ಕಂದಾಯ ವಿಭಾಗಕ್ಕೊಬ್ಬ ಸಿಎಂ ನೇಮಿಸಿ: ಕಾರಜೋಳ ವ್ಯಂಗ್ಯ
ಕಾಂಗ್ರೆಸ್‌ನಲ್ಲಿ ನಾಲ್ಕು ಗುಂಪುಗಳಾಗಿವೆ. ಸಿದ್ದರಾಮಯ್ಯನವರದ್ದು ಅಹಿಂದ ಗುಂಪು, ಡಿಕೆ ಶಿವಕುಮಾರದ್ದು ಗೌಡರ ಗುಂಪು, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಮಹಾದೇವಪ್ಪ ಅವರದ್ದು ಇನ್ನೊಂದು ಗುಂಪು, ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಅವರದ್ದು ಮತ್ತೊಂದು ಗುಂಪು. ಹೀಗಾಗಿ, ಕಾಂಗ್ರೆಸ್‌ನವರು ಸಿಎಂ ಸ್ಥಾನವನ್ನು ಪಾಲು ಮಾಡಿಕೊಂಡು ಬಿಡುವುದು ಒಳಿತು ಎಂದು ಕಾಂಗ್ರೆಸ್‌ನ ಕಾಲೆಳೆದ ಕಾರಜೋಳ
ಬಾಗಲಕೋಟೆ(ನ.10): ಕಾಂಗ್ರೆಸ್ ನಲ್ಲಿ ನಾಲ್ಕೈದು ಜನ ಸಿಎಂ ಆಕಾಂಕ್ಷಿಗಳು ಇದ್ದಾರೆ. ಅದಕ್ಕೆ ಕಾಂಗ್ರೆಸ್‌ನವರು ಸಿಎಂ ಸ್ಥಾನವನ್ನು ಪಾಲು ಮಾಡಿಕೊಂಡು ಬಿಡಲಿ. ಹೇಗಿದ್ದರೂ ರಾಜ್ಯದಲ್ಲಿ ನಾಲ್ಕು ಕಂದಾಯ ವಿಭಾಗಗಳಿವೆ. ನಾಲ್ಕೂ ಕಂದಾಯ ವಿಭಾಗಕ್ಕೆ ಒಬ್ಬರಂತೆ ಮುಖ್ಯಮಂತ್ರಿ ನೇಮಿಸಿಬಿಡಲಿ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ನಾಲ್ಕು ಗುಂಪುಗಳಾಗಿವೆ. ಸಿದ್ದರಾಮಯ್ಯನವರದ್ದು ಅಹಿಂದ ಗುಂಪು, ಡಿಕೆ ಶಿವಕುಮಾರದ್ದು ಗೌಡರ ಗುಂಪು, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಮಹಾದೇವಪ್ಪ ಅವರದ್ದು ಇನ್ನೊಂದು ಗುಂಪು, ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಅವರದ್ದು ಮತ್ತೊಂದು ಗುಂಪು. ಹೀಗಾಗಿ, ಕಾಂಗ್ರೆಸ್‌ನವರು ಸಿಎಂ ಸ್ಥಾನವನ್ನು ಪಾಲು ಮಾಡಿಕೊಂಡು ಬಿಡುವುದು ಒಳಿತು ಎಂದು ಕಾರಜೋಳ ಕಾಂಗ್ರೆಸ್‌ನ ಕಾಲೆಳೆದರು.
ನಾಲ್ಕು ಮಾಂಡಲೀಕರ ರೀತಿ ಆಡಳಿತ ನಡೆಸಿದರೆ ಒಳಿತಾಗಬಹುದು!:
ಸತೀಶ್ ಜಾರಕಿಹೊಳಿ ಸಿಎಂ ಆಗಬೇಕೆಂಬ ವಾಲ್ಮೀಕಿ ಸ್ವಾಮೀಜಿ ಹೇಳಿದ್ದು, ಒಂದು ಸಿಎಂ ಸ್ಥಾನ ಎಸ್‌ಸಿಗೆ ಇನ್ನೊಂದು ಎಸ್‌ಟಿಗೆ, ಒಂದು ಗೌಡ್ರಿಗೆ, ಒಂದು ಲಿಂಗಾಯತರಿಗೆ ಈ ರೀತಿ ಪಾಲು ಮಾಡಿಕೊಂಡು ನಾಲ್ಕು ಜನ ಮುಖ್ಯಮಂತ್ರಿಗಳನ್ನು ಮಾಡಿ, ನಾಲ್ಕು ಮಾಂಡಲೀಕರ ರೀತಿ ಆಡಳಿತ ನಡೆಸಿದರೆ ಪ್ರಾಯಶಃ ರಾಜ್ಯಕ್ಕೆ ಒಳ್ಳೆಯ ಆಡಳಿತ ಸಿಗಲಿದೆ ಎಂದು ಕಾರಜೋಳ ಹೇಳಿದರು.
45ಕ್ಕೂ ಹೆಚ್ಚು ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, 40ಕ್ಕೂ ಹೆಚ್ಚು ಕೈ ಶಾಸಕರು ಈ ಸರ್ಕಾರದ ಆಡಳಿತದ ಬಗ್ಗೆ ಅತೃಪ್ತಿಯಿಂದ ಪತ್ರ ಬರೆದಿದ್ದಾರೆ. ಬಿ.ಆರ್.ಪಾಟೀಲ, ಬಸವರಾಜ ರಾಯರೆಡ್ಡಿ, ವಿನಯ ಕುಲಕರ್ಣಿ ಸೇರಿ ಇನ್ನೂ ಅನೇಕ ಅತೃಪ್ತರು ಇದ್ದಾರೆ. ಈ ಸರ್ಕಾರದಲ್ಲಿ ನಮಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಒಂದು ರೂಪಾಯಿ ಅನುದಾನ ಕೂಡ ಕೊಟ್ಟಿಲ್ಲ, ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಲಾಗಿದೆ, ನಮಗೆ ಜನ ಛೀಮಾರಿ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರೇ ಪತ್ರ ಬರೆದಿದ್ದಾರೆ ಎಂದರು.
ಬರೇ ನೀವಷ್ಟೇ ತಿಂದು ತೇಗಿದರೆ ಅಲ್ಲ, ನಾವು ಹೇಳಿದ ಕೆಲಸವನ್ನೂ ಮಾಡಿ ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ, ವರ್ಗಾವಣೆ ದಂಧೆ ಮಾಡಿದ್ದಾಗಿ ಕಾಂಗ್ರೆಸ್ ಶಾಸಕರೇ ತಮ್ಮ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಸ್ವಾತಂತ್ರ್ಯದ ಬಳಿಕ ರಾಜ್ಯದಲ್ಲಿ ಯಾವುದೇ ಸರ್ಕಾರಕ್ಕೂ ಈ ರೀತಿಯ ಹಿನ್ನಡೆ ಆಗಿರಲಿಲ್ಲ. ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಸಿದ್ದರಾಮಯ್ಯ ಸಮರ್ಪಕವಾಗಿ ಬರ ನಿರ್ವಹಣೆ ಮಾಡಲಾಗದೇ ಪರದಾಡುತ್ತಿದ್ದಾರೆ. ನೀಡಿದ ಭರವಸೆಯಂತೆ ನಡೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ನುಡಿದಂತೆ ನಡೆಯಲು ಆಗದಿದ್ದರೆ ಸಿಎಂ ಸಹಿತ ಎಲ್ಲ ಸಚಿವರು ಕುರ್ಚಿ ಖಾಲಿ ಮಾಡಿ ಮನೆಗೆ ಹೋಗುವುದು ಒಳಿತು ಎಂದು ಕಾರಜೋಳ ಆಗ್ರಹಿಸಿದರು.
ತಿಮ್ಮಾಪುರಗೆ ಇವೆ ಎರಡು ನಾಲಗೆ!
ಬಾಗಲಕೋಟೆ ಜಿಲ್ಲೆಯ ರನ್ನ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಲೀಸ್ ಕೊಡುವ ವಿಷಯದ ಕುರಿತು ಮಾತನಾಡಿದ ಗೋವಿಂದ ಕಾರಜೋಳ, ಆರ್.ಬಿ.ತಿಮ್ಮಾಪುರಗೆ ಎರಡು ನಾಲಗೆ ಇವೆ. ನಾನು ಕಟ್ಟಿದ ಫ್ಯಾಕ್ಟರಿಯಲ್ಲಿ ನಾನು ಎರಡು ಹಂಗಾಮಿನವರೆಗೆ ಮಾತ್ರ ಅಧಿಕಾರದಲ್ಲಿ ಮುಂದುವರಿದಿದ್ದೇನೆ. 1999ರಲ್ಲಿ ನಾನು ಸೋತಾಗ ತಿಮ್ಮಾಪುರ ಮಂತ್ರಿಯಾಗಿದ್ದರು. ಆಗ ಎ.ಕೃಷ್ಣಪ್ಪ ಸಕ್ಕರೆ ಸಚಿವರಾಗಿದ್ದರು. ಅವರ ಮುಂದೆ ಹೋಗಿ ನಮ್ಮ ಬಗ್ಗೆ ಆರ್.ಬಿ.ತಿಮ್ಮಾಪುರ ದೂರು ನೀಡಿದ್ದರು. ನಾವೇನೋ ದೊಡ್ಡ ಅಪರಾಧ ಮಾಡಿದ್ದೇವೆ ಎಂಬಂತೆ ಸಚಿವರ ಮುಂದೆ ಆರೋಪಿಸಿದ್ದರು. ಆಗ ಸಚಿವ ಎ.ಕೃಷ್ಣಪ್ಪ ಮತ್ತು ಅಧಿಕಾರಿಗಳು ಖುದ್ದಾಗಿ ಫ್ಯಾಕ್ಟರಿಗೆ ಭೇಟಿ ನೀಡಿ ಅದರ ಕಾರ್ಯಾಚರಣೆ ಕುರಿತು ತನಿಖೆ ಮಾಡಿದ್ದರು. ಆದರೆ, ಮರಳಿ ಹೋಗುವಾಗ ಸಚಿವ ಎ,ಕೃಷ್ಣಪ್ಪ ಅವರು ನನಗೆ ಬೆನ್ನಿಗೆ ಚಪ್ಪರಿಸಿ, ನಿನ್ನಂಥ ದಲಿತ ವ್ಯಕ್ತಿ ಸಹಕಾರ ಕ್ಷೇತ್ರದಲ್ಲಿ ಸಕ್ಕರೆ ಫ್ಯಾಕ್ಟರಿ ಕಟ್ಟಿ ಅದ್ಭುತ ಕೆಲಸ ಮಾಡಬಹುದು ಎಂಬುದನ್ನು ತೋರಿಸಿದ್ದಿಯಾ, ನಿನಗೆ ಅಭಿನಂದನೆ ಎಂದು ನನ್ನನ್ನು ಪ್ರಶಂಶಿಸಿದ್ದರು ಎಂದು ತಿಳಿಸಿದರು.
'ದಲಿತ ಸಿಎಂ ಯಾಕಾಗಬಾರದು' ವಾಲ್ಮೀಕಿ ಸ್ವಾಮೀಜಿ ಹೇಳಿಕೆ; ಕಾಲ ಕೂಡಿ ಬಂದಾಗ ಅವಕಾಶ ಸಿಗುತ್ತೆ ಎಂದ ಸತೀಶ ಜಾರಕಿಹೊಳಿ
ಆದರೆ, ಈ ಅದೇ ತಿಮ್ಮಾಪುರ ಅವರು ತಮ್ಮ ಸರ್ಕಾರದ ಅಧೀನದಲ್ಲಿ ಇರುವ ಅಧಿಕಾರಿಗಳು ಕಾರ್ಖಾನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಕುರಿತು ವರದಿ ನೀಡಿದ್ದರೂ ಏನೂ ಅವ್ಯವಹಾರ ನಡೆದಿಲ್ಲ ಎಂದು ಹೇಳುತ್ತಿದ್ದಾರೆ. ಅಲ್ಲದೇ, ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಮಣ್ಣ ತಳೇವಾಡರನ್ನು ಹೆದರಿಸಿ, ಬೆದರಿಸಿ ತಮ್ಮ ಹತೋಟಿಯಲ್ಲಿ ಇಟ್ಟುಕೊಂಡು ತಮ್ಮ ಕೈಗೊಂಬೆಯಂತೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾರಜೋಳ ಆರೋಪಿಸಿದರು.
ನನ್ನ ಕಾಲದಲ್ಲಿ ಅತ್ಯುತ್ತಮ ಫ್ಯಾಕ್ಟರಿ ಎಂದು ರನ್ನ ಕಾರ್ಖಾನೆ ಹೆಸರು ಪಡೆದಿತ್ತು. ದೇಶದಲ್ಲೇ ಅತಿ ಹೆಚ್ಚು ರಿಕವರಿ ಮಾಡಿದ ಹಿರಿಮೆಗೆ ಫ್ಯಾಕ್ಟರಿ ಪಾತ್ರವಾಗಿತ್ತು. ಆದರೆ, ಈಗಿನ ಸಚಿವ ತಿಮ್ಮಪುರ ರಾಜಕೀಯ ತಮ್ಮ ರಾಜಕೀಯಕ್ಕಾಗಿ ಫ್ಯಾಕ್ಟರಿಯನ್ನು ಹಾಳುಗೆಡುವುತ್ತಿದ್ದಾರೆ ಎಂದು ಕಾರಜೋಳ ಆರೋಪಿಸಿದರು.