Asianet Suvarna News Asianet Suvarna News

Chamarajanagar: ಗೋ ಶಾಲೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಚಾಲನೆ

ಜಾನುವಾರುಗಳ ಸಂರಕ್ಷಣೆಗಾಗಿ ಗುಂಡ್ಲುಪೇಟೆ ತಾಲೂಕಿನ ಬರಗಿಯಲ್ಲಿ ನಿರ್ಮಾಣ ಮಾಡಲಾಗುವ ಗೋ ಶಾಲೆಗೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಚಾಲನೆ ನೀಡಿದರು. 

Minister V Somanna Launched Goshala in Chamarajanagar District gvd
Author
Bangalore, First Published Apr 30, 2022, 7:32 PM IST

ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
 
ಚಾಮರಾಜನಗರ (ಏ.30): ಜಾನುವಾರುಗಳ ಸಂರಕ್ಷಣೆಗಾಗಿ ಗುಂಡ್ಲುಪೇಟೆ ತಾಲೂಕಿನ ಬರಗಿಯಲ್ಲಿ ನಿರ್ಮಾಣ ಮಾಡಲಾಗುವ ಗೋ ಶಾಲೆಗೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ (V Somanna) ಅವರು ಚಾಲನೆ ನೀಡಿದರು. ಚಾಮರಾಜನಗರದ (Chamarajanagar) ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಂದು ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಗೋ ಶಾಲೆ ನಿರ್ಮಾಣಕ್ಕೆ ಚಾಲನೆ  ಸಚಿವರು ಚಾಲನೆ ನೀಡಿದರು. 

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಸರ್ಕಾರವು ಗೋ ಹತ್ಯೆ ನಿಷೇಧ ಕಾಯ್ದೆ (Cow Slaughter Act) 2020ಕ್ಕೆ ಪೂರಕವಾಗಿ ವಯಸ್ಸಾದ, ಅನುಪಯುಕ್ತ ಜಾನುವಾರುಗಳು ಮತ್ತು ಆಕಸ್ಮಿಕವಾಗಿ ಅಪಘಾತಕ್ಕೆ ಒಳಗಾದ ಜಾನುವಾರುಗಳನ್ನು ಸಂರಕ್ಷಿಸಲು ಜಿಲ್ಲೆಗೊಂದು ಸರ್ಕಾರಿ ಗೋ ಶಾಲೆ ಯೋಜನೆಯನ್ನು ರೂಪಿಸಿದೆ ಎಂದರು. ಜಿಲ್ಲೆಯಲ್ಲಿ 2,60,000  ಜಾನುವಾರುಗಳಿದ್ದು ಶೇ. 0.75ರಷ್ಟು ಅಂದರೆ ಅಂದಾಜು 1950 ಜಾನುವಾರುಗಳಿಗೆ ಒಂದು ಸರ್ಕಾರಿ ಗೋ ಶಾಲೆ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. 

Chamarajanagar: ಡೋಂಗಿ ಬಾಬಾನ ಮೋಹದ ಬಲೆಗೆ ಬಿದ್ದ ವಿವಾಹಿತೆ ಮಹಿಳೆ

ಪ್ರಾಥಮಿಕವಾಗಿ ಸುಮಾರು 250 ರಾಸುಗಳಿಗೆ ಗೋ ಶಾಲೆಯನ್ನು ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಗೆ 52 ಲಕ್ಷ ರೂ ಬಿಡುಗಡೆ ಗೊಳಿಸಲಾಗಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು. ಮೊದಲ ಹಂತದಲ್ಲಿ ಗೋ ಶೆಡ್ ನಿರ್ಮಾಣ, ಕೊಳವೆ ಬಾವಿ, ದಾಸ್ತಾನು ಕೊಠಡಿ, ಔಷಧಿ ಸಂಗ್ರಹಣಾ ಕೊಠಡಿ, ಕಚೇರಿ ನಿರ್ಮಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಯೋಜನೆಯನ್ನು ಪೂರ್ಣಗೊಳಿಸಲು 3 ತಿಂಗಳ ಕಾಲಾವಕಾಶ ನಿಗದಿ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವರು ವಿವರಿಸಿದರು. 

ಜಿಲ್ಲೆಯಲ್ಲಿ ಚಾಮರಾಜನಗರ ತಾಲೂಕಿನ ಕನಕಗಿರಿಯ ಜೈನ್ ಎಜುಕೇಷನ್ ಸೊಸೈಟಿ, ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಶ್ರೀ ಮಲೆ ಮಹದೇಶ್ವರಸ್ವಾಮಿ ಕೃಪಾ ಎಜುಕೇಷನ್ ಸೊಸೈಟಿಯ ಖಾಸಗಿ ಗೋ ಶಾಲೆಗಳಿಗೆ ಒಂದು ದಿನಕ್ಕೆ ಒಂದು ರಾಸುವಿಗೆ 17 ರೂಪಾಯಿನಂತೆ ನಿರ್ವಹಣಾ ವೆಚ್ಚವನ್ನು ಪಶುಸಂಗೋಪನಾ ಇಲಾಖೆಯಿಂದ ಸಹಾಯ ಧನ ನೀಡಲಾಗುತ್ತಿದೆ. 2021-22ನೇ ಸಾಲಿಗೆ 4.28 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು. 

ಯುವತಿ ಸಾವಿನ ಸುತ್ತ ಅನುಮಾನದ ಹುತ್ತ, ಆತ್ಮಹತ್ಯೆಯೋ? ಮರ್ಯಾದಾ ಹತ್ಯೆಯೋ?

ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್ ಅವರು ಮಾತನಾಡಿ ಜಿಲ್ಲೆಗೊಂದು ಗೋ ಶಾಲೆ ಎಂಬ ಯೋಜನೆಯಡಿ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮಕ್ಕೆ ಗೋ ಶಾಲೆ ಮಂಜೂರಾಗಿದ್ದು ಇದರ ನಿರ್ಮಾಣ ಕಾರ್ಯಕ್ಕೆ ಇಂದು ಚಾಲನೆ ಕೊಡಲಾಗಿದೆ. ಬರಗಿ ಫಾರಂ ನಲ್ಲಿ 100 ಎಕರೆ ಪ್ರದೇಶವಿದ್ದು ಇಲ್ಲಿ ರಾಸುಗಳ ನಿರ್ವಹಣೆಗಾಗಿ ಜಾರಿಗೆ ತಂದಿರುವ ಉತ್ತಮ ಯೋಜನೆ ಇದಾಗಿದೆ ಎಂದರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಡಾ. ಸುರೇಶ್, ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow Us:
Download App:
  • android
  • ios