Asianet Suvarna News Asianet Suvarna News

ಕಾರಜೋಳರು ತಮ್ಮ ಡ್ರೈವರ್ ಪಗಾರ ಎಲ್ಲಿಂದ ಕೊಟ್ಟಿದ್ದಾರೆ?: ಸಚಿವ ತಿಮ್ಮಾಪುರ

ರನ್ನ ಸಹಕಾರ ಸಕ್ಕರೆ ಕಾರ್ಖಾನೆ ಗುಜರಿಗೆ ಹೋಗಬಾರದು ಎಂದು ನಾನು ಕೆಲಸ ಮಾಡುತ್ತೇನೆ. ರೈತರು ಹಾಗೂ ಕಾರ್ಮಿಕರ ಹಿತ ಕಾಯಲು ಆದ್ಯತೆ ನೀಡುತ್ತೇ. ನನಗೆ ಒಂದೇ ನಾಲಗೆ ಇದೆ. ನಾನು ಮಾತಾಡಿದ್ದನ್ನು ಮಾಡಿಯೇ ತೀರುತ್ತೇನೆ. ಕಾರ್ಖಾನೆ ಆರಂಭಗೊಳಿಸುವುದೇ ನನ್ನ ಬದ್ಧತೆ ಎಂದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ

Minister RB Timmapur Talks Over Former DCM Govind Karjol grg
Author
First Published Nov 14, 2023, 9:30 PM IST

ಬಾಗಲಕೋಟೆ(ನ.14): ಮುಧೋಳ ತಾಲೂಕಿನ ರನ್ನ ಸಹಕಾರ ಸಕ್ಕರೆ ಕಾರ್ಖಾನೆ ಆರಂಭದಿಂದ ಇಲ್ಲಿಯವರೆಗೆ ₹311.63 ಕೋಟಿ ನಷ್ಟ ಉಂಟಾಗಿದ್ದು ಇದು ಬಿಜೆಪಿಯ ಮಾಜಿ ಸಚಿವ ಗೋವಿಂದ ಕಾರಜೋಳ ಹಾಗೂ ರಾಮಣ್ಣ ತಳೇವಾಡ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಆರೋಪಿಸಿದರು.

ನವನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆ ಆರಂಭದಿಂದ ಇಲ್ಲಿಯವರೆಗೆ ಎಷ್ಟು ಹಗರಣಗಳು ನಡೆದಿವೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಎಲ್ಲ ಸತ್ಯಾಸತ್ಯತೆ ತನಿಖೆ ನಂತರ ಹೊರಬೀಳಲಿದೆ ಎಂದರು.

ಬಾಗಲಕೋಟೆ: ಕಾಲನ್ನೇ ಬಳಸಿ ನೇಕಾರಿಕೆ ಮಾಡೋ ವಿಶೇಷಚೇತನ; ಬೇಕಿದೆ ನೆರವಿನ ಹಸ್ತ!

ಈಗಾಗಲೇ ಕಾರ್ಖಾನೆ ಕಾರ್ಮಿಕರ ಹೆಸರಿನಲ್ಲಿ ಕೋಟ್ಯಾಂತರ ರೂ. ಸಾಲ ಪಡೆದು ನಷ್ಟ ಉಂಟು ಮಾಡಿರುವ ಕುರಿತು ಎಫ್‌ಐಆರ್ ಆಗಿದೆ. ಕೋರ್ಟಿನಲ್ಲೂ ಒಂದು ಕೇಸ್ ನಡೆಯುತ್ತಿದೆ. ಮೂರು ಹಂತದ ತನಿಖೆ ಕೈಗೊಂಡಿದ್ದು, ಎಲ್ಲ ತನಿಖಾ ವರದಿಗಳನ್ನೂ ಕ್ರೋಡೀಕರಣ ಮಾಡಿ ಸೂಕ್ತ ಕ್ರಮವಹಿಸಲಾಗುವುದು. ತಪ್ಪು ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ರನ್ನ ಸಹಕಾರ ಸಕ್ಕರೆ ಕಾರ್ಖಾನೆ ಗುಜರಿಗೆ ಹೋಗಬಾರದು:

ರನ್ನ ಸಹಕಾರ ಸಕ್ಕರೆ ಕಾರ್ಖಾನೆ ಗುಜರಿಗೆ ಹೋಗಬಾರದು ಎಂದು ನಾನು ಕೆಲಸ ಮಾಡುತ್ತೇನೆ. ರೈತರು ಹಾಗೂ ಕಾರ್ಮಿಕರ ಹಿತ ಕಾಯಲು ಆದ್ಯತೆ ನೀಡುತ್ತೇ. ನನಗೆ ಒಂದೇ ನಾಲಗೆ ಇದೆ. ನಾನು ಮಾತಾಡಿದ್ದನ್ನು ಮಾಡಿಯೇ ತೀರುತ್ತೇನೆ. ಕಾರ್ಖಾನೆ ಆರಂಭಗೊಳಿಸುವುದೇ ನನ್ನ ಬದ್ಧತೆ ಎಂದರು.

ಕಾರ್ಖಾನೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಒಂದೊಂದಾಗಿ ದಾಖಲೆ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಗೋವಿಂದ ಕಾರಜೋಳ ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾರ್ಖಾನೆಗೆ ₹14 ಕೋಟಿಗೂ ಹೆಚ್ಚು ನಷ್ಟ ಉಂಟು ಮಾಡಿದ್ದಾರೆ. ಕಾರ್ಖಾನೆ ಬಂದ್ ಆದಾಗ ಕಾರ್ಖಾನೆ ಕಾರ್ಮಿಕರು ಹೋರಾಟ ಮಾಡುವ ಸ್ಥಳಕ್ಕೆ ಬೆಂಕಿ ಹಚ್ಚಿದವರು ಯಾರು, ಕಾರ್ಮಿಕರ ಮೇಲೆ ಕೇಸ್ ಹಾಕಿಸಿದವರು ಯಾರು ಎಂಬುದು ಕಾರಜೋಳ ಸಾಹೇಬರಿಗೆ ಗೊತ್ತಿಲ್ಲವೇ ಎಂದು ತಿಮ್ಮಾಪುರ ಕಾರಜೋಳರನ್ನು ತಿವಿದರು.

ಕಂದಾಯ ವಿಭಾಗಕ್ಕೊಬ್ಬ ಸಿಎಂ ನೇಮಿಸಿ: ಕಾರಜೋಳ ವ್ಯಂಗ್ಯ

ಕಾರಜೋಳರು ತಮ್ಮ ಡ್ರೈವರ್ ಪಗಾರ ಎಲ್ಲಿಂದ ಕೊಟ್ಟಿದ್ದಾರೆ?:

2006ರಿಂದ 2012 ರವರೆಗೆ ಕಾರಜೋಳ ಸಾಹೇಬ್ ತಮ್ಮ ಡ್ರೈವರ್ ಪಗಾರ ಎಲ್ಲಿಂದ ಕೊಟ್ಟಿದ್ದಾರೆ ಎಂಬ ದಾಖಲೆ ನಮ್ಮಲ್ಲಿವೆ. ಶಾಸಕನಾಗಿದ್ದ ಸಂದರ್ಭದಲ್ಲಿ ತಮ್ಮ ಡ್ರೈವರ್‌ ಪಗಾರ ಅನ್ನು ಅವರು ಕಾರ್ಖಾನೆಯಿಂದಲೇ ತೆಗೆದಿದ್ದಾರೆ. ಇದು ರೈತರು ಹಾಗೂ ಕಾರ್ಖಾನೆ ಬಗ್ಗೆ ಕಾರಜೋಳರ ಬದ್ಧತೆಯೇ ಎಂದು ಪ್ರಶ್ನಿಸಿದರು.

ನೀವು ಹಾಗೂ ನಿಮ್ಮ ಮಗ ಏನ್ ಮಾಡಿದ್ದೀರಿ ಎಂಬುದನ್ನು ನೋಡಿರುವ ಮುಧೋಳದ ಜನರು ಚುನಾವಣೆಯಲ್ಲಿ ತಮ್ಮ ತೀರ್ಪು ನೀಡಿದ್ದಾರೆ. ಅದರಿಂದಾಗಿ ಸ್ಥಿತಿಮಿತ ಕಳೆದುಕೊಂಡು ನೀವು ಮನಬಂದಂತೆ ಮಾತನಾಡಬೇಡಿ ಎಂದು ತಿಮ್ಮಾಪು ಸಲಹೆ ನೀಡಿದರು. ಪೀರಪ್ಪ ಮ್ಯಾಗೇರಿ, ವಿಠ್ಠಲ ತುಂಬರಮಟ್ಟಿ, ಕಾಳಪ್ಪ ಕಂಬಾರ, ಪರಮಾನನಂದ ಕುಟರಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು

Follow Us:
Download App:
  • android
  • ios