Asianet Suvarna News Asianet Suvarna News

ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಿ ಇಬ್ಬರು ಮಹಿಳಾ ಡೀಸಿಗಳ ಮಾದರಿ ನಡೆ

ಉತ್ತರ ಕನ್ನಡ ಮತ್ತು ಬಾಗಲಕೋಟೆಯ ಮಹಿಳಾ ಜಿಲ್ಲಾಧಿಕಾರಿಗಳು ಜನತಾದರ್ಶನ ಕಾರ್ಯಕ್ರಮಕ್ಕೆ ತಮ್ಮ ಅಧಿಕೃತ ಸರ್ಕಾರಿ ವಾಹನ ಬಿಟ್ಟು ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್‌ನಲ್ಲೇ ತೆರಳುವ ಮೂಲಕ ಸರಳತೆ ಮೆರೆದಿದ್ದಾರೆ.

Two Women DC's Who Traveled in Government Buses in Karnataka grg
Author
First Published Oct 11, 2023, 5:24 AM IST

ಶಿರಸಿ/ಬಾಗಲಕೋಟೆ(ಅ.11): ಉತ್ತರ ಕನ್ನಡ ಮತ್ತು ಬಾಗಲಕೋಟೆಯ ಮಹಿಳಾ ಜಿಲ್ಲಾಧಿಕಾರಿಗಳು ಜನತಾದರ್ಶನ ಕಾರ್ಯಕ್ರಮಕ್ಕೆ ತಮ್ಮ ಅಧಿಕೃತ ಸರ್ಕಾರಿ ವಾಹನ ಬಿಟ್ಟು ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್‌ನಲ್ಲೇ ತೆರಳುವ ಮೂಲಕ ಸರಳತೆ ಮೆರೆದಿದ್ದಾರೆ. ಈ ಮೂಲಕ ಪ್ರತ್ಯೇಕ ವಾಹನಗಳಲ್ಲಿ ತೆರಳ‍ುವುದರಿಂದ ಆಗಬಹುದಾಗಿದ್ದ ಅನಗತ್ಯ ವೆಚ್ಚವನ್ನೂ ಉಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ತಾಲೂಕಿನ ಬನವಾಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಹಾಗೂ ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೆ.ಎಂ ಜಾನಕಿ ಅವರು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇವರಿಗೆ ಇತರೆ ಅಧಿಕಾರಿಗಳೂ ಸಾಥ್‌ ನೀಡಿದ್ದಾರೆ.

ಕಾರವಾರ: ಕಳಪೆ ಕಾಮಗಾರಿಯಿಂದ ಬಂದ್‌ ಆಗಿದ್ದ ಸುರಂಗ ಮಾರ್ಗ ಪರಿಶೀಲನೆ

140 ಕಿ.ಮೀ. ಪ್ರಯಾಣ:

ಜಿಲ್ಲಾ ಕೇಂದ್ರ ಕಾರವಾರದಿಂದ ಸುಮಾರು 140 ಕಿ.ಮೀ. ದೂರದ ಬನವಾಸಿಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಜನತಾ ದರ್ಶನ ಆಯೋಜಿಸಲಾಗಿತ್ತು. ಅಲ್ಲಿಗೆ ಹದಗೆಟ್ಟ ರಸ್ತೆಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಸಾಮಾನ್ಯ (ವೇಗದೂತ) ಬಸ್‌ನಲ್ಲಿಯೇ ಜಿಲ್ಲಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು, ಸಿಬ್ಬಂದಿ ಪ್ರಯಾಣಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಪುರುಷ ಅಧಿಕಾರಿಗಳು ಬಸ್ ಟಿಕೆಟ್ ದರ ಪಾವತಿಸಿದರೆ, ಇತರೆ ಮಹಿಳಾ ಅಧಿಕಾರಿಗಳು, ಸಿಬ್ಬಂದಿ ‘ಶಕ್ತಿ’ ಯೋಜನೆಯ ಸೌಲಭ್ಯ ಪಡೆದುಕೊಂಡರು.

ಶಿರಸಿ- ಕುಮಟಾ ನಡುವೆ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ರಸ್ತೆ ಬಹುತೇಕ ಹಾಳಾಗಿದೆ. ಜನರು ಹಿಡಿಶಾಪ ಹಾಕುತ್ತಲೇ ಪ್ರಯಾಣಿಸುತ್ತಾರೆ. ಅಂಥ ರಸ್ತೆಯಲ್ಲಿ ಸಾರಿಗೆ ಬಸ್‌ನಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳು ರಸ್ತೆಯ ಪರಿಸ್ಥಿತಿಯ ಅನುಭವವನ್ನೂ ಪಡೆದರು.

ಎಡಿಸಿ ಪ್ರಕಾಶ್‌ ರಜಪೂತ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅಜ್ಜಪ್ಪ ಸೊಗಲದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್‌ ಸೇರಿ 20ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು, ಸಿಬ್ಬಂದಿ ಕೂಡ ಜಿಲ್ಲಾಧಿಕಾರಿಗಳಿಗೆ ಸಾಥ್‌ ನೀಡಿದರು.

‘ಶಕ್ತಿ’ ಯೋಜನೆ ಬಳಸಿದ ಡಿಸಿ:

ಜಿಲ್ಲಾ ಕೇಂದ್ರದಿಂದ ಸುಮಾರು ನೂರು ಕಿ.ಮೀ. ದೂರದಲ್ಲಿರುವ ತೇರದಾಳದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹಾಗೂ 25ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ಸರ್ಕಾರಿ ಬಸ್‌ನಲ್ಲೇ ಪ್ರಯಾಣಿಸಿದರು. ಈ ವೇಳೆ ಜಿಲ್ಲಾಧಿಕಾರಿ ಮತ್ತು ಇತರೆ ಮಹಿಳಾ ಅಧಿಕಾರಿಗಳು, ಸಿಬ್ಬಂದಿ ಶಕ್ತಿ ಯೋಜನೆಯಡಿ ಶೂನ್ಯ ಬೆಲೆಯ ಟಿಕೆಟ್ ಪಡೆದು ಪ್ರಯಾಣಿಸಿದ್ದು ವಿಶೇಷವಾಗಿತ್ತು.

ಉತ್ತರಕನ್ನಡ: ಇದ್ದೂ ಇಲ್ಲದಂತಾದ ಅಧಿಕಾರಿಗಳು, ರಸ್ತೆ ಗುಂಡಿ ಮುಚ್ಚುವ ವೃದ್ಧ..!

ಬಸ್‌ನಲ್ಲಿ ಸಂಚರಿಸಿದರೆ ಪ್ರತಿದಿನ ಬಸ್‌ ಹಿಡಿದು ಕಚೇರಿಗಳಿಗೆ ಆಗಮಿಸಿ ಪರಿಹಾರ ಕೋರುವ ನಾಗರಿಕರ ಕಷ್ಟ ಅಧಿಕಾರಿಗಳಿಗೆ ಅರ್ಥವಾಗಲಿದೆ. ಅಲ್ಲದೆ ಎಲ್ಲ ಅಧಿಕಾರಿಗಳು ಒಂದೇ ವಾಹನದಲ್ಲಿ ಪ್ರಯಾಣಿಸುವುದರಿಂದ ಪರಸ್ಪರ ವಿವಿಧ ಇಲಾಖಾ ಸಮಸ್ಯೆಗಳನ್ನು ಸಮನ್ವಯದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಲಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದ್ದಾರೆ. 

ಅನವಶ್ಯಕ ಖರ್ಚುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಪರಿಸರ ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ನಾವೆಲ್ಲ ಸರ್ಕಾರಿ ವಾಹನ ಬಿಟ್ಟು ಬಸ್‌ನಲ್ಲಿ ಸಂಚರಿಸಿದ್ದೇವೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ತಿಳಿಸಿದ್ದಾರೆ.  

Follow Us:
Download App:
  • android
  • ios