಆಗಸ್ಟ್ 21 ರಂದು ನಿರ್ಮಿಸಲಾದ ಸ್ಟೀಲ್ ಬಸ್‌ ತಂಗುದಾಣ ಕಳೆದು ಹೋಗಿದೆ. ಆಗಸ್ಟ್‌ 28ರಂದು ಬಂದು ನೋಡಿದಾಗ ಬಸ್‌ ತಂಗುದಾಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ, ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕಂಪನಿಯ ಸಹ ಉಪಾಧ್ಯಕ್ಷ ಎನ್‌.ರವಿ ರೆಡ್ಡಿ ಅವರು ಬಸ್‌ ತಂಗುದಾಣ ಕಳ್ಳತನವಾಗಿರುವ ಬಗ್ಗೆ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಿ ಇಬ್ಬರು ಮಹಿಳಾ ಡೀಸಿಗಳ ಮಾದರಿ ನಡೆ

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಶಿವಾಜಿನಗರ ವಲಯದ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ ಅವರನ್ನು ವಿಚಾರಣೆ ನಡೆಸಿದರು. ಈ ವೇಳೆ ತಿಳಿದು ಬಂದುದು ಏನೆಂದರೆ, ಅಧಿಕಾರಿಗಳು ಆಗಸ್ಟ್ 22 ರಂದು ಪರಿಶೀಲನೆ ನಡೆಸುತ್ತಿದ್ದಾಗ ಶೆಲ್ಟರ್ ಅನ್ನು ಸರಿಯಾಗಿ ನಿರ್ಮಿಸದೆ, ಕಳಪೆ ಕಾಮಗಾರಿ ನಡೆಸಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಸಾರ್ವಜನಿಕರಿಗೆ ಅಪಾಯ ಆಗುವ ಸಾಧ್ಯತೆ ಜಾಸ್ತಿ ಇತ್ತು. ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದಾಖಲೆಗಳನ್ನು ಸಲ್ಲಿಸಲು ಸೈನ್ಫೋಸ್‌ ಕಂಪೆನಿ ವಿಫಲವಾದಾಗ ಆಗಸ್ಟ್ 25 ರಂದು ಶೆಲ್ಟರ್ ಅನ್ನು ತೆಗೆದುಹಾಕಲಾಯಿತು. ಸಂಬಂಧಿಸಿದ ವಸ್ತುಗಳನ್ನು ಬಿಬಿಎಂಪಿ ಗೋಡೌನ್‌ನಲ್ಲಿ ಇರಿಸಲಾಯಿತು.

Bengaluru: ಕಿಲ್ಲರ್‌ ಬಿಎಂಟಿಸಿ ಬಸ್‌ಗೆ ಮೂರು ವರ್ಷದ ಮಗು ಬಲಿ

ಘಟನಾ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಬಿಬಿಎಂಪಿ ಅಧಿಕಾರಿಗಳು ಬಸ್ ತಂಗುದಾಣವನ್ನು ತೆಗೆದಿರುವುದು ಸ್ಪಷ್ಟವಾಯ್ತು ಎಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಪ್ರಕರಣ ಈಗ ಸುಖಾಂತ್ಯ ಕಂಡಿದೆ.

ನಗರ ಪೊಲೀಸ್‌ ಆಯುಕ್ತರ ಕಚೇರಿ ಹಿಂಭಾಗದಲ್ಲಿ ಇರುವ ಕನ್ನಿಂಗ್‌ ಹ್ಯಾಮ್‌ ರಸ್ತೆಯ ಕಾಫಿ ಡೇ ಎದುರು 10 ಲಕ್ಷ ರು. ವೆಚ್ಚದಲ್ಲಿ ಬಿಬಿಎಂಪಿಯಿಂದ ಸ್ಟೇನ್‌ ಲೆಸ್‌ ಸ್ಟೀಲ್‌ನಲ್ಲಿ ಬಸ್‌ ತಂಗುದಾಣ ನಿರ್ಮಿಸಲಾಗಿತ್ತು. ಪೊಲೀಸ್‌ ಆಯುಕ್ತರ ಕಚೇರಿ ಸಮೀಪದ ಬಸ್‌ ದಾಣ ಕಾಣೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು.