ಬೇರೆ ಜಾತಿಯನ್ನು ಎಸ್ಸಿಗೆ ಸೇರ್ಪಡೆ ಪ್ರಶ್ನೆಯೇ ಇಲ್ಲ: ಸಚಿವ ಆಶೋಕ
* ಕಂದಾಯ ಸಚಿವ ಅಶೋಕ ಬಳಿ ಅಹವಾಲು ತೋಡಿಕೊಂಡ ದಲಿತರು
* ಪರಿಶಿಷ್ಟರ ಪಟ್ಟಿಗೆ ಯಾವುದೇ ಜಾತಿ ಸೇರ್ಪಡೆಗೊಳಿಸುವ ಪ್ರಶ್ನೆಯೇ ಇಲ್ಲ
* ಇಂದು ಅಚವೆಯಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ
ಭಟ್ಕಳ(ಏ.14): ಅಂಕೋಲಾದ ಅಚವೆಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಹೋಗಲು ಬರುತ್ತಿದ್ದ ಕಂದಾಯ ಸಚಿವ ಆರ್. ಆಶೋಕ(R Ashok) ಅವರನ್ನು ಪಟ್ಟಣದ ಕೋಟೇಶ್ವರ ನಗರದಲ್ಲಿ ದಲಿತ ಮುಖಂಡರು ಭೇಟಿಯಾಗಿ ತಮ್ಮ ಅಹವಾಲುಗಳನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಸಚಿವರ ಬಳಿ ಮಾತನಾಡಿದ ದಲಿತ ಮುಖಂಡ ತುಳಸಿದಾಸ ಪವಾಸ್ಕರ, ನೈಜ ಪರಿಶಿಷ್ಟರಲ್ಲದವರಿಗೆ ಪರಿಶಿಷ್ಟಜಾತಿ ಪ್ರಮಾಣಪತ್ರ ನೀಡುವುದರಿಂದ ನಮ್ಮ ಹಕ್ಕನ್ನು ಕಸಿದಂತಾಗುತ್ತದೆ. ಕಳೆದ 30 ವರ್ಷಗಳಿಂದ ಪರಿಶಿಷ್ಟ ಜಾತಿ ಸೌಲಭ್ಯವನ್ನು ಪಡೆದು ನಮ್ಮ ಹಕ್ಕುಗಳನ್ನು ಹಗಲು ದರೋಡೆ ಮಾಡಿದ್ದಾರೆ. ಮೀನುಗಾರ ಮೊಗೇರರರು ಪ್ರವರ್ಗ-1ರಲ್ಲಿರುವ ಮೇಲ್ವರ್ಗದವರಾದರೆ, ದಕ್ಷಿಣ ಕನ್ನಡದಲ್ಲಿರುವ ಮೊಲಬೇಟೆಯಾಡುವ ಪ್ರಸ್ತುತ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮೊಗೇರರು ನೈಜ ಪರಿಶಿಷ್ಟರಾಗಿದ್ದಾರೆ. ಪಟ್ಟಿಯಲ್ಲಿ ಸಮಾನಾಂತರ ಹೆಸರಿನಿಂದ ದರುಪಯೋಗಪಡಿಸಿಕೊಳ್ಳಲಾಗಿದೆ ಎಂದರು.
Uttara Kannada: ಕಾರವಾರದಲ್ಲಿ ಮುಸ್ಲಿಮರಿಗೆ ಸುಲಭದಲ್ಲಿ ದೊರೆಯಲ್ಲ ಬಾಡಿಗೆ ಮನೆ
ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್ ಅಶೋಕ, ದಲಿತರ(Dalit) ಕೋಟಾವನ್ನು ಯಾವುದೇ ರೀತಿಯಲ್ಲಿ ದುರುಪಯೋಗವಾಗಲು ಸರ್ಕಾರ ಬಿಡುವುದಿಲ್ಲ. ಈಗಾಗಲೇ ಈ ಕುರಿತು ಸಾಕಷ್ಟು ಚರ್ಚೆಯಾಗಿದೆ. ಸಂವಿಧಾನದಲ್ಲಿರುವ(Constitution) ಅಂಶಗಳನ್ನು ಗಮನಿಸಿದಾಗ ಶೇ.0.01ರಷ್ಟು ಬದಲಾವಣೆ ಮಾಡಲು ನಮಗೆ ಹಕ್ಕಿಲ್ಲ. ಯಾವುದೇ ಸಮುದಾಯವನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸುವುದಕ್ಕೆ ಕೂಡ ಹಕ್ಕಿಲ್ಲದಿರುವಾಗ ಬೇರೆ ಜಾತಿಯನ್ನು ಸೇರಿಸುವ ಪ್ರಶ್ನೆಯೇ ಇಲ್ಲ. ನೀವು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಸಚಿವರೊಂದಿಗೆ ಶಾಸಕ ಸುನೀಲ ನಾಯ್ಕ ಕೂಡ ಉಪಸ್ಥಿತರಿದ್ದರು. ಸಚಿವ ಆರ್. ಅಶೋಕ ಹಾಗೂ ಶಾಸಕ ಸುನಿಲ್ ನಾಯ್ಕ ಅವರು ಹೊರಡುವ ಸಂದರ್ಭದಲ್ಲಿ ದಲಿತರು ಇಬ್ಬರಿಗೂ ಜೈಕಾರ ಕೂಗಿ ಕಳುಹಿಸಿಕೊಟ್ಟರು.
ಇಂದು ಅಚವೆಯಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ
ಕಾರವಾರ: ಕಂದಾಯ ಸಚಿವ ಆರ್.ಅಶೋಕ್ ಏ.15ರಂದು ಅಂಕೋಲಾ(Ankola) ತಾಲೂಕಿನ ಅಚವೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಕಾರವಾರ ಶಾಸಕಿ ರೂಪಾಲಿ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ, ಭಟ್ಕಳ ಶಾಸಕ ಸುನೀಲ ನಾಯ್ಕ ಮತ್ತಿತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಮೀನುಗಾರಿಕೆ ವಾಹನ ಖರೀದಿಗೆ ಸಬ್ಸಿಡಿ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಿದ್ದಾರೆ. ಜತೆಗೆ ಗ್ರಾಮಸ್ಥರೊಂದಿಗೆ ಸಂವಾದ, ಸಮಸ್ಯೆಗಳ ಬಗ್ಗೆ ಅಹವಾಲು ಆಲಿಸಲಿದ್ದಾರೆ.
Uttara Kannada: ಯಾಂತ್ರಿಕೃತ ವ್ಯವಸ್ಥೆ ನಡುವೆಯೂ ರೈತರ ಪಾಲಿಗೆ ಕಹಿಯಾದ ಕಬ್ಬು
ಕಂದಾಯ ಸಚಿವರು ಕುಂಟಗಣಿಯಲ್ಲಿ ಸಭೆ ನಡೆಸಿ, ರಾತ್ರಿ ಹಿಲ್ಲೂರು ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಕಂದಾಯ ಸಚಿವರ ಗ್ರಾಮ ವಾಸ್ತವ್ಯಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದೆ.
ಉತ್ತರ ಕನ್ನಡ(Uttara Kannada) ಜಿಲ್ಲೆಯ ಹೆಮ್ಮೆಯ ಕಲೆಯಾದ ಯಕ್ಷಗಾನ, ಸುಗ್ಗಿ ಕುಣಿತ, ಸಿದ್ದಿ ನೃತ್ಯವನ್ನೂ ಸಚಿವರು ವೀಕ್ಷಿಸಲಿದ್ದಾರೆ. ಕಾರವಾರ ಹಾಗೂ ಅಂಕೋಲಾ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಚವೆ ಗ್ರಾಮ ಅಂಕೋಲಾ ತಾಲೂಕಿಗೆ ಸೇರಿದ್ದರೂ ಶಿರಸಿ, ಅಂಕೋಲಾ, ಕುಮಟಾ, ಯಲ್ಲಾಪುರ ಹಾಗೂ ಕಾರವಾರ ತಾಲೂಕಿನಿಂದ ಹೆಚ್ಚು ಕಡಿಮೆ ಸಮಾನ ಅಂತರದಲ್ಲಿದೆ. ಹಾಲಕ್ಕಿ ಒಕ್ಕಲಿಗರು, ಬ್ರಾಹ್ಮಣರು, ಪರಿಶಿಷ್ಟಪಂಗಡದವರು, ಈಡಿಗರು, ಹಿಂದುಳಿದವರು ಹೀಗೆ ವಿವಿಧ ಜಾತಿಯ ಜನತೆ ಇಲ್ಲಿದ್ದಾರೆ. ಕಂದಾಯ ಸಚಿವರ ಗ್ರಾಮ ವಾಸ್ತವ್ಯದಿಂದ ಹಲವು ಸಮಸ್ಯೆಗಳು ಬಗೆಹರಿಯಲಿವೆ ಎಂಬ ವಿಶ್ವಾಸವನ್ನು ಗ್ರಾಮಸ್ಥರು ಹೊಂದಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಅವರ ಗ್ರಾಮ ವಾಸ್ತವ್ಯಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ನನ್ನ ಕ್ಷೇತ್ರದಲ್ಲಿ ಈ ಗ್ರಾಮ ವಾಸ್ತವ್ಯ ನಡೆಯುತ್ತಿರುವುದು ಸಂತಸಕ್ಕೆ ಕಾರಣವಾಗಿದೆ ಅಂತ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.