ಆತ್ಮಹತ್ಯೆಗೆ ಯತ್ನ: ತಾಯಿ ಪಾರು, 9 ತಿಂಗಳ ಹಸುಗೂಸು ನೀರುಪಾಲು
ಜಲಾಶಯಕ್ಕೆ ಮಗುವಿನೊಂದಿಗೆ ಹಾರಿದ ತಾಯಿ| ಮಹಿಳೆಯನ್ನು ರಕ್ಷಿಸಿದ ಸ್ಥಳೀಯರು| 9 ತಿಂಗಳ ಮಗು ಸಾವು| ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅತ್ತಿವೇರಿ ಜಲಾಶಯದಲ್ಲಿ ನಡೆದ ಘಟನೆ| ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಮುಂಡಗೋಡ(ಫೆ.14): ತಾಯಿಯ ತಪ್ಪು ನಿರ್ಧಾರದಿಂದಾಗಿ 9 ತಿಂಗಳ ಮಗುವೊಂದು ನೀರು ಪಾಲಾದ ಘಟನೆ ತಾಲೂಕಿನ ಅತ್ತಿವೇರಿ ಜಲಾಶಯದಲ್ಲಿ ಶನಿವಾರ ನಡೆದಿದೆ.
ರಾಮು ಕಾಳು ಶಳಕೆ (9 ತಿಂಗಳು) ನೀರು ಪಾಲಾದ ಮಗು. ತಾಲೂಕಿನ ಅತ್ತಿವೇರಿ ಗೌಳಿ ದೊಡ್ಡಿಯ ಚಂದ್ರಕಲಾ ಕಾಳು ಶಳಕೆ ಎಂಬ ಮಹಿಳೆ ತನ್ನ 9 ತಿಂಗಳ ಮಗು ಸಮೇತ ಜಲಾಶಯಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ 9 ತಿಂಗಳ ಹಸು ಗೂಸು ಮಾತ್ರ ನೀರು ಪಾಲಾಗಿದೆ.
ಪತ್ನಿ ಸಾವಿನ ಸುದ್ದಿ ಕೇಳಿ ಪತಿ ಆತ್ಮಹತ್ಯೆ: ಸಾವಿನಲ್ಲೂ ಒಂದಾದ ದಂಪತಿ
ಸುದ್ದಿ ತಿಳಿದ ಮುಂಡಗೋಡ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ತೀವ್ರ ಶೋಧ ಕಾರ್ಯ ನಡೆಸುವ ಮೂಲಕ ಮಗುವಿನ ಶವವನ್ನು ಹೊರ ತೆಗೆದಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಗೆ ಮುಂಡಗೋಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಸಮಸ್ಯೆಯೇ ಈ ಘಟನೆಗೆ ಕಾರಣವೆನ್ನಲಾಗಿದೆ.