ಬೈಂದೂರು(ಸೆ.23): ಉಡುಪಿ ಜಿಲ್ಲೆಯ ಶಿರೂರು ಸಮೀಪದ ಪಡಿಯಾರಹಿತ್ಲು ಸಮುದ್ರತೀರದಲ್ಲಿ ಮಂಗಳವಾರ 10 ಅಡಿ ಉದ್ದದ ಕ್ಷಿಪಣಿಯಾಕಾರದ ವಸ್ತುವೊಂದು ತೇಲಿ ಬಂದು ದಂಡೆಯ ಮೇಲೆ ಬಿದ್ದಿದೆ. ಆದರೆ ಅದೇನೆಂದು ಇನ್ನೂ ಪತ್ತೆಯಾಗಿಲ್ಲ, ಈ ಬಗ್ಗೆ ಪೊಲೀಸರು ನೌಕಾಪಡೆಯ ತಜ್ಞರ ಅಭಿಪ್ರಾಯವನ್ನು ಕೇಳಿದ್ದಾರೆ. 

ಮಂಗಳವಾರ ಮುಂಜಾನೆ ಈ ಕಬ್ಬಿಣದ ಸಿಲಿಂಡರ್‌ನಂತಿರುವ ಈ ವಸ್ತುವನ್ನು ಗಮನಿಸಿದ ಸ್ಥಳೀಯರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರೇನ್‌ ಮೂಲಕ ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗಲು ಪ್ರಯತ್ನ ನಡೆಸಿದರು. ಆದರೆ ಅದು ಸಾಕಷ್ಟು ಉದ್ದ ಮತ್ತು ಭಾರವಿದ್ದುದರಿಂದ ಸಾಧ್ಯವಾಗಲಿಲ್ಲ. 

ಉಡುಪಿಯಲ್ಲಿ ಪ್ರವಾಹ: ಜೀವದ ಹಂಗು ತೊರೆದು 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ಸಹೋದರರು

ಹಡಗುಗಳಲ್ಲಿ ದಿಕ್ಸೂಚಿಯಂತೆ ಬಳಸುವ ಸಾಧನ ಇದಾಗಿರುವ ಸಾಧ್ಯತೆ ಇದೆ ಎಂದು ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್‌ ಆರ್‌.ತಿಳಿಸಿದ್ದಾರೆ. ಈ ಬಗ್ಗೆ ಗೋವಾದ ನೌಕಾ ನೆಲೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.