ಹುಬ್ಬಳ್ಳಿ-ಧಾರವಾಡ ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವರ ಭೇಟಿ
ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಕಿರೇಸೂರ ಹಾಗೂ ಇಂಗಳಹಳ್ಳಿ ,ಅಣ್ಣಿಗೇರಿ ಮತ್ತಿತರ ಪ್ರದೇಶಗಳಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ : ಪರಮೇಶ್ವರ ಅಂಗಡಿಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಸೆ.6) : ಇಂದು ಕಿರೇಸೂರ ಹಾಗೂಇಂಗಳಹಳ್ಳಿ ,ಅಣ್ಣಿಗೇರಿ ಮತ್ತಿತರ ಪ್ರದೇಶಗಳಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಪ್ರವಾಹಪೀಡಿತ ಸ್ಥಳಗಳಿಗೆ ಕೈಮಗ್ಗ, ಜವಳಿ ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಭೇಟಿ ನೀಡಿ, ಪರಿಶೀಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬಾರಿ ಪ್ರಮಾಣದ ಮಳೆಯಾದ ಕಾರಣ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿ, ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕುಗಳಲ್ಲಿ 153 ಮಿ.ಮೀ. ಮಳೆಯಾಗಿದೆ. ಮಳೆಯಿಂದ ಸಾವಿರಾರು ಮನೆಗಳು ಜಖಂ ಆಗಿವೆ. ಮಧ್ಯರಾತ್ರಿ 3 ಗಂಟೆಗೆ ಕಾರ್ಯಾಚರಣೆ ಕೈಗೊಂಡು ಬೆಣ್ಣೆ ಹಳ್ಳಕ್ಕೆ ಸಿಲುಕಿದ್ದ 6 ಜನರನ್ನು ರಕ್ಷಣೆ ಮಾಡಲಾಗಿದೆ. ಈಗಾಗಲೇ 34 ಜನರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಅದರಲ್ಲಿ 32 ಜನರನ್ನು ರಕ್ಷಣೆ ಮಾಡಲಾಗಿದೆ. ಒಬ್ಬ ಮೃತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಇನ್ನೊಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇಂದು ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಳ್ಳದ ಪಕ್ಕದಲ್ಲಿರುವ ಶಾಲೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಪ್ರಸ್ತಾವನೆಗಳು ಬಂದಿವೆ. ಈ ವರ್ಷದಲ್ಲಿ ಹೆಬಸೂರು ಶಾಲೆಗೆ 4 ಬಾರಿ ಮಳೆಯ ನೀರಿನಿಂದ ಜಲಾವೃತವಾಗಿರುತ್ತದೆ. ಇಲ್ಲಿಯ ಶಾಲೆಯನ್ನು ಕಾನೂನಾತ್ಮಕವಾಗಿ ಸ್ಥಳಾಂತರ ಮಾಡಲು ಯೋಜನೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಕಿರೇಸೂರ, ಇಂಗಳಹಳ್ಳಿ, ಅಣ್ಣಿಗೇರಿ, ಮಂಟೂರುಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಶಲವಡಿ, ಕನ್ನೂರು, ತಡಹಾಳ, ನಾಯಕನೂರು ಸೇರಿದಂತೆ ಅವಶ್ಯಕತೆವಿದ್ದಲ್ಲಿ ಸಹ ಕಾಳಜಿ ಕೇಂದ್ರಗಳನ್ನು ತೆಗೆಯಲಾಗುವುದು. ಕಿರೇಸೂರು ಕಾಳಜಿ ಕೇಂದ್ರದಲ್ಲಿ 30 ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ ಎಂದರು.
ರೈತರು ಮಳೆ ಕಡಿಮೆಯಾಗುವವರೆಗೂ ಯಾರೂ ಕೂಡ ಹೊಲಗಳಿಗೆ ತೆರಳಬಾರದು. ರಾತ್ರಿ ವೇಳೆಯಲ್ಲಿ ಹಳ್ಳ ದಾಟುವ ಸಾಹಸಕ್ಕೆ ಮುಂದಾಗಬಾರದು ಎಂದು ರೈತರಲ್ಲಿ ಮನವಿ ಮಾಡಿಕೊಳ್ಳುವೆ. ಬೆಳೆ ಹಾನಿ ಹಾಗೂ ಮನೆಹಾನಿಗೆ ಪರಿಹಾರವನ್ನು ನೀಡಲಾಗುತ್ತದೆ. ಪರಿಹಾರ ವಿತರಣೆಯಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗುವುದಿಲ್ಲ. ಅಲ್ಲದೇ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಜನರ ಜೀವ ಮುಖ್ಯ ಎಂದು ಹೇಳಿದರು.
ಜಿಪಿಎಸ್ ಮಾದರಿ ಅನುಸರಿಸಿ ಸರ್ವೇ ಕಾರ್ಯ ಆರಂಭಿಸಿ:
ಹವಾಮಾನ ಇಲಾಖೆಯಿಂದ ಎಷ್ಟು ಮಳೆಯಾಗಿದೆ ಎಂಬ ಹೊಸ ಅಂಕಿಅಂಶಗಳನ್ನು ಪಡೆದುಕೊಂಡು, ಜಿಪಿಎಸ್ ಮಾದರಿಯನ್ನು ಅನುಸರಿಸಿ, ಅಧಿಕಾರಿಗಳು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮನೆ ಹಾನಿಗೆ ಪರಿಹಾರವನ್ನು ವಿತರಿಸಲಾಗುವುದು. ಸಂತ್ರಸ್ಥರು ಭಯ ಪಡಬೇಕಾದ ಅವಶ್ಯಕತೆಯಿಲ್ಲ. ಸರ್ಕಾರ ಎಲ್ಲ ರೀತಿಯ ಪರಿಹಾರ ನೀಡಲು ಸಿದ್ಧವಿದೆ. ರೈತರು ಪ್ರಾಮಾಣಿಕವಾಗಿ ವರದಿ ಕೊಟ್ಟು, ಪರಿಹಾರವನ್ನು ಪಡೆದುಕೊಳ್ಳಬಹುದು ಎಂದರು.
ಇಂಗಳಹಳ್ಳಿ, ಮಂಟೂರು, ಅಮರಗೋಳ ಹಾಗೂ ನಾಗರಹಳ್ಳಿ ಶಾಲೆಗಳು ತಗ್ಗು ಪ್ರದೇಶದಲ್ಲಿವೆ. ಶಾಲೆಗಳಿಗೆ ಕೋಣೆಗಳನ್ನು ಕಟ್ಟಿಸಲು ಸರ್ಕಾರದಿಂದ ಅನುದಾನವನ್ನು ತಂದು ನಿರ್ಮಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ಶಾಲೆಗಳನ್ನು ನಿರ್ಮಿಸುವ ಬದಲು ಯೋಗ್ಯ ಸ್ಥಳಗಳಲ್ಲಿ ಶಾಲೆಗಳನ್ನು ನಿರ್ಮಿಸಲು ಯೋಚಿಸಲಾಗುವುದು.
ನೀರಿನಲ್ಲಿ ಕೊಚ್ಚಿಹೋದ ಆಟೋ , ಜೀವ ಉಳಿಸಿಕೊಂಡು ಮನೆಗೆ ಬಂದ ಚಾಲಕ
ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಹಾಗೂ ನಿಗದಿ ಹಳ್ಳಗಳು ಇಂದು ತಮ್ಮ ಹರಿವಿನ ಪಥವನ್ನು ಬದಲಾಯಿಸಿಕೊಂಡು ಹರಿಯುತ್ತಿವೆ. ರೈತರು ಹಳ್ಳಗಳನ್ನು ಹೊಲ ಹಾಗೂ ತೋಟಗಳಾಗಿ ಮಾರ್ಪಡಿಸಿದ್ದರಿಂದ, ಈ ರೀತಿಯಲ್ಲಿ ಪ್ರವಾಹ ಉಂಟಾಗುತ್ತಿದೆ. ತುಪ್ಪರಿ ಹಳ್ಳ ಅಭಿವೃದ್ಧಿ ಪಡಿಸಲು 312 ಕೋಟಿ ರೂ.ಗಳ ಟೆಂಡರ್ ಕೂಡ ಕರೆಯಲಾಗಿದೆ. ಬೆಣ್ಣೆ ಹಳ್ಳಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
Bengaluru Rain Updates: ಮಹಾಮಳೆಗೆ ಕಳಚಿತು ಮಹಾನಗರದ ಅಸಲಿ ಮುಖ!
ಮನೆಗಳಿಗೆ ನುಗ್ಗಿದ ಮಳೆ ನೀರು: ಬೆಣ್ಣೆಹಳ್ಳದ ಪ್ರವಾಹದಿಂದ ಕಿರೇಸೂರಿನ ವಿಠೋಭಾ ನಗರದ ಮನೆಗಳು ಸಂಪೂರ್ಣ ಜಲಾವೃತ್ತವಾಗಿವೆ. ಸುಮಾರು 200 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಹೆಬಸೂರಿನ ಶಾಲೆಯ ಆಟದ ಮೈದಾನ, ಕೊಠಡಿಗಳಿಗೆ ನೀರು ನುಗ್ಗಿದೆ. ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಕಂದಕೂರ್, ಕಿರೇಸೂರು ಗ್ರಾಮ ಪಂಚಾಯತ ಅಧ್ಯಕ್ಷ ಸಂಜುರೆಡ್ಡಿ ನೀಲರೆಡ್ಡಿ, ಸದಸ್ಯ ಹನುಮಂತ ಗೌಡ ರಾಯನಗೌಡ್ರ, ಹೆಬಸೂರು ಗ್ರಾಮ ಪಂಚಾಯತ ಅಧ್ಯಕ್ಷೆ ಮಲ್ಲವ್ವ ಕುರುಡಿಕೇರಿ, ಉಪಾಧ್ಯಕ್ಷ ಸಂತೋಷ ಹೊನ್ನಳ್ಳಿ, ಹೆಬಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕಿ ರತ್ನಾ ಗ್ರಾಮಪುರೋಹಿತ್, ಸದಸ್ಯರಾದ ಸುರೇಶ ಹಡಪದ, ಶಿವಾನಂದ ಲದ್ದಿ, ಫಕ್ಕಿರೇಶ ಹಡಪದ, ಸುನೀಲ ಗಣಿ, ಮಂಜುನಾಥ ನಾಗಾವಿ, ಗುರು ರಾಯನಗೌಡ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.