ಮೈಸೂರು (ಫೆ.14):  ರಾಜ್ಯದಲ್ಲಿ ಮತ್ತೆ ಅಹಿಂದ ಹೋರಾಟ ಸದ್ಯಕ್ಕೆ ಅಪ್ರಸ್ತುತ. ಚುನಾವಣೆ ಕೂಡಾ ಇನ್ನೂ ತುಂಬಾ ದೂರ ಇದೆ. ಅಹಿಂದ ಕೂಗು ಎತ್ತುತ್ತಿರುವವರು ರಾಜಕೀಯವಾಗಿ ಮೂಲೆ ಗುಂಪಾಗಿದ್ದಾರೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರಿಗೆ ತಿರುಗೇಟು ನೀಡಿದರು.

ಮೈಸೂರಿನಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯಕ್ಕಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಹಿಂದ ಕೂಗು ಎತ್ತಿದ್ದಾರೆ. ಆ ಮೂಲಕವಾಗಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಗೇಮ್ ಪ್ಲಾನ್ ಚೇಂಜ್: ಎಲ್ಲಾ ಊಹಾಪೋಹಗಳಿಗೆ ತೆರೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ನನ್ನ ವಿಶ್ವಾಸ ಈಗಲೂ ಹಾಗೆ ಉಳಿದುಕೊಂಡಿದೆ. ಪರಸ್ಪರ ವ್ಯಯಕ್ತಿಕವಾಗಿ ವಿಶ್ವಾಸದಿಂದಿದ್ದೇವೆ ಹೊರತು ರಾಜಕೀಯವಾಗಲ್ಲ. ನಾನು 5 ವರ್ಷ ಅವರ ಜೊತೆ ಕೆಲಸ ಮಾಡಿದ್ದೇನೆ. ಈಗ ಬಿಜೆಪಿಯಲ್ಲಿ ಇದ್ದೇನೆ ಇಲ್ಲೂ ವಿಶ್ವಾಸದಿಂದ ಕೆಲಸ ಮಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ನನಗಂತೂ ಗೊತ್ತಿಲ್ಲ :  ವಿಧಾನ ಪರಿಷತ್‌ ಸದಸ್ಯ ದಿವಂಗತ ಧರ್ಮೇಗೌಡ ಸ್ಥಾನದಿಂದ ಎಚ್‌. ವಿಶ್ವನಾಥ್‌ ಆಯ್ಕೆಗೆ ಪ್ಲಾನ್‌ ವಿಚಾರವು ನನಗಂತೂ ಗೊತ್ತಿಲ್ಲ. ಈ ವಿಚಾರ ನನಗೆ ಆಶ್ಚರ್ಯ ತಂದಿದೆ. ಅದು ಚಿಕ್ಕಮಗಳೂರಿಗೆ ಸಂಬಂಧಿಸಿದ ವಿಚಾರ. ಅವರು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಬಂದಿದ್ದವರು. ಅದು ನಮ್ಮ ಲೆವೆಲ್‌ನಲ್ಲಿ ಇಲ್ಲ, ಪಕ್ಷ ತೀರ್ಮಾನ ಮಾಡುತ್ತೆ. ನನಗಂತೂ ಯಾವುದೇ ಮಾಹಿತಿ ಇಲ್ಲ ಎಂದರು.

ದರ ಏರಿಕೆಗೆ ಸಮರ್ಥನೆ :  ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯನ್ನು ಸಮರ್ಥಸಿಕೊಂಡ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು, ಕೊರೋನಾದಿಂದ ರಾಜ್ಯ ಸರ್ಕಾರಕ್ಕೆ ವರಮಾನ ಕಮ್ಮಿಯಾಗಿದೆ. ಹೀಗಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಿಸಲಾಗಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ಗಳ ದರ ಏರಿಳಿತ ಸರ್ವೇ ಸಾಮಾನ್ಯ. ಪೆಟ್ರೋಲ್‌ ದರ ಹೆಚ್ಚಳದಿಂದ ಅಗತ್ಯ ವಸ್ತುಗಳ ದರ ಏರಿಕೆ ಸಹಜ ಎಂದು ಹೇಳಿದರು.