ಕೃಷಿ ಉತ್ಪನ್ನಗಳ ಆಮದು ನಿಲ್ಲಿಸಲಿರುವುದು ರೈತರಿಗೆ ವರದಾನ: ಹೆಬ್ಬಾರ
ಕೇಂದ್ರ ಬಜೆಟ್‌ನಲ್ಲಿ ರೈತರ ಪ್ರಗತಿಗೆ ಅನೇಕ ಯೋಜನೆಗಳಿವೆ| ಪ್ರತಿಪಕ್ಷಗಳು ರೈತ ಕಾಯ್ದೆ ಕುರಿತಂತೆ ರೈತರಿಗೆ ತಪ್ಪು ಮಾಹಿತಿ ನೀಡುತ್ತಿವೆ| ರೈತರು ಪ್ರತಿಭಟನೆ ಕೈಬಿಟ್ಟು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಮುಂದಾದರೂ ಪ್ರತಿಪಕ್ಷಗಳು ಆಸ್ಪದ ನೀಡುತ್ತಿಲ್ಲ: ಶಿವರಾಮ ಹೆಬ್ಬಾರ|
ಶಿರಸಿ(ಫೆ.14): ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಭಾರತದ ಆರ್ಥಿಕತೆಯನ್ನು ಎತ್ತರಿಸಿ ವಿಶ್ವದ ಗಮನ ಸೆಳೆಯುವಂತಿದೆ. ರೈತರ ಪ್ರಗತಿಗೆ ಈ ಬಜೆಟ್‌ನಲ್ಲಿ ಅನೇಕ ಯೋಜನೆಗಳಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನಗಳ ಆಮದನ್ನು ನಿಲ್ಲಿಸಲಿರುವುದು ರೈತರಿಗೆ ವರದಾನವಾಗಲಿದೆ. ಆದರೆ, ಪ್ರತಿಪಕ್ಷಗಳು ರೈತ ಕಾಯ್ದೆ ಕುರಿತಂತೆ ರೈತರಿಗೆ ತಪ್ಪು ಮಾಹಿತಿ ನೀಡುತ್ತಿವೆ. ರೈತರು ಪ್ರತಿಭಟನೆ ಕೈಬಿಟ್ಟು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಮುಂದಾದರೂ ಪ್ರತಿಪಕ್ಷಗಳು ಆಸ್ಪದ ನೀಡುತ್ತಿಲ್ಲ ಎಂದು ಆಪಾದಿಸಿದರು. ಕೇಂದ್ರ ಬಜೆಟ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ವಿದ್ಯುತ್ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಪ್ರಗತಿಯ ದಾಪುಗಾಲಿಟ್ಟಿದೆ. ರಾಜ್ಯ ಬಜೆಟ್‌ನಲ್ಲಿ ಉತ್ತರ ಕನ್ನಡಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಈ ಕುರಿತಂತೆ ಮುಖ್ಯಮಂತ್ರಿಗಳಿಗೆ ಬಜೆಟ್ ಪೂರ್ವವಾಗಿ ಹಲವು ಬೇಡಿಕೆ ಸಲ್ಲಿಸಿದ್ದೇನೆ ಎಂದರು.
ಪ್ರಶ್ನೆಗೆ ಉತ್ತರಿಸಿದ ಹೆಬ್ಬಾರ, ಉತ್ತರ ಕನ್ನಡ ನಿಸರ್ಗದ ಕೊಡುಗೆ ಆಗಿದ್ದು ಇಲ್ಲಿಯ ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕು. ಹೀಗಾಗಿ, ವಿಮಾನ ನಿಲ್ದಾಣ, ರೈಲ್ವೆ ಮತ್ತು ರಸ್ತೆ ವ್ಯವಸ್ಥೆ ಉತ್ತಮಗೊಳ್ಳಬೇಕು. ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಕೇಂದ್ರ ಸರ್ಕಾರದ ಹೊಸ ಮಾನದಂಡದ ಪರಿಹಾರ ನೀಡಲಿದ್ದೇವೆ. ವಿಮಾನ ನಿಲ್ದಾಣ ಯಾವುದೇ ಕಾರಣಕ್ಕೂ ನಮ್ಮಜಿಲ್ಲೆಯ ಕೈ ತಪ್ಪಬಾರದು ಎಂಬ ಉದ್ದೇಶದಿಂದ ಈಗಾಗಲೇ 225 ಕೋಟಿ ರು. ಕ್ಯಾಬಿನೆಟ್‌ನಲ್ಲಿ ಅನುಮೋದನೆ ನೀಡಿದ್ದೇವೆ. ಕೇಂದ್ರ ಸಚಿವ ರಾಜನಾಥ ಸಿಂಗ್ ಅವರು ವಿಮಾನ ನಿಲ್ದಾಣದ ಶಿಲಾನ್ಯಾಸ ನಡೆಸಲಿದ್ದಾರೆ ಎಂದರು.
ಆತ್ಮಹತ್ಯೆಗೆ ಯತ್ನ: ತಾಯಿ ಪಾರು, 9 ತಿಂಗಳ ಹಸುಗೂಸು ನೀರುಪಾಲು
ಅಂಕೋಲಾ ಹುಬ್ಬಳ್ಳಿ ರೈಲ್ವೆ ಮಾರ್ಗ ನಿರ್ಮಾಣ ಆರಂಭ ಆಗಬೇಕಿತ್ತು. ಆದರೆ, ಪರಿಸರವಾದಿಗಳು ಅಡ್ಡಗಾಲು ಹಾಕುತ್ತಿದ್ದಾರೆ. 135 ಕೋಟಿ ರು.ನಲ್ಲಿ ಮುಗಿಯಬೇಕಿದ್ದ ಈ ಯೋಜನೆ ಪರಿಸರವಾದಿಗಳ ಅಡ್ಡಗಾಲಿನಿಂದ 1400ರು. ಗೆ ಏರಿದೆ. ಪರಿಸರ ಬೇಕು, ಅದರ ಜೊತೆಯಲ್ಲಿ ಜಿಲ್ಲೆಯ ಅಭಿವೃದ್ಧಿ, ಯುವಕರ ಕೈಗೆ ಉದ್ಯೋಗದ ಅಗತ್ಯತೆ ಇದೆ. ಪ್ರವಾಸೋದ್ಯಮ ಜಿಲ್ಲೆಯಾಗಿ ಪರಿವರ್ತಿಸಲು ಪರಿಸರವಾದಿಗಳು ಅವಕಾಶ ಮಾಡಬೇಕು ಎಂದರು.
ಉತ್ತರ ಕನ್ನಡ ಜಿಲ್ಲೆ ಇಬ್ಭಾಗ ಮಾಡುವ ಕುರಿತು ನಾನೊಬ್ಬನೇ ನಿರ್ಣಯಿಸಲಾಗುವುದಿಲ್ಲ. ಈ ನಡುವೆ ಯಲ್ಲಾಪುರ, ಹಳಿಯಾಳವನ್ನೂ ಕೇಂದ್ರವಾಗಿಸಬೇಕು ಎಂಬ ಬೇಡಿಕೆಗಳೂ ಬರುತ್ತವೆ. ಮೊದಲು ಜಿಲ್ಲೆ ಇಬ್ಬಾಗ ಆಗಬೇಕೆ ಬೇಡವೇ ಎಂಬ ಬಗ್ಗೆ ನಿರ್ಧರಿಸಬೇಕು. ಜಿಲ್ಲೆಯ ಎಲ್ಲ ಶಾಸಕರು, ಸಾರ್ವಜನಿಕರ ಜೊತೆ ಚರ್ಚಿಸಿ, ಸಾಧಕ ಬಾಧಕ ಚರ್ಚಿಸಿ ನಿರ್ಣಯಕ್ಕೆ ಬರಬೇಕಿದೆ ಎಂದರು.
ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರರ ಭೂಮಿಯ ಜಿಪಿಎಸ್ ಮಾಡಿದ್ದೇವೆ. ಡಿನೋಟಿಫೈ ಆದ ಭೂಮಿ ರೈತರಿಗೆ ನೀಡಬೇಕಾದುದು ಅರಣ್ಯ ಇಲಾಖೆಯ ಕಾರ್ಯ. ಜಿಪಿಎಸ್ ಆದ ಅತಿಕ್ರಮಣದಾರರಿಗೆ ತೊಂದರೆ ನೀಡುವುದನ್ನು ನಾವು ಸಹಿಸುವುದಿಲ್ಲ. ಅರಣ್ಯವನ್ನು ಜಿಲ್ಲೆಯ ಜನ ಸಾಂಪ್ರದಾಯಿಕವಾಗಿಯೇ ಕಾಯ್ದುಕೊಂಡು ಬಂದಿದ್ದಾರೆ. ಅರಣ್ಯ ಕಾನೂನು ಹೇರಿ ಜಿಪಿಎಸ್ ಆದ ಅತಿಕ್ರಮಣದಾರರಿಗೆ ತೊಂದರೆ ಮಾಡುವ ಅಧಿಕಾರಿಗಳು ನಮ್ಮ ಜಿಲ್ಲೆ ತೊರೆಯಲಿ ಎಂದರು. ಕಸ್ತೂರಿ ರಂಗನ್ ವರದಿಯಲ್ಲಿ ಕೇರಳ, ಗುಜರಾತ, ಗೋವಾಕ್ಕೆ ನೀಡಿದ ಸೌಲಭ್ಯವನ್ನೂ ರಾಜ್ಯಕ್ಕೆ ನೀಡಲಿ. ಕಸ್ತೂರಿ ರಂಗನ್ ವರದಿ ಒಪ್ಪಲು ಸಾಧ್ಯವಿಲ್ಲ ಎಂದು ಈಗಾಗಲೇ ಕೇಂದ್ರಕ್ಕೆ ಸ್ಪಷ್ಟಪಡಿಸಿದ್ದೇವೆ ಎಂದರು.
ಅಣಶಿಯಲ್ಲಿ ರಕ್ಷಿತ ಅರಣ್ಯ ಕಾರಣ ನೀಡಿ 32 ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಉಂಟಾಗಿತ್ತು. ಅದನ್ನು ಬಗೆಹರಿಸಲಾಗಿದೆ. ಅರಣ್ಯ ರಕ್ಷಣೆಯ ಬಗ್ಗೆ ನಾವು ಅಧಿಕಾರಿಗಳಿಂದ ಉಪದೇಶ ಕಲಿಯಬೇಕಾಗಿಲ್ಲ. ಜಿಲ್ಲೆಯಲ್ಲಿ ನಾವು ಅರಣ್ಯ ಇದುವರೆಗೆ ಉಳಿಸಿಕೊಂಡ ಕಾರಣ ಅಧಿಕಾರಿಗಳು ನಮಗೆ ಉಪದೇಶ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇಡ್ತಿ ಸೇತುವೆ ದೇಶಪಾಂಡೆ ಅಥವಾ ಹೆಬ್ಬಾರ ಮಂಜೂರು ಮಾಡಿಸಿದ್ದಾರೆ ಎನ್ನುವುದಕ್ಕಿಂತ ಅದು ಸರ್ಕಾರದ ಯೋಜನೆ. ಆದರೆ, ದೇಶಪಾಂಡೆ ಈ ಜಿಲ್ಲೆಯಲ್ಲಿ ಅನೇಕ ವರ್ಷಗಳ ಕಾಲ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಕಳೆದ ಇಪ್ಪತು ವರ್ಷಗಳ ಹಿಂದೆಯೇ ಮುಂಡಗೋಡ, ಬನವಾಸಿ ಭಾಗಕ್ಕೆ ನೀರಾವರಿ ಯೋಜನೆ ತಂದಿದ್ದರೆ ಇಂದು ಈ ಪ್ರದೇಶ ಬಂಗಾರ ಬೆಳೆಯುವಂತ ಭೂಮಿಯಾಗಿ ಪರಿವರ್ತನೆ ಆಗಿರುತ್ತಿತ್ತು. ಆರ್.ವಿ. ದೇಶಪಾಂಡೆ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ವಿಧಾನರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಸದಾನಂದ ಭಚ್, ಬಿಜೆಪಿ ಜಿಲ್ಕಾಧ್ಯಕ್ಷ ವೆಂಕಟೇಶ ನಾಯ್ಕ, ಕೆ.ಜಿ.ನಾಯ್ಕ, ಎನ್.ವಿ. ನಾಯ್ಕ, ಚಂದ್ರು ಎಸಳೆ, ಸುನೀಲ ಹೆಗಡೆ ಇತರರಿದ್ದರು.